ರಾಹುಲ್‌ಗಾಂಧಿ 9 ವರ್ಷದ ಹಿಂದೆಯೇ ಹೇಳಿದ್ದ GST ತಪ್ಪನ್ನು ಮೋದಿ ಸರ್ಕಾರ ಈಗ ಸರಿಪಡಿಸಿದೆ; ಎಂ.ಬಿ. ಪಾಟೀಲ

Published : Sep 05, 2025, 07:04 PM IST
India GST Revision

ಸಾರಾಂಶ

ಕೇಂದ್ರ ಸರ್ಕಾರದ ಜಿಎಸ್‌ಟಿ ಅನುಷ್ಠಾನದಲ್ಲಿನ ದೋಷ, ತೈಲ ಬೆಲೆ ಏರಿಕೆ ಹಾಗೂ ಟ್ರಂಪ್ ಅವರ ಸುಂಕದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ EVM ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಸೆ.05): ಕೇಂದ್ರ ಸರ್ಕಾರದ ಜಿ.ಎಸ್.ಟಿ. ಅನುಷ್ಠಾನ ವಿಧಾನದಲ್ಲಿ ದೋಷವಿದೆ ಎಂದು ರಾಹುಲ್ ಗಾಂಧಿ ಕಳೆದ 9 ವರ್ಷಗಳಿಂದ ಹೇಳುತ್ತಾ ಬಂದಿದ್ದರು. ಆದರೆ, ಪ್ರಧಾನಮಂತ್ರಿ ಮೋದಿ ಈವರೆಗೆ ಈ ಬಗ್ಗೆ ಗಮನಹರಿಸದೆ ಈಗ ಅದನ್ನು ಸರಿಪಡಿಸಿದ್ದಾರೆ. ಇದರಿಂದ ಇಷ್ಟು 9 ವರ್ಷಗಳ ಕಾಲ ದೇಶದ ಜನರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವರು ಈ ಉತ್ತರ ನೀಡಿದರು. ಜಿ.ಎಸ್.ಟಿ.ಗೆ ಸಂಬಂಧಿಸಿದಂತೆ ಈಗ ಜಾರಿಗೊಳಿಸಿರುವ 2 ಹಂತಗಳ ನೀತಿ ಸ್ವಾಗತಾರ್ಹ. ಆದರೆ, ಇಷ್ಟು ವರ್ಷಗಳ ಕಾಲ ಜನರು ಸಮಸ್ಯೆಯಲ್ಲಿ ಸಿಲುಕಲು ಪ್ರಧಾನಿ ಮೋದಿ ಅವರ ಧೋರಣೆಯೇ ಕಾರಣ. ರಾಜ್ಯವು ಕಳೆದ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆ ಸೆಳೆಯುವಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳವಾಗಿ ಮುಂದುವರಿಯಬೇಕೆಂಬುದೇ ನಮ್ಮ ಆಶಯವಾಗಿದೆ ಎಂದರು.

ಅಮೆರಿಕ ಅಧ್ಯಕ್ಷ ಟ್ರಂಪ್ ವಿಧಿಸಿರುವ ಸುಂಕವು ನಮ್ಮ ಎಲೆಕ್ಟ್ರಾನಿಕ್ ತಯಾರಿಕೆ, ಔಷಧ ಹಾಗೂ ಸೇವಾ ವಲಯಗಳಿಗೆ ಅನ್ವಯವಾಗದಿರುವುದು ಸಮಧಾನದ ಸಂಗತಿಯಾಗಿದೆ. ಮೋದಿ ಅವರು ಟ್ರಂಪ್ ಅವರನ್ನು ಹೆಚ್ಚಾಗಿಯೇ ಓಲೈಸುತ್ತಿದ್ದರು. ಆದರೂ, ಟ್ರಂಪ್ ಭಾರತದ ಮೇಲೆ ತೆರಿಗೆ ಪ್ರಹಾರ ಮಾಡಿದ್ದಾರೆ. ಈಗ ನಮ್ಮ ಪ್ರಧಾನಿಯವರು ಶೇಕಡಾ 50ರಷ್ಟು ಸುಂಕವನ್ನು ಶೇ.25ಕ್ಕೆ ಇಳಿಸಲು ಅಮೆರಿಕದ ಮೇಲೆ ಒತ್ತಡ ಹೇರಬೇಕು. ಭಾರತದ ಮೇಲಿನ ಟ್ರಂಪ್ ಅವರ ಈ ತೆರಿಗೆ ಪ್ರಹಾರಕ್ಕೆ ಒಂದು ರೀತಿಯಲ್ಲಿ ಮೋದಿ ಅವರ ಓಲೈಕೆ ನೀತಿಯೂ ಕಾರಣವಾಯಿತು ಎಂದರು.

ಇದನ್ನೂ ಓದಿ: ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ, ಆಲ್ಕೋಹಾಲ್‌? ನಿರ್ಮಲಾ ಸೀತಾರಾಮನ್‌ ಕೊಟ್ರು ಶಾಕಿಂಗ್‌ ನ್ಯೂಸ್‌

ಭಾರತವು ಕೆಲವು ವರ್ಷಗಳಿಂದೀಚೆಗೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಇಲ್ಲಿ ಪೆಟ್ರೋಲ್ ಲೀಟರಿಗೆ ರೂ. 65, ಡೀಸೆಲ್ ರೂ. 55, ಅಡುಗೆ ಅನಿಲದ ಬೆಲೆ ಸಿಲಿಂಡರ್ ಗೆ ರೂ 450-500ರ ಆಸುಪಾಸಿನಲ್ಲಿತ್ತು. ಆದರೆ, ಈಗ ಬ್ಯಾರೆಲ್ ಕಚ್ಚಾತೈಲದ ಬೆಲೆ 70 ಡಾಲರ್ ಆಸುಪಾಸಿನಲ್ಲಿದ್ದರೂ ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಬೆಲೆಗಳು ದುಪ್ಪಟ್ಟು ದುಬಾರಿಯಾಗಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂದರೆ, ಕಚ್ಚಾತೈಲದ ಬೆಲೆ ಇಳಿಕೆಯಿಂದ ಉಂಟಾದ ಲಾಭವನ್ನು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರಿಗೆ ವರ್ಗಾಯಿಸಿಯೇ ಇಲ್ಲ. ಇದರ ಒಟ್ಟಾರೆ ಮೌಲ್ಯ ಹತ್ತಾರು ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ನಿಜವಾದ ಜನಪರ ಕಾಳಜಿ ಇದ್ದಿದ್ದರೆ ಪ್ರಧಾನಿಯವರು ಈ ಲಾಭವನ್ನು ಜನರಿಗೆ ವರ್ಗಾಯಿಸಬೇಕಿತ್ತು ಎಂದರು.

ಇವಿಎಂ ದುರ್ಬಳಕೆ ತಪ್ಪಿಸಲು ಬ್ಯಾಲೆಟ್ ಪೇಪರ್ ಜಾರಿ:

ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತು ಪ್ರಸ್ತಾಪಿಸಿ, 'ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ನಡೆಸಬೇಕೆಂಬ ಬಗ್ಗೆ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಹೀಗಾಗಿ, ಇವಿಎಂ ದುರ್ಬಳಕೆ ತಪ್ಪಿಸುವ ಉದ್ದೇಶದಿಂದ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಮತಚಲಾವಣೆ ಮರುಜಾರಿಗೊಳಿಸಿದ್ದೇವೆ. ಆದರೆ, ರಾಜ್ಯ ಹಾಗೂ ರಾಷ್ಟ್ರ ಚುನಾವಣೆಗಳಲ್ಲಿ ಇವುಗಳ ಬಳಕೆ ಬಗ್ಗೆ ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ' ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ