
ಕೊಪ್ಪಳ (ಜು.06): 'ನಮಗೆ ಅಕ್ಕಿ ಬೇಡ, ಗ್ಯಾರಂಟಿ ಬೇಡ ಅಂತಾ ಫಿಕ್ಸ್ ಆಗಿ ಹೇಳಿ, ನಾವು ಅದೇ ಹಣದಲ್ಲಿ ಹಳ್ಳಿಗೆ ರಸ್ತೆ ಮಾಡಿಸ್ತೀವಿ' ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಕೊಟ್ಟ ವಿವಾದಾತ್ಮಕ ಹೇಳಿಕೆ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಯಾರವಣಿಕೆಯಲ್ಲಿ ಆಯೋಜಿಸಿದ್ದ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ, ಊರಿನ ಗ್ರಾಮಸ್ಥರು ಮಹಿಳೆಯರಿಗೆ ಸರ್ಕಾರದಿಂದ ಗೃಹಲಕ್ಷ್ಮಿ ಹಣವನ್ನು ಕೊಡುತ್ತಿದ್ದೀರಿ. ಪುರುಷರಿಗೆ ಜಮೀನಿಗೆ ಹೋಗಲು ಹಳ್ಳಿಯ ರಸ್ತೆಗಳನ್ನು ಮಾಡಿಸಿಕೊಡಿ ಎಂದು ವೇದಿಕೆ ಮುಂದಿದ್ದವರು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ ಅವರು, 'ನಮಗೆ ಗ್ಯಾರಂಟಿಗಳು ಬೇಡ, ಸರ್ಕಾರ ಕೊಡುವ ಅಕ್ಕಿ ಬೇಡವೆಂದು ಹೇಳಿ, ಆ ಹಣದಲ್ಲಿ ನಿಮ್ಮೂರಿಗೆ ರಸ್ತೆ ಮಾಡಿಸಿಕೊಡುತ್ತೇವೆ. ನಮ್ಮ ಗ್ರಾಮೀಣ ಭಾಗದ ಜನರು ಗ್ಯಾರಂಟಿಗಳು ಬೇಡವೆಂದು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಡುತ್ತೇನೆ' ಎಂದರು. ಆಗ ಜನರು ಹಾಗೆ ಮಾಡಬೇಡಿ ಎಂದು ಹೇಳಿದರು. ನಾನು ಹೇಳಿದ್ದು ತಮಾಷೆಗೆ ಎನ್ನುತ್ತಾ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರ ಮಾತಿನ ಮರ್ಮವನ್ನು ವಿಶ್ಲೇಷಣೆ ಮಾಡಲಾಗಿದೆ.
ಗ್ರಾಮೀಣ ಜನರ ಬೇಡಿಕೆಗೆ ಸ್ಪಂದಿಸಿದ ರಾಯರೆಡ್ಡಿ ಅವರು, ಮುಂದಿನ ದಿನಗಳಲ್ಲಿ ನಿಮ್ಮೂರಿಗೆ ಉತ್ತಮವಾದ ರಸ್ತೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಮೂಲಕ ತಾವು ಮಾತನಾಡಿದ್ದು, ತಮಾಷೆಗೆ ಎಂಬುದನ್ನು ಕೂಡ ಜನರಿಗೆ ತಿಳಿಸಿದರು. ಜೊತೆಗೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಉಪಯೋಗ ಆಗುತ್ತಿವೆ ಎಂಬುದನ್ನೂ ಮನವರಿಕೆ ಮಾಡಿಕೊಂಡರು.
ನಮ್ಮ ಸರ್ಕಾರ ಜನರಿಗೆ ನೀಡುತ್ತಿರುವ ಹಲವು ಅಭೀವೃದ್ಧಿ ಯೋಜನೆಗಳಿಗೆ 1.24 ಲಕ್ಷ ಕೋಟಿ ರೂ. ಹಣವನ್ನು ಖರ್ಚು ಮಾಡುತ್ತಿದ್ದೇವೆ. ಇನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ನೇರವಾಗಿ 54 ಸಾವಿರ ಕೋಟಿ ರೂಪಾಯಿ ನೀಡುತ್ತಿದ್ದೇವೆ. ಬರುವ ದಿನಗಳಲ್ಲಿ ರಸ್ತೆಗಳಿಗೂ ಹಣ ನೀಡುತ್ತೇವೆ. ಹಳ್ಳಿ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.