
ವಿಧಾನಸಭೆ (ಫೆ.29): ರಾಜ್ಯದ ಯಾವುದೇ ಮೂಲೆಯಲ್ಲಿಯೂ ಪಾಕಿಸ್ತಾನ ಪರವಾಗಿ ಘೋಷಣೆಗಳು ಕೂಗಿ ದೇಶಕ್ಕೆ ಅವಮಾನ ಮಾಡಿದರೆ, ಅಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಶ್ವಾಸನೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜ್ಯಸಭಾ ಚುನಾವಣೆ ಬಳಿಕ ವಿಜಯೋತ್ಸವದ ವೇಳೆ ನಡೆದಿದೆ ಎನ್ನಲಾದ ಘಟನೆ ಒಂದೇ ಅಲ್ಲ. ರಾಜ್ಯದ ಯಾವ ಕಡೆಯಲ್ಲಾದರೂ ಪಾಕಿಸ್ತಾನ ಪರ ಯಾರೇ ಘೋಷಣೆ ಕೂಗಿದರೂ ಅಂತಹವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.
ಆರೋಪ ಕೇಳಿಬಂದ ಕೂಡಲೇ ಸ್ವಯಂ ದೂರು ದಾಖಲಿಸಲಾಗಿದೆ. ಬಿಜೆಪಿಯವರು ಈ ಸಂಬಂಧ ನೀಡಿರುವ ದೂರನ್ನು ಸಹ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಸ್ವಯಂ ದೂರು ದಾಖಲಿಸಿಲ್ಲ ಎಂಬ ಬಿಜೆಪಿ ಆರೋಪ ಸರಿಯಲ್ಲ. ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ವಿಚಾರದಲ್ಲಿ ನಡೆದ ಚರ್ಚೆಯಲ್ಲಿ ರಾಜಕೀಯದ ಕಡೆ ಹೋಗುತ್ತಿದ್ದೇವೆ ಎನ್ನಿಸುತ್ತಿದೆ. ರಾಜಕೀಯ ಕಾರಣಕ್ಕಾಗಿ ಗಂಭೀರ ವಿಚಾರ ಬಳಕೆ ಮಾಡಬಾರದು. ನೈಜ ಪರಿಸ್ಥಿತಿ ಆಧರಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಚರ್ಚಿಸಿದರೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ತಡೆಯಬಹುದು ಎಂದರು.
ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಏಕವಚನದಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಜಯ್ ಮಾಕನ್, ಸಯ್ಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ನಾರಾಯಣ ಸಾ ಭಾಂಡಗೆ ಚುನಾಯಿತರಾಗಿದ್ದಾರೆ. ಆ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಯ್ಯದ್ ನಾಸೀರ್ ಹುಸೇನ್ ಅವರು ವಿಧಾನಸೌಧಕ್ಕೆ ಬರಲು 25 ಜನರಿಗೆ ಅನುಮತಿ ಪಡೆದಿದ್ದರು. ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಬಗ್ಗೆ ಆರೋಪ ಮಾಡಲಾಗಿದೆ. ಆದರೆ, ಆ ಬಗ್ಗೆ ಸತ್ಯಸತ್ಯತೆಯನ್ನು ವೈಜ್ಞಾನಿಕವಾಗಿ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ವರದಿ ಬಂದ ತಕ್ಷಣ ಒಂದು ಕ್ಷಣವೂ ತಡ ಮಾಡದೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ, ಯಾರನ್ನೂ ಸಹ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.