ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಬೇಕೆಂಬ ಅಭಿಲಾಷೆ, ಅಂತಿಮ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ: ಖಂಡ್ರೆ
ರಾಯಚೂರು(ಸೆ. 27): ರಾಹುಲ್ ಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (ಎಐಸಿಸಿ)ಗೆ ಅಧ್ಯಕ್ಷರಾಗಬೇಕು ಎಂಬುವುದು ನಮ್ಮೆಲ್ಲರ ಅಭಿಲಾಷೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ಡಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್ ಗಾಂಧಿ ಅವರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಇಡಿ, ಸಿಬಿಐಗಳ ದುರುಪಯೋಗ ಪಡಿಸಿಕೊಂಡು ದಾಳಿ ನಡೆಸುತ್ತಿದ್ದರು ಸಹ ಅದಕ್ಕೆ ಗಟ್ಟಿಯಾಗಿಯೇ ನಿಂತುಕೊಂಡಿದ್ದಾರೆ. ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿಯು ಸಹ ಅವರಿಗಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾಗಬೇಕು ಎನ್ನುವುದು ನಮ್ಮ ಆಶಯವಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೀಗ ಎಲೆಕ್ಷನ್ ನಡೆಯುತ್ತಿರುವುದರಿಂದ ಅಂತಿಮ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದರು.
ಭ್ರಷ್ಟಾಚಾರಕ್ಕೆ, ಜಾತಿಗೆ ಯಾವುದೇ ರೀತಿಯ ಸಂಬಂಧವಿಲ್ಲ, ಕಾಂಗ್ರೆಸ್‌ನಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಸರಿಯಲ್ಲ. ನಾನು ಸೇರಿ ಅದೇ ಲಿಂಗಾಯತ ಸಮುದಾಯದ ಅನೇಕ ಮುಖಂಡರಿಗೆ ಪಕ್ಷವು ಹುನ್ನತ ಹುದ್ದೆಯನ್ನು ಕಲ್ಪಿಸಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಿಂದ ರಾಯಚೂರು ಜಿಲ್ಲೆಗೆ ಮತ್ತೊಮ್ಮೆ ಅನ್ಯಾಯ
ಈ ಹಿಂದೆ ರಾಜ್ಯದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎನ್ನುವುದಿಲ್ಲ ಆದರೆ ಬಿಜೆಪಿ ಸರ್ಕಾರದಲ್ಲಿರುವ ಹಾಗೆ ಮಿತಿಮೀರಿದ ಭ್ರಷ್ಟಾಚಾರವಿರಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಭ್ರಷ್ಟಾಚಾರ ನಡೆದಿದ್ದಲ್ಲಿ ಅದನ್ನು ಬಿಜೆಪಿ ತನಿಖೆ ನಡೆಸಲಿ. ಅದನ್ನು ಬಿಟ್ಟು ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ಲವೇ ಎಂದು ಹೇಳುತ್ತಾ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಇದೀಗ ರಾಗಾ ನೇತೃತ್ವದಲ್ಲಿ ಸಾಗುತ್ತಿರುವ ಭಾರತ ಐಕ್ಯತಾ ಯಾತ್ರೆಗೆ ಕೇರಳ, ತಮಿಳುನಾಡಿನಲ್ಲಿ ಸಾಕಷ್ಟುಸ್ಪಂದನೆ ಲಭಿಸುತ್ತಿದ್ದು, ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ ಅಲ್ಲಿಯ ಬುದ್ಧಿಜೀವಿಗಳು, ರೈತರು, ಸಾಹಿತಿಗಳು ಸೇರಿ ಹಲವಾರು ಜನರು ಪಕ್ಷಾತೀತವಾಗಿ ಬೆಂಬಲಿಸಿ ಕೈ ಜೋಡಿಸುತ್ತಿದ್ದಾರೆ. ಈ ಯಾತ್ರೆಯು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಹಾದು ಹೋಗುತ್ತಿದ್ದು, ಅ.18 ಇಲ್ಲವೇ 19ರಂದು ಬಳ್ಳಾರಿಗೆ ಆಗಮಿಸಲಿರುವ ಯಾತ್ರೆಯಲ್ಲಿ ಲಕ್ಷಾಂತರ ಜನರು ಸೇರಿಸಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಅ.21 ಅಥವಾ 22 ರಂದು ರಾಯಚೂರಿಗೆ ಆಗಮಿಸಲಿರುವ ಯಾತ್ರೆಯು 51 ಕಿ.ಮೀ. ಸಾಗಲಿದ್ದು, ಈ ವೇಳೆ ರೈತರು, ವ್ಯಾಪಾರಿಗಳು, ಯುವಕರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಡಿ.ಎಸ್.ಹುಲಗೇರಿ, ಆರ್.ಬಸನಗೌಡ ತುರ್ವಿಹಾಳ, ಮುಖಂಡರಾದ ಎನ್.ಎಸ್.ಬೋಸರಾಜು, ಎ.ವಸಂತಕುಮಾರ ಸೇರಿ ಅನೇಕರು ಇದ್ದರು.