ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಶಾಸಕ ಕೆ.ಎಂ.ಉದಯ್‌ ಸೂಚನೆ

By Kannadaprabha News  |  First Published May 31, 2023, 11:59 PM IST

ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಶಾಸಕ ಕೆ.ಎಂ.ಉದಯ್‌ ಪೊಲೀಸರಿಗೆ ಸೂಚನೆ ನೀಡಿದರು. 


ಮದ್ದೂರು (ಮೇ.31): ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಶಾಸಕ ಕೆ.ಎಂ.ಉದಯ್‌ ಪೊಲೀಸರಿಗೆ ಸೂಚನೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳ ಉಗಮ ಸ್ಥಾನ ಏರ್ಪಟ್ಟಿದೆ. ಮರಳು ಮಾಫಿಯಾ, ಜೂಜು ಅಡ್ಡೆಗಳು, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ, ಗಾಂಜಾ ಘಾಟು, ಅಕ್ರಮ ಮದ್ಯ ಮಾರಾಟ ಸೇರಿದಂತೆ ಮತ್ತಿತರ ಚಟುವಟಿಕೆಗಳು ಎಲ್ಲೆ ಮೀರಿದೆ ಎಂದರು.

ಈ ಅಕ್ರಮ ಚಟುವಟಿಕೆಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಪೊಲೀಸರ ಬಗ್ಗೆ ಭಯ ಅನ್ನೋದೆ ಎಲೆಮರೆ ಕಾಯಂತೆ ಇದೆ. ತಪ್ಪು ಮಾಡಿದವರಿಗೆ ದಂಡ ಹಾಕೋದಲ್ಲ. ಠಾಣೆಯಲ್ಲಿ ಬೆದರಿಕೆ ಹಾಕಿ ಕಳಿಸೋದಲ್ಲ. ಇಂತಹ ಚಟುವಟಿಕೆಗಳಿಗೆ ಫುಲ್‌ ಸ್ಟಾಪ್‌ ಇಡಬೇಕು ಎಂದು ಸ್ಪಷ್ಟಸೂಚನೆ ನೀಡಿದರು. ತಾಲೂಕಿನಲ್ಲಿ ಚಿರತೆಗಳ ಹಾವಳಿ ದಿನ ದಿನಕ್ಕೆ ಹೆಚ್ಚುತ್ತಿದೆ. ಜನ ಭಯ ಭೀತಿಯಿಂದ ಬದುಕುವಂತಾಗಿದೆ. ಸಾಕು ಪ್ರಾಣಿಗಳು, ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ರೈತರು ಸಂಕಷ್ಟಪರಿಸ್ಥಿತಿಯಲ್ಲಿದ್ದಾರೆ. ಪರಿಹಾರ ಹಣಕ್ಕಾಗಿ ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅದಷ್ಟು ಚಿರತೆ ಸೆರೆ ಹಿಡಿದು ಕಾಡಿಗೆ ಬಿಡಿ ಅದು ಬಿಟ್ಟು ಪರಿಹಾರ ನೀಡೋದೆ ಮುಂದುವರಿಯಬಾರದು ಎಂದು ಅರಣ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

Tap to resize

Latest Videos

ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

ಅಧಿಕಾರಿಗಳೇ ಜನಸ್ನೇಹಿಯಾಗಿ ಕೆಲಸ ಮಾಡಿ: ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ನೂತನ ಶಾಸಕ ಕೆ.ಎಂ.ಉದಯ್ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕೆಂಬ ಆಶಯ ಹೊಂದಿದ್ದೇನೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಮತ್ತು ಪ್ರಾಮಾಣಿಕತೆ ಮೆರೆಯಬೇಕು ಎಂದರು.

ಈ ಹಿಂದೆ ಕ್ಷೇತ್ರದಲ್ಲಿ ಯಾರು ಆಡಳಿತ ನಡೆಸಿದ್ದರು ಅವರ ಮಾತಿನ ಮರ್ಜಿಗೆ ಅಧಿಕಾರಿಗಳು ಒಳಗಾಗಿ ಯಾವ ರೀತಿ ಕೆಲಸ ಮಾಡಿದ್ದರು ಎಂಬ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಕ್ಷೇತ್ರದ ಜನರು ಚುನಾವಣೆಯಲ್ಲಿ ನಂಬಿಕೆ ವಿಶ್ವಾಸದ ಜೊತೆಗೆ ಅಭಿವೃದ್ಧಿ ಪರ ಬಹಳ ನಿರೀಕ್ಷೆ ಇಟ್ಟುಕೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ. ಇಂತಹ ಜನರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ಜೊತೆಗೆ ಬಡವರಿಗೆ ಸರ್ಕಾರಿ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ಕ್ಷೇತ್ರಾಭಿವೃದ್ಧಿ ಕೇವಲ ಶಾಸಕರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಅಧಿಕಾರಿಗಳ ಸಹಕಾರವೂ ಅತಿ ಮುಖ್ಯವಾಗಿದೆ. ನೀರಾವರಿ, ರಸ್ತೆ, ಕುಡಿಯುವ ನೀರು ಯೋಜನೆ, ಚರಂಡಿ ನಿರ್ಮಾಣ, ಶಾಲಾ ಕಟ್ಟಡ ಮತ್ತು ಶೌಚಾಲಯ ದುರಸ್ತಿ ಸೇರಿದಂತೆ ಯಾವುದೇ ಕಾಮಗಾರಿಗಳಿಗೆ ಅಧಿಕಾರಿಗಳು ಮೊದಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ನಿಗಧಿತ ಅವಧಿಯಲ್ಲಿ ಕಾರ್ಯಯೋಜನೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಸಮಸ್ಯೆ ಇದ್ದರೆ ಪಟ್ಟಿ ಮಾಡಿ: ನಾಳೆಯಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗುತ್ತವೆ. ಶಾಲಾ ಕೊಠಡಿಗಳನ್ನು ಮಾತ್ರ ಸ್ವಚ್ಛ ಮಾಡುವುದಲ್ಲ, ಶೌಚಾಲಯ, ಕುಡಿಯುವ ನೀರಿನ ಟ್ಯಾಂಕ್‌, ಅಡುಗೆ ಪದಾರ್ಥಗಳು, ಶಾಲಾ ಆವರಣಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಯಾವುದಾದರೂ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇದ್ದರೆ ಪಟ್ಟಿಮಾಡಿ ತಿಳಿಸಿದರೆ ಸಾಧ್ಯವಾದಷ್ಟುಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಶಿಫಾರಸು ಮಾಡುವಂತಿಲ್ಲ: ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಬೆಡ್‌ ಸಾಮರ್ಥ್ಯವಿದ್ದರೂ ಸಣ್ಣ ಪುಟ್ಟಚಿಕಿತ್ಸೆಗೆ ಮಂಡ್ಯ, ಮೈಸೂರು ಅಥವಾ ಬೆಂಗಳೂರಿಗೆ ರವಾನಿಸಲಾಗುತ್ತಿದೆ. ಇನ್ನು ಮುಂದೆ ವೈದ್ಯರು ವಿನಾಃಕಾರಣ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವಂತಿಲ್ಲ. ಆದಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಅನಿವಾರ್ಯ ಪರಿಸ್ಥಿತಿ ಬಂದಾಗ ಮಾತ್ರ ಹೊರ ಜಿಲ್ಲೆಗಳಿಗೆ ಕಳುಹಿಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ರವೀಂದ್ರಗೌಡ ಅವರಿಗೆ ತಾಕೀತು ಮಾಡಿದರು.

click me!