‘ಭಾರತ್‌ ಜೋಡೋ’ ಬಳಿಕ ಮತ್ತೆ ಕರ್ನಾಟಕಕ್ಕೆ ರಾಹುಲ್‌ ಗಾಂಧಿ

By Kannadaprabha News  |  First Published Dec 1, 2022, 5:31 AM IST

ಶಿವಮೊಗ್ಗದಲ್ಲಿ ಹಿಂದುಳಿದವರ ಬೃಹತ್‌ ರ‍್ಯಾಲಿ, ಫೆಬ್ರವರಿಯಲ್ಲಿ ಸಮಾವೇಶ ಸಾಧ್ಯತೆ


ಬೆಂಗಳೂರು(ಡಿ.01):  ಭಾರತ್‌ ಜೋಡೋ ಯಾತ್ರೆಗಾಗಿ ರಾಜ್ಯದಲ್ಲಿ 27 ದಿನಗಳ ಕಾಲ ಸಂಚರಿಸಿದ ರಾಹುಲ್‌ ಗಾಂಧಿ ಅವರು ತಮ್ಮ ಈ ಮಹತ್ವಾಕಾಂಕ್ಷಿಯ ಯಾತ್ರೆ ಪೂರ್ಣಗೊಳಿಸುತ್ತಿದ್ದಂತೆಯೇ ಮತ್ತೆ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ಬೃಹತ್‌ ಸಮಾವೇಶವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಅದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶ. ಫೆಬ್ರವರಿಯಲ್ಲಿ ಸಮಾವೇಶ ನಡೆವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಸಂಘಟಿಸಿ ಕಾಂಗ್ರೆಸ್‌ ಪಕ್ಷದ ಪರ ನಿಲ್ಲುವಂತೆ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿರುವ ಕಾಂಗ್ರೆಸ್‌ ಹಿಂದುಳಿದವರ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಈ ಸಮಾವೇಶಕ್ಕಾಗಿ ಈಗಾಗಲೇ ದುಡಿಮೆ ಆರಂಭಿಸಿದ್ದಾರೆ. ಹಿಂದುಳಿದ ವರ್ಗಗಳ ಐಕಾನ್‌ ಎನಿಸಿದ್ದ ಬಂಗಾರಪ್ಪ ಅವರ ಸ್ವಂತ ಜಿಲ್ಲೆ ಶಿವಮೊಗ್ಗದಲ್ಲಿ ಈ ಸಮಾವೇಶವನ್ನು ಆಯೋಜಿಸುವ ಮೂಲಕ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳ ಹಿಂದುಳಿದ ವರ್ಗಗಳನ್ನು ಸೆಳೆಯುವುದು ಸಮಾವೇಶದ ಉದ್ದೇಶ.

Tap to resize

Latest Videos

Karnataka assembly election: ಕೋಟೆ ನಾಡಲ್ಲಿ ಬಿಜೆಪಿಗೆ ಕೈ, ಜೆಡಿಎಸ್‌ ಸವಾಲು

ಈ ಸಮಾವೇಶ ಕೇವಲ ಜನರು ಸೇರುವ ಕಾರ್ಯಕ್ರಮ ಮಾತ್ರವಾಗಬಾರದು ಎಂಬ ಉದ್ದೇಶದಿಂದ ಸಮಾವೇಶದ ಅಂಗವಾಗಿ ದೇಶದಲ್ಲಿ ಹಿಂದುಳಿದ ವರ್ಗವನ್ನು ಕಾಡುತ್ತಿರುವ ಸಮಸ್ಯೆಗಳು, ಅದಕ್ಕೆ ಮಾರ್ಗೋಪಾಯ ಕಂಡುಕೊಳ್ಳಲು ಸಾಧ್ಯವಾಗುವಂತೆ ಚಿಂತಕರು ಹಾಗೂ ಬುದ್ಧಿಜೀವಿಗಳು ಪಾಲ್ಗೊಳ್ಳುವ ವಿಚಾರ ಸಂಕಿರಣವನ್ನು ಆಯೋಜಿಸುವ ಉದ್ದೇಶವೂ ಹಿಂದುಳಿದ ಘಟಕ ಹೊಂದಿದೆ. ಈ ಸಮಾವೇಶಕ್ಕಾಗಿ ಸಿದ್ಧತೆ ಆರಂಭಿಸಿರುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ರಾಜ್ಯಾದ್ಯಂತ ಸಂಚರಿಸಿ ಸಮಾವೇಶಕ್ಕಾಗಿ ಹಿಂದುಳಿದ ವರ್ಗವನ್ನು ಸಂಘಟಿಸುವ ಉದ್ದೇಶ ಹೊಂದಿದ್ದಾರೆ.

ಪಾಲ್ಗೊಳ್ಳಲು ರಾಹುಲ್‌ ಒಪ್ಪಿಗೆ:

ಈ ಮಹತ್ವದ ಸಮಾವೇಶದ ಬಗ್ಗೆ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಹೈಕಮಾಂಡ್‌ನೊಂದಿಗೆ ಚರ್ಚಿಸಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ ರಾಹುಲ್‌ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಭಾರತ್‌ ಜೋಡೋ ಯಾತ್ರೆ ಮುಗಿದ ನಂತರ ಸಮಾವೇಶ ಆಯೋಜಿಸುವಂತೆ ಖುದ್ದು ರಾಹುಲ್‌ ಗಾಂಧಿ ಸಲಹೆ ನೀಡಿದ್ದು, ಅದರಂತೆ ಫೆಬ್ರವರಿ ಮಾಸದ ಎರಡು ಅಥವಾ ಮೂರನೇ ಮಾಸದಲ್ಲಿ ಈ ಸಮಾವೇಶ ಆಯೋಜಿಸುವ ಉದ್ದೇಶವನ್ನು ಆಯೋಜಕರು ಹೊಂದಿದ್ದಾರೆ.
ಈ ಸಮಾವೇಶ ಹಾಗೂ ವಿಚಾರ ಸಂಕಿರಣ ಶಿವಮೊಗ್ಗ ನಗರ ಅಥವಾ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಬದಲಾಗಿ, ಜಿಲ್ಲೆಯ ಮತ್ತೊಂದು ಪ್ರದೇಶದಲ್ಲಿ ಆಯೋಜಿಸುವ ಉದ್ದೇಶ ಮಧು ಬಂಗಾರಪ್ಪ ಅವರಿಗೆ ಇದೆ.
ಈ ಸಮಾವೇಶದ ಯೋಜನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ರಾಜ್ಯದ ಎಲ್ಲ ನಾಯಕರು ಸಹಮತ ವ್ಯಕ್ತಪಡಿಸಿದ್ದು, ರಾಜ್ಯ ಹಾಗೂ ರಾಷ್ಟ್ರದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.

Assembly election: ದೇಶದಲ್ಲಿ ಕಾಂಗ್ರೆಸ್‌ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ

ನನ್ನ ಮೇಲೆ ನಂಬಿಕೆಯಿಟ್ಟು ಮಹತ್ವದ ಹುದ್ದೆಯನ್ನು ನನಗೆ ಕಾಂಗ್ರೆಸ್‌ ಪಕ್ಷ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ ಮಾಸದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚಾರ ಮಾಡಿ ಹಿಂದುಳಿದ ವರ್ಗವನ್ನು ಸಂಘಟಿಸುತ್ತೇನೆ. ಅನಂತರ ಹಿಂದುಳಿದ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡುತ್ತೇನೆ. ಈ ಪ್ರಕ್ರಿಯೆ ವೇಳೆಯೆ ಹಿಂದುಳಿದ ಸಮಾವೇಶಕ್ಕೆ ಅಗತ್ಯ ಸಿದ್ಧತೆಯನ್ನು ನಡೆಸಲಿದ್ದು, ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ ಅಂತ ಕಾಂಗ್ರೆಸ್‌ ಒಬಿಸಿ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿದ್ಧತೆ

- ಕಾಂಗ್ರೆಸ್‌ ಹಿಂದುಳಿದವರ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಮಾವೇಶ
- ಹಿಂದುಳಿದ ವರ್ಗಗಳ ಐಕಾನ್‌ ಎನಿಸಿದ್ದ ಬಂಗಾರಪ್ಪ ಅವರ ಜಿಲ್ಲೆಯಲ್ಲೇ ರ‍್ಯಾಲಿಗೆ ಸಿದ್ಧತೆ
- ಸಮಾವೇಶದಲ್ಲಿ ಬುದ್ಧಿಜೀವಿಗಳಿಂದ ಹಾಗೂ ಚಿಂತಕರಿಂದ ಚಿಂತನ ಗೋಷ್ಠಿಗಳ ಆಯೋಜನೆ
- ಶಿವಮೊಗ್ಗದ ರ‍್ಯಾಲಿಗೂ ಮುನ್ನ ರಾಜ್ಯಾದ್ಯಂತ ಸಂಚರಿಸಿ ಹಿಂದುಳಿದವರ ಸಂಘಟನೆಗೆ ಸಜ್ಜು
- ಐಕ್ಯತಾ ಯಾತ್ರೆ ನಂತರ ರಾರ‍ಯಲಿ ನಡೆಸಿ, ನಾನು ಬರ್ತೇನೆ ಎಂದು ರಾಹುಲ್‌ ಹೇಳಿದ್ದಾರೆ: ಮಧು
 

click me!