
ಹುಬ್ಬಳ್ಳಿ (ಫೆ.29): ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿರುವುದು ಇದೇ ಮೊದಲು. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಶಕ್ತಿ ಸೌಧದಲ್ಲಿ ಇಂತಹ ದೇಶದ್ರೋಹದ ಕೆಲಸ ಆಗಿರಲಿಲ್ಲ. ಈ ಬಗ್ಗೆ ನಾಸಿರ್ ಹುಸೇನ್ ಅವರನ್ನು ಪತ್ರಕರ್ತರು ಪ್ರಶ್ನಿಸಿದರೆ, ಹಾರಿಕೆ ಉತ್ತರ ನೀಡುವ ಮೂಲಕ ಮಾಧ್ಯಮಗಳ ಮೇಲೆಯೇ ಗೂಂಡಾ ವರ್ತನೆ ತೋರಿದ ಮುಖಂಡನ ವಿರುದ್ಧವೂ ಕ್ರಮ ಕೈಗೊಳ್ಳಬೇಕು.
ಇದು ಕಾಂಗ್ರೆಸ್‌ನ ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು. ಪಾಕಿಸ್ತಾನದ ಮೆಂಟಾಲಿಟಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಅರಿವಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಘನಘೋರ ಸ್ಥಿತಿ ತಲುಪಿದೆ. ಭಾರತದಂತಹ ರಾಷ್ಟ್ರ, ಮೋದಿ ಅವರಂಥ ಪ್ರಧಾನಿ ಬೇಕು ಎಂದು ಸ್ವತಃ ಪಾಕಿಸ್ತಾನದ ಪ್ರಜೆಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ನಮ್ಮ ಅನ್ನ ಉಂಡವರೇ ದೇಶದ್ರೋಹಿ ಘೋಷಣೆ ಕೂಗುತ್ತಿರುವುದು ವಿಪರ್ಯಾಸ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತುಷ್ಟೀಕರಣದ ರಾಜಕಾರಣ ಬಿಟ್ಟು ತಕ್ಷಣ ದೇಶದ್ರೋಹಿಯನ್ನು ಬಂಧಿಸಿ, ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕು. ಇದೇ ವಿಚಾರವಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಕಡಿಮೆ ಆದರೆ, ನೀವೆ ಹೋಣೆ ಆಗುತ್ತೀರಿ. ಈಗಾಗಲೇ ಇಡೀ ದೇಶದಲ್ಲೇ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲೂ ನಿರ್ನಾಮ ಆಗಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಏಕವಚನದಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
ರಾಜೀನಾಮೆ ಕೊಟ್ಟು ಹೋಗಲಿ: ರಾಜ್ಯಸಭೆ ಚುನಾವಣೆಯ ಅಡ್ಡ ಮತದಾನದ ವಿಚಾರವಾಗಿ ಮಾತನಾಡಿದ ಅವರು, ಹಲವು ತಿಂಗಳಿನಿಂದ ಎಸ್.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಮನಸ್ಥಿತಿ ಬೇರೆ ಇತ್ತು. ಅಡ್ಡ ಮತದಾನ ಮಾಡುವ ಯೋಜನೆ ಇದ್ದರೆ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕಿತ್ತು. ಈ ಬಗ್ಗೆ ಬಿಜೆಪಿ ವರಿಷ್ಠರು ಕಾನೂನು ಕ್ರಮಕ್ಕೆ ಮುಂದಾಗಲಿದ್ದಾರೆ. ಅನರ್ಹತೆಯ ಪರಿಣಾಮ ಎದುರಿಸಬೇಕಾಗಿಯೂ ಬರಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.