ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸತತ ಸಭೆ ಮೂಲಕ ರೂಪುರೇಶೆ ಸಿದ್ಧಪಡಿಸಿದೆ. ಇದರ ಬೆನ್ನಲ್ಲೇ ಇದೀಗ ನಾಲ್ಕು ರಾಜ್ಯಗಳಿಗೆ ಚುನಾವಣೆ ಉಸ್ತುವಾರಿ ನಾಯಕರ ಘೋಷಣೆ ಮಾಡಲಾಗಿದೆ. ನೂತನ ಜವಾಬ್ದಾರಿ ವಹಿಸಿಕೊಂಡ ನಾಯಕರ ಪಟ್ಟಿ ಇಲ್ಲಿದೆ.
ನವದೆಹಲಿ(ಜು.07) ಕರ್ನಾಟಕ ವಿಧಾನಸಭೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹಾಗೂ ಉಳಿಸಿಕೊಳ್ಳಲು ಈಗಿನಿಂದಲೇ ತಯಾರಿ ಆರಂಭಿಸಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿತ್ತು. ಇದೀಗ 4 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿ ನೇಮಕ ಮಾಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಚತ್ತೀಸಘಡ ರಾಜ್ಯಕ್ಕೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಈ ಮೂಲಕ ವಿಧಾನಸಭಾ ಚುನಾವಣಾ ಅಖಾಡಕ್ಕೆ ಪೂರ್ವತಯಾರಿಯೊಂದಿಗೆ ಧುಮುಕಿದೆ.
4 ರಾಜ್ಯಗಳ ನೂತನ ಚುನಾವಣಾ ಉಸ್ತುವಾರಿ
ಮಧ್ಯಪ್ರದೇಶ:ಭೂಪೇಂದ್ರ ಯಾದವ್
ರಾಜಸ್ಥಾನ:ಪ್ರಹ್ಲಾದ್ ಜೋಶಿ
ತೆಲಂಗಾಣ ಪ್ರಕಾಶ್ ಜಾವಡೇಕರ್
ಚತ್ತೀಸಘಡ: ಒಮ್ ಮಥೂರ್
ಅಧಿವೇಶನ ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ: ಬಿಎಸ್‌ವೈ
ಮಧ್ಯಪ್ರದೇಶ ಚುನಾವಣಾ ಉಸ್ತುವಾರಿಯಾಗಿ ಭೂಪೇಂದ್ರ ಯಾದವ್ ನೇಮಕವಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಹಾಗೂ ಗುಜರಾತ್ ರಾಜ್ಯದ ಉಸ್ತುವಾರಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಭೂಪೇಂದ್ರ ಯಾದವ್‌ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಾಥ್ ನೀಡಲಿದ್ದಾರೆ. ಇನ್ನು ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಕೈಯಿಂದ ಅಧಿಕಾರ ಪಡೆಯಲು ಭಾರಿ ರಣತಂತ್ರ ರೂಪಿಸಬೇಕಿದೆ. ಹೀಗಾಗಿ ರಾಜಸ್ಥಾನದ ಉಸ್ತುವಾರಿ ಹೊಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ನೀಡಲಾಗಿದೆ. ಜೋಶಿಗೆ ಬಿಜೆಪಿ ನಾಯಕರಾದ ನಿತಿನ್ ಪಟೇಲ್ ಹಾಗೂ ಕುಲ್ದೀಬ್ ಬಿಶ್ಣೋಯ್ ಸಾಥ್ ನೀಡಲಿದ್ದಾರೆ.
ತೆಲಂಗಾಣ ಚುನಾವಣಾ ಉಸ್ತುವಾರಿಯಾಗಿ ಮಾಜಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ನೇಮಕ ಮಾಡಲಾಗಿದೆ. ಸುನಿಲ್ ಜಖಾರ್ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ. ಚತ್ತೀಸಘಡ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ನಾಯಕ ಒಮ್ ಮಥೂರ್ ನೇಮಕ ಮಾಡಲಾಗಿದೆ. ಇವರಿಗೆ ಕೇಂದ್ರ ಸಚಿವ ಮನ್ಸುಕ್ ಮಾಂಡಿವಾಯ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ.
ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ಕರ್ನಾಟಕ ಹೊರತಪಡಿಸಿ ನಾಲ್ಕು ರಾಜ್ಯಗಳಿಗೆ ರಾಜ್ಯಾಧ್ಯಕ್ಷರ ನೇಮಕ ಮಾಡಿತ್ತು. ಕಿಶನ್ ರೆಡ್ಡಿ ತೆಂಗಾಣ ಬಿಜೆಪಿ ಅಧ್ಯಕ್ಷ, ಸುನಿಲ್ ಜಾಖಡ್ ಪಂಜಾಬ್ ಬಿಜೆಪಿ ಅಧ್ಯಕ್ಷ, ಬಾಬುಲಾಲ್ ಮರಾಂಡಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಹಾಗೂ ಡಿ.ಪುರಂದೇಶ್ವರಿ ಅವರನ್ನು ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದೇ ವೇಳೆ, ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣಕ್ಕೆ ಇಟೆಲ ರಾಜೇಂದರ್ ಅವರನ್ನು ಚುನಾವಣಾ ಉಸ್ತುವಾರಿ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ಬಿಜೆಪಿಗೆ ಮಹಿಳಾ ಸಾರಥ್ಯ? ಉಳಿದ ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರ ಘೋಷಣೆ!
ರಾಜ್ಯಾಧ್ಯಕ್ಷರ ನೇಮಕದಲ್ಲಿ ವಲಸಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಜಾಖಡ್ ಹಾಗೂ ರಾಜೇಂದರ್ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಪುರಂದೇಶ್ವರಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದರು. ರಾಜ್ಯಾಧ್ಯಕ್ಷರು ಬದಲಾವಣೆಯಾಗಿರುವ ನಾಲ್ಕು ರಾಜ್ಯಗಳಲ್ಲಿ ಒಟ್ಟು 69 ಲೋಕಸಭಾ ಸ್ಥಾನಗಳಿವೆ.