ಸಿದ್ದು ಆಯ್ತು, ಈಗ ಡಿಕೆಶಿ ಶೋ: 1 ಲಕ್ಷ ಜನರನ್ನು ಸೇರಿಸಲು ಸಿದ್ಧತೆ..!

By Kannadaprabha News  |  First Published Aug 9, 2022, 6:34 AM IST

ಆ.15ಕ್ಕೆ ಬೆಂಗಳೂರಲ್ಲಿ ಕಾಂಗ್ರೆಸ್‌ 75 ಕಿಮೀ ಸ್ವಾತಂತ್ರ್ಯ ನಡಿಗೆ, ಪ್ರಿಯಾಂಕಾ ಗಾಂಧಿ ಭಾಗಿ
 


ಬೆಂಗಳೂರು(ಆ.09):   ಅದು ಸಿದ್ದರಾಮೋತ್ಸವ ಎಫೆಕ್ಟೋ ಅಥವಾ ‘ಬಿಜೆಪಿಯ ಹರ್‌ ಘರ್‌ ತಿರಂಗಾ’ಕ್ಕೆ ಎದಿರೇಟೋ ಗೊತ್ತಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ವಾತಂತ್ರ್ಯ ದಿನವಾದ ಆ.15ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಾಗೂ ಪಾದಯಾತ್ರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಭಾರಿ ಸಿದ್ಧತೆ ನಡೆಸಿದ್ದಾರೆ. ಅದು ಯಾವ ಮಟ್ಟಿಗೆ ಇದೆ ಎಂದರೆ ಇದೇ ಮೊದಲ ಬಾರಿಗೆ ಹೈಕಮಾಂಡ್‌ ವರಿಷ್ಠೆ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರಿಗೆ ಕರೆಸಿ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸ್ವಾಭಿಮಾನ ಪ್ರತೀಕವಾಗಿರುವ ಪಾದಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ ದೂರ ಹೆಜ್ಜೆ ಹಾಕಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲು ತೀರ್ಮಾನಿಸಿ, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ನಾಯಕರು ಪಾದಯಾತ್ರೆ ಆರಂಭಿಸಿದ್ದಾರೆ. ಇದರ ಅಂತಿಮ ಚರಣ ಆ. 15ರಂದು ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಅದಕ್ಕೆ ಅಭೂತಪೂರ್ವ ಕಾರ್ಯಕ್ರಮದ ಸ್ವರೂಪ ನೀಡಲು ಸಕಲ ಸಿದ್ಧತೆಯನ್ನು ಡಿ.ಕೆ. ಶಿವಕುಮಾರ್‌ ನಡೆಸಿದ್ದಾರೆ.

Tap to resize

Latest Videos

ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದವರನ್ನೆಲ್ಲ ಜೈಲಿಗೆ ಹಾಕಲಾಗುತ್ತಿದೆ: ರಾಹುಲ್‌ ಗಾಂಧಿ

1 ಲಕ್ಷ ಜನ:

ಈ ಕಾರ್ಯಕ್ರಮದ ಅಂಗವಾಗಿ ಆ. 15ರಂದು ಮಧ್ಯಾಹ್ನ 2.30ಕ್ಕೆ ಸುಮಾರು 1 ಲಕ್ಷ ಜನರು ರಾಷ್ಟ್ರಧ್ವಜ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದವರೆಗೂ ಪಾದಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯ ನೇತೃತ್ವ ವಹಿಸುವಂತೆ ಪ್ರಿಯಾಂಕಾ ಗಾಂಧಿ ಅವರ ಮನವೊಲಿಸಲಾಗಿದೆ. ಕಾಂಗ್ರೆಸ್‌ ಉನ್ನತ ಮೂಲಗಳು ಇದನ್ನು ಖಚಿತಪಡಿಸಿದ್ದು, ಪ್ರಿಯಾಂಕಾ ಗಾಂಧಿ ಅವರು ಆ. 15ರಂದು ನಗರಕ್ಕೆ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

ಭಾಷಣ ಇಲ್ಲ, ಹರಿಹರನ್‌ ಗಾಯನ, ಸನ್ಮಾನ:

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗರಲಿದೆ. ಅದರ ವಿಶೇಷವೆಂದರೆ, ಈ ಕಾರ್ಯಕ್ರಮದಲ್ಲಿ ಯಾವುದೇ ನಾಯಕರ ಭಾಷಣವಿರುವುದಿಲ್ಲ. ಬದಲಾಗಿ, ಖ್ಯಾತ ಬಾಲಿವುಡ್‌ ಗಾಯಕ ಹರಿಹರನ್‌ ಅವರ ಸಂಗೀತವಿರುತ್ತದೆ. ಜತೆಗೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಣ್ಯರ ಸನ್ಮಾನ ನಡೆಯಲಿದೆ. ಪಾದಯಾತ್ರೆ ಹಾಗೂ ನ್ಯಾಷನಲ್‌ ಕಾಲೇಜು ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಪಕ್ಷದ ಪ್ರತಿಯೊಬ್ಬ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷಾತೀತ ಕಾರ‍್ಯಕ್ರಮ

ಆ.15 ರಂದು ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. 1 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ವರ್ಗದ ಜನರು ಕುಟುಂಬ ಹಾಗೂ ಸ್ನೇಹಿತರ ಸಮೇತ ಭಾಗವಹಿಸಬಹುದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. 
 

click me!