ದೇಶಕ್ಕಾಗಿ, ಯುವಜನರ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ: ಸಿ.ಟಿ.ರವಿ

By Kannadaprabha News  |  First Published Feb 29, 2024, 4:00 AM IST

ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. 


ಚಿಕ್ಕಮಗಳೂರು (ಫೆ.29): ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಲಕ್ಷ್ಮೀಶನಗರ ಬಡಾವಣೆ ಸಮುದಾಯ ಭವನದಲ್ಲಿ ಬಿಜೆಪಿ ಯುವ ಮೋರ್ಚಾಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮ ಯುವ ಜಾಗೃತಿಯ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ಸಿಕ್ಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರುವ ಸಲುವಾಗಿ ಎರಡೂ ದೇಶಗಳ ನಾಯಕರ ಜೊತೆ ಮಾತನಾಡಿ 48 ಗಂಟೆಗಳ ಕಾಲ ಯುದ್ಧ ನಿಲ್ಲಿಸಿ ವಿಶೇಷ ವಿಮಾನಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದರು ಎಂದರು. 

ಒಬ್ಬ ವಿದ್ಯಾರ್ಥಿ ಆಕಸ್ಮಿಕವಾಗಿ ಸಾವಪ್ಪಿದ್ದಕ್ಕೆ ಮೋದಿ ಕಾರಣ ಎಂದು ವಿರೋಧಿಗಳು ಬೊಬ್ಬೆ ಹೊಡೆದರು, ಆದರೆ 32 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಮೋದಿ ಕಾರಣ, ಅದಕ್ಕಾಗಿ ಮೋದಿ ಬೇಕು ಎಂದು ಹೇಳಿದರು. ಅದೇ ರೀತಿ ಸಿರಿಯಾ, ಇಸ್ರೇಲ್, ಇರಾನ್, ಆಫ್ಘಾನಿಸ್ತಾನಗಳಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆ ತರಲಾಯಿತು. ಅವರೊಂದಿಗೆ ಪಾಕಿಸ್ತಾನ, ಶ್ರೀಲಂಕ ಸೇರಿದಂತೆ ಹಲವು ದೇಶದ ಜನರು ಭಾರತದ ಬಾವುಟ ಹಿಡಿದು ಜೈಕಾರ ಹಾಕುತ್ತ ಸುರಕ್ಷಿತವಾಗಿ ಅವರ ದೇಶಕ್ಕೆ ಮರಳಿದರು. ಈ ಕಾರಣಕ್ಕೆ ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ ಅದಕ್ಕಾಗಿ ಮೋದಿ ಬೇಕು ಎಂದರು.

Latest Videos

undefined

ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಪರವಾಗಿದ್ಯಾ?: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಲಕ್ಷಾಂತರ ಜನ ಸಾಯುತ್ತಾರೆ ಎಂದು ಬೇರೆ ದೇಶದವರು ಮಾತನಾಡಿದರು. ಆದರೆ ಮೋದಿ ಅವರು ನಮ್ಮ ದೇಶದ ಜನರನ್ನು ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಎರಡು ಬಾರಿ ಉಚಿತ ಲಸಿಕೆ ಕೊಡಿಸಿದರು ಎಂದು ಹೇಳಿದರು. ಉಚಿತ ಲಸಿಕೆ ಅಷ್ಟೇ ಅಲ್ಲ. ಆ ಕಷ್ಟದ ಕಾಲದಲ್ಲಿ ಗರೀಬಿ ಕಲ್ಯಾಣ ಯೋಜನೆ ಮೂಲಕ ಸತತವಾಗಿ 10 ಕೆಜಿ ಅಕ್ಕಿ ಕೊಟ್ಟಿದ್ದು ಮೋದಿ. ಈಗ 5 ಕೆಜಿ ಮನೆ ಮನೆಗೆ ಬರುತ್ತಿರುವ ಅಕ್ಕಿ ಸಹ ಮೋದಿ ಕೊಡುತ್ತಿರುವುದು. ಮೋದಿ ಕೊಡುವುದು ಬಂದ್‌ ಆದ್ರೆ, ಒಂದು ಕೆಜಿ ಅಕ್ಕಿ ಕೊಡುವ ಯೋಗ್ಯತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದರು.

ಇಷ್ಟು ಮಾತ್ರವಲ್ಲ ಇಡೀ ಜಗತ್ತಿನ ಉದ್ದಗಲಕ್ಕೆಗೌರವ ಜಾಸ್ತಿ ಆಗಲು ಮೋದಿ ಕಾರಣ. ಜಗತ್ತಿನ ಅತ್ಯಂತ ಪ್ರಭಾವಿ ನಾಯಕ ನಮ್ಮ ಮೋದಿ ಎಂದು ಸರ್ವೆಯಲ್ಲಿ ಪಾಲ್ಗೊಂಡ ಶೇ.78 ರಷ್ಟು ಮಂದಿ ಅನುಮೋದನೆ ಮಾಡಿದ್ದಾರೆ ಅದಕ್ಕಾಗಿ ಮೋದಿ ಬೇಕು ಎಂದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೋತೋಷ್‌ ಕೋಟ್ಯಾನ್ ಮಾತನಾಡಿ, 18 ವರ್ಷ ತುಂಬಿದ ಯುವ ಮತದಾರರನ್ನು ಜೋಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಪಂ, ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯುವಕರು ಇಂದಿನಿಂದಲೇ ಯುವ ಮತದಾರರನ್ನು ಮತಗಟ್ಟೆಗೆ ಕರೆ ತಂದು ಬಿಜೆಪಿಗೆ ಮತದಾನ ಮಾಡಿಸುವ ಸಂಬಂಧ ಕಾರ್ಯಚಟುವಟಿಕೆ ಆರಂಭಿಸಬೇಕು ಎಂದು ಹೇಳಿದರು.

ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಏಕವಚನದಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆ ದೇಶವನ್ನು ಗೆಲ್ಲಿಸುವ ಚುನಾವಣೆ, ಕಳೆದ 10 ವರ್ಷಗಳಿಂದ ದೇಶ ಕಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದಣಿವರಿಯದೆ ಕೆಲಸ ಮಾಡಿದ್ದಾರೆ. ದೇಶವನ್ನು ಇನ್ನಷ್ಟು ಉನ್ನತ ಸ್ಥಿತಿಗೆ ಕೊಂಡೊಯ್ಯುವ ಸಲುವಾಗಿ ಯುವ ಮತದಾರರು ಮತ್ತೊಮ್ಮೆ ತಮ್ಮ ಬೂತ್‌ಗಳಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳನ್ನು ತಂದುಕೊಡುವ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಉಮಾದೇವಿ ಕೃಷ್ಣಪ್ಪ, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್ ಸೇರಿದಂತೆ ಸ್ಥಳೀಯ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು. ಪುನೀತ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.

click me!