
ಹುಬ್ಬಳ್ಳಿ (ಜು.07): ಎಐಸಿಸಿ ಹಿಂದುಳಿದ ವರ್ಗಗಳ ಕಮಿಟಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ. ಅವರು ಸಿಎಂ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜ್ಯದ ಮುಖ್ಯಮಂತ್ರಿಗಳು 5 ವರ್ಷ ನಾನೇ ಸಿಎಂ ಎಂದು ಹೇಳಿಕೆ ನೀಡುತ್ತಿಲ್ಲ. ಆದರೆ, ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದಾರೆ.
ಪಕ್ಷದೊಳಗೆ ಸಮಸ್ಯೆ ಇರುವುದರಿಂದಲೇ ಅವರು ಹಾಗೇ ಹೇಳುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಾವೇ ಮುಂದಿನ ಸಿಎಂ ಎಂದು ಅಂತರಿಕವಾಗಿ ಹೇಳುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿಯೇ ಪಕ್ಷದ ನಾಯಕರನ್ನು ಸಂಭಾಳಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರಕ್ಕೆ ಹೋಗಿ ಏನ್ ಮಾಡ್ತಾರೆ?. ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ಈ ಸಂದರ್ಭದಲ್ಲಿ ನೇಮಿಸುವ ಉದ್ದೇಶವಾದ್ರು ಏನಿತ್ತು?. ಮುಖ್ಯಮಂತ್ರಿ ಸ್ಥಾನ ತ್ಯಜಿಸಿ, ದೆಹಲಿಗೆ ಬನ್ನಿ ಎಂಬ ಸಂದೇಶ ರವಾನಿಸಿದಂತಿದೆ. ಏನೇ ಆಗಲಿ ಅವರಿಗೆ ಒಳ್ಳೆಯದಾಗಲಿ ಎಂದರು.
ಮಾಫಿಯಾಕ್ಕೆ ಕಡಿವಾಣ ಹಾಕಿ: ಮಾದಕ ಪದಾರ್ಥ, ನಿಷೇಧಿತ ಡ್ರಗ್ಸ್ ಮಾಫಿಯಾದ ಸದ್ದು ಕೇಳಿ ಬರುತ್ತಿದೆ. ಪೊಲೀಸ್ ಅಧಿಕಾರಿಗಳು ಪೆಡ್ಲರುಗಳನ್ನು ನಿರ್ದಾಕ್ಷಿಣ್ಯವಾಗಿ ಹತೋಟಿಗೆ ತರಲು ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಮತ್ತು ಅಮೃತ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಕೊಲೆ ಸುಲಿಗೆಗಳಂತಹ ಅಹಿತಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಿಗ್ಗಾಂವಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೊಲೆ ಘಟನೆ ಗಾಂಜಾ ವ್ಯಸನಿಗಳಿಂದ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಯವರು ಪೊಲೀಸ್ ಅಧಿಕಾರಿಗಳಿಗೆ ಕಠಿಣ ಕಾನೂನು ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಿದರು. ಶೀಘ್ರದಲ್ಲಿ ರಸ್ತೆಗಳನ್ನು ದುರಸ್ತಿಪಡಿಸಿ. ನವೆಂಬರ್ ತಿಂಗಳು ಮುಗಿಯುವುದರ ಒಳಗಾಗಿ ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ಮನೆ ಮನೆಗೆ ನೀರು ಒದಗಿಸುವ ಅಮೃತ ಯೋಜನೆ ಪೂರ್ಣಗೊಳ್ಳಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.