ಚನ್ನಪಟ್ಟಣದಲ್ಲಿ ದಳಪತಿ ಹಾಗೂ ಸಿಪಿ ಯೋಗೇಶ್ವರ್ ನಡುವೆ ನಡೆಯುತ್ತಿರೋ ದಂಗಲ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆಕ್ಟೋಬರ್ 1ರಂದು ಚನ್ನಪಟ್ಟಣ ಅಕ್ಷರಶಹಃ ರಣಾಂಗಣವಾಗಿತ್ತು. ಅದರ ಕಾವು ಆರುವ ಮುನ್ನವೇ ಇವತ್ತು ಬಿಜೆಪಿ ಕಾರ್ಯಕರ್ತನ ಮೇಲೆ ಜೆಡಿಎಸ್ ನವರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಅ.4): ಬೊಂಬೆನಗರಿ ಚನ್ನಪಟ್ಟಣದಲ್ಲಿ ದಳಪತಿ ಹಾಗೂ ಸಿಪಿ ಯೋಗೇಶ್ವರ್ ನಡುವೆ ನಡೆಯುತ್ತಿರೋ ದಂಗಲ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆಕ್ಟೋಬರ್ 1ರಂದು ಚನ್ನಪಟ್ಟಣ ಅಕ್ಷರಶಹಃ ರಣಾಂಗಣವಾಗಿತ್ತು. ಅದರ ಕಾವು ಆರುವ ಮುನ್ನವೇ ಇವತ್ತು ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಹೆಚ್ ಡಿಕೆಯ ಆಪ್ತ, ಜೆಡಿಎಸ್ ಮುಖಂಡನ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರಾಜಕೀಯ ದಂಗಲ್ ಮುಂದುವರೆದಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ನಡುವೆ ನಡೆಯುತ್ತಿರೋ ಯುದ್ಧ ಇಂದು ಸಹಾ ಮುಂದುವರೆದಿದೆ. ಬಿಜೆಪಿ ಮುಖಂಡ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದನಹಳ್ಳಿ ನಿವಾಸಿ ಸಿದ್ದೇಗೌಡನ ಎಂಬಾತನ ಮೇಲೆ ಹೆಚ್ ಡಿಕೆ ಪರಮಾಪ್ತ, ಕ್ಲಾಸ್ ಒನ್ ಕಂಟ್ರಾಕ್ಟರ್ ಗೋವಿಂದ್ ಹಳ್ಳಿ ನಾಗರಾಜ್ ಹಾಗೂ ಅವರ ಬೆಂಬಲಿಗಿಂದ ಹಲ್ಲೆ ನಡೆದಿದೆ. ಅಂದಹಾಗೆ ಗೋವಿಂದ್ ಹಳ್ಳಿ ನಾಗರಾಜ್, ಚನ್ನಪಟ್ಟಣ ತಾಲೂಕಿನಲ್ಲಿ ಮಾಡುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದೇಗೌಡ, ಲೋಕೋಪಾಯೋಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದ. ಇದೇ ವಿಚಾರವಾಗಿ ಹಲವು ದಿನಗಳಿಂದ ಇಬ್ಬರ ನಡುವೆ ಜಟಾಪಟಿ ನಡೆಯುತ್ತಿತ್ತು.
ಇವತ್ತು ಚನ್ನಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪಿಬ್ಲ್ಯೂಡಿ ಕಚೇರಿ ಬಳಿ ಇಬ್ಬರು ಮುಖಾಮುಖಿ ಆಗಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು, ನಾಗರಾಜ್ ಹಾಗೂ ಆತನ ಬೆಂಬಲಿಗರು ಸಿದ್ದೇಗೌಡನ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಸಿದ್ದೇಗೌಡ ಗಂಭೀರವಾಗಿ ಗಾಯವಾಗಿದ್ದು, ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯಕ್ಕೆ ರವಾನೆ ಮಾಡಲಾಗಿದೆ. ಇನ್ನು ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವ ವಿಚಾರ ತಿಳಿದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಯೋಗಕ್ಷೇಮ ವಿಚಾರಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಯೋಗೇಶ್ವರ್, ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ರು.
ಅಂದಹಾಗೆ ಆಕ್ಟೋಬರ್ 1ರಂದು ಕಾಮಗಾರಿ ಶಂಕುಸ್ಥಾಪನೆ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಮಾಜಿ ಸಿಎಂ, ಚನ್ನಪಟ್ಟಣ ಶಾಸಕರು ಆದ ಹೆಚ್ ಡಿಕುಮಾರಸ್ವಾಮಿ ಅವರನ್ನ ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಿ ಪಿ ಯೋಗೇಶ್ವೆರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಸಹಾ ಎಸೆದಿದ್ರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಸಹಾ ಮಾಡಿದ್ರು.
ಮಳೆಗೆ ಎಚ್‌ಡಿಕೆ ಕಾರಣರಾದರೆ ಮಳೆಹಾನಿಗೂ ಅವರೇ ಕಾರಣರೆ?: ಸಿ.ಪಿ.ಯೋಗೇಶ್ವರ್
ಒಂದು ರೀತಿ ಚನ್ನಪಟ್ಟಣ ರಣಾಂಗಣವಾಗಿತ್ತು. ಬೂದಿ ಮುಚ್ಚಿದ ಕೆಂಡದ ರೀತಿ ಚನ್ನಪಟ್ಟಣ ಇತ್ತು. ಅದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹೆಚ್ ಡಿ ಕೆ ಆಪ್ತ ನಾಗರಾಜ್ ಹಲ್ಲೆ ಮಾಡಿರುವುದು ಮತ್ತಷ್ಟು ಪರಿಸ್ಥಿತಿ ಬಿಗಾಡಾಯಿಸುವಂತೆ ಮಾಡಿದೆ. ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ಇನ್ನು ಘಟನೆ ಬಗ್ಗೆ ಹಲ್ಲೆ ಮಾಡಿರೋ ಗುತ್ತಿಗೆದಾರ ನಾಗರಾಜ್ ಮಾತನಾಡಿ, ಸಿದ್ದೇಗೌಡ ಬಿಜೆಪಿ ವಕ್ತಾರ ಎಂದು ಹೇಳಿಕೊಂಡು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ.ನಾನೇನೂ ಹಲ್ಲೆ ಮಾಡಿಲ್ಲ. ಆತನೇ ನನ್ನ ಮೇಲೆ ಏಕಾಏಕಿ ಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಸಿಪಿವೈ, ಚನ್ನಪಟ್ಟಣ ಈಗ ಬೂದಿ ಮುಚ್ಚಿದ ಕೆಂಡ!
ಒಟ್ಟಾರೆ ಚನ್ನಪಟ್ಟಣದಲ್ಲಿ ರಾಜಕೀಯ ಜಟಾಪಟಿ ಮುಂದುವರೆದಿದ್ದು, ಬೊಂಬೆನಗರಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಿದೆ.