Anti Conversion Bill: ದಲಿತರ ಗೌರವಯುತ ಬಾಳ್ವೆಗಾಗಿ ಮತಾಂತರ ನಿಷೇಧ: ಸಿಎಂ

By Kannadaprabha NewsFirst Published Sep 16, 2022, 5:19 AM IST
Highlights
  • ದಲಿತರ ಗೌರವಯುತ ಬಾಳ್ವೆಗಾಗಿ ಮತಾಂತರ ನಿಷೇಧ
  • ಲೋಹಿಯಾ, ಅಂಬೇಡ್ಕರ್‌ ವಾದ ನಂಬುತ್ತೇನೆ
  • ಅಸಮಾನತೆ ತೆಗೆಯಲು ಈ ಕಾಯ್ದೆ ಬೇಕಿದೆ: ಸಿಎಂ

ವಿಧಾನಪರಿಷತ್ತು (ಸೆ.16) : ‘ನಾವು ಸಂವಿಧಾನ ಓದಿಕೊಂಡಿದ್ದು, ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಅಂಶಗಳು ಕಾಯ್ದೆಯಲ್ಲಿಲ್ಲ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ, ಅಧರ್ಮ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಕಾಯ್ದೆ ಪೂರಕವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು (ಮತಾಂತರ ನಿಷೇಧ) ಬಲವಾಗಿ ಸಮರ್ಥಿಸಿಕೊಂಡರು.

 

ಮತಾಂತರ ಮಸೂದೆ ಅಂಗೀಕಾರ, ರಾಜ್ಯಪಾಲರ ಅಂಕಿತ ಒಂದೇ ಬಾಕಿ!

ಮತಾಂತರ ನಿಷೇಧ ಕಾಯ್ದೆ(Prohibition of Conversion Act) ಕುರಿತ ಚರ್ಚೆ ವೇಳೆ ‘ಈ ಕಾಯ್ದೆ ಸಂವಿಧಾನ(Constitution)ಕ್ಕೆ ವಿರುದ್ಧವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯ(Religious freedom) ಕಿತ್ತುಕೊಳ್ಳುತ್ತದೆ’ ಎಂಬ ಕಾಂಗ್ರೆಸ್‌(Congress) ನಾಯಕ ಹರಿಪ್ರಸಾದ್‌(B.K.Hariprasad) ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ‘ನಾನು ಕೂಡ ಸಂವಿಧಾನದ ಪರಿಚ್ಛೇದ 25 ಅನ್ನು ಓದಿದ್ದೇನೆ. ಅದರ ಆಶಯಕ್ಕೆ ಧಕ್ಕೆ ತರುವಂತಹ ಅಂಶಗಳನ್ನು ಕಾಯ್ದೆ ಹೊಂದಿಲ್ಲ. ದಲಿತರು ಮತ್ತಷ್ಟುಗೌರವದಿಂದ ಬದುಕು ನಡೆಸಲು ಈ ಕಾಯ್ದೆ ತರುತ್ತಿದ್ದೇವೆ. ಲೋಹಿಯಾ(Lohia), ಅಂಬೇಡ್ಕರ್‌(Ambedkar) ವಾದವನ್ನು ನಾನು ನಂಬುತ್ತೇನೆ. ಲೋಹಿಯಾ ಸಮಾಜದ ಅಂಕು-ಡೋಂಕುಗಳನ್ನು ತಿದ್ದಲು ಯತ್ನಿಸಿದವರು. ಅಂಬೇಡ್ಕರ್‌ ಹೇಳಿದಂತೆ ಅಸಮಾನತೆ, ಮೂಢನಂಬಿಕೆ, ಅನಿಷ್ಠ ಇವುಗಳನ್ನು ತೆಗೆದು ಹಾಕಬೇಕಾದಲ್ಲಿ ಕಾಯ್ದೆಯ ಅವಶ್ಯಕತೆ ಇದೆ’ ಎಂದರು.

ಧರ್ಮ ಪಾಲನೆಗೆ ತಕರಾರಿಲ್ಲ:

ಕಾಯ್ದೆಯಡಿ ಧರ್ಮ ಪಾಲನೆಗೆ ಯಾವುದೇ ತಕರಾರಿಲ್ಲ. ಹಕ್ಕುಗಳು, ವಿಧಿ-ವಿಧಾನಗಳ ರಕ್ಷಣೆ ಅಷ್ಟೇ ಇದರ ಉದ್ದೇಶ. ಮತಾಂತರ ಮಾಡಬೇಡಿ ಅಂತನೂ ಇದರಲ್ಲಿ ಹೇಳುತ್ತಿಲ್ಲ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ, ಅಧರ್ಮ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಇದು ಪೂರಕವಾಗಿದೆ. ಅಲ್ಲದೇ, 12ನೇ ಶತಮಾನದಲ್ಲಿ ಬಸವಣ್ಣ ದಮನಿತರ ದನಿಯಾಗಿ ಆ ವರ್ಗಗಳಿಗೆ ಸಮಾನ ಅವಕಾಶಗಳನ್ನು ನೀಡಲು ಧರ್ಮದಲ್ಲಿ ಉದಾರೀಕರಣ ತಂದರು. ಈಗಲೂ ಬಸವಣ್ಣ ಪ್ರಸ್ತುತ. ಯಾಕೆಂದರೆ, ಮೂಢನಂಬಿಕೆ, ಅಸಮಾನತೆ ಮತ್ತೆ ಬರುತ್ತಿದೆ. ಅದನ್ನು ಸ್ವಚ್ಛಗೊಳಿಸಲು ಮತಾಂತರ ನಿಷೇಧ ಕಾಯ್ದೆ ಬೇಕು ಎಂದರು.

ಕಾಂಗ್ರೆಸ್‌ನವರದ್ದು ಅರ್ಧಸತ್ಯ:

ಶಿವಮೊಗ್ಗ ಹಾಗೂ ಹುಬ್ಬಳ್ಳಿಗೆ ಪ್ರತ್ಯೇಕ ಸೆಕ್ಷನ್‌ ಹಾಕಲಾಗಿದೆ. ಒಂದೇ ಸಮುದಾಯವನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಅವರು ಯಾವಾಗಲೂ ಅರ್ಧ ಸತ್ಯ ಹೇಳುತ್ತಾರೆ. ಸಂಪೂರ್ಣ ಸತ್ಯ ಮರೆಮಾಚುತ್ತಾರೆ. ಶಿವಮೊಗ್ಗದ ಗಲಾಟೆಗೊಂದು ಸೆಕ್ಷನ್‌, ಹುಬ್ಬಳಿ ಗಲಾಟೆಗೆ ಒಂದು ಸೆಕ್ಷನ್‌ ಹಾಕಲಾಗಿಲ್ಲ. ನೆಲದ ಕಾನೂನಿಗೆ ಅನುಗುಣವಾಗಿ ಕೇಸ್‌ ದಾಖಲಿಸಲಾಗುತ್ತಿದೆ. ಭಯೋತ್ಪಾದಕರ ಪರ ಮಾತನಾಡಬೇಡಿ. ಪ್ರಕರಣಗಳು ಗಂಭೀರತೆ ಅರ್ಥ ಮಾಡಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದರು.

 

Anti Conversion Bill: ಮೇಲ್ಮನೆಯಲ್ಲಿಂದು ಮತಾಂತರ ನಿಷೇಧ ಮಸೂದೆ ಮಂಡನೆ?

ಕಾಂಗ್ರೆಸ್‌ ಹೆಸರು ಹೇಳಿದರೆ ಕತ್ತಲು:

ನಾಗಪುರ ಯೂನಿವರ್ಸಿಟಿಯವರು ಎಂಬ ಹರಿಪ್ರಸಾದ್‌ ಟೀಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ‘ನಾಗ್ಪುರ ಯೂನಿವರ್ಸಿಟಿಯವರು ಬದಲಾಗುವುದಿಲ್ಲ. ಆದರೆ, ಕಾಂಗ್ರೆಸ್‌ನವರು ಬದಲಾಗುತ್ತೀರಿ’ ಎಂದ ತಕ್ಷಣ ಪರಿಷತ್‌ನಲ್ಲಿ ಒಂದು ಕ್ಷಣ ವಿದ್ಯುತ್‌ ಸಂಪರ್ಕ ಏರುಪೇರಾಯಿತು. ಆಗ ನೋಡಿ, ಕಾಂಗ್ರೆಸ್‌ ಹೆಸರು ಹೇಳುತ್ತಿದ್ದಂತೆಯೇ ಕತ್ತಲು ಆವರಿಸಿತು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

click me!