• ವಾಯುವ್ಯ ಶಿಕ್ಷಕರ, ಕಾಂಗ್ರೆಸ್ ಕ್ಷೇತ್ರದ 'ಕೈ' ಅಭ್ಯರ್ಥಿಗಳ ನಾಮಪತ್ರ
• ಪ್ರಕಾಶ್ ಹುಕ್ಕೇರಿಗೆ ನೂರಾರು ಜನ ನಾಯಕರ ಸೃಷ್ಟಿಸೋ ಶಕ್ತಿ ಇದೆ ಎಂದ ಡಿಕೆಶಿ
• ಪ್ರಕಾಶ್ ಹುಕ್ಕೇರಿಗೆ ಸರ್ಟಿಫಿಕೇಟ್ ಬೇಕಿಲ್ಲ, ಒಳ್ಳೆಯ ಕೆಲಸಗಾರ ಅಂತಾ ಪ್ರೂವ್ ಮಾಡಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.25): ಜೂನ್ 13ರಂದು ವಾಯುವ್ಯ ಶಿಕ್ಷಕ ಹಾಗೂ ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಚುನಾವಣಾ ಅಖಾಡ ರಂಗೇರಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಕ್ಷೇತ್ರ ವ್ಯಾಪ್ತಿ ಹೊಂದಿರುವ ವಾಯುವ್ಯ ಶಿಕ್ಷಕ, ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತಾದರೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎರಡೂವರೆ ಗಂಟೆ ತಡವಾಗಿ ಅಗಮಿಸಿದ್ರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೋವರೆಗೂ ಸ್ಥಳೀಯ ಮುಖಂಡರು ಭಾಷಣ ಮಾಡಿದರು.
ಇದೇ ವೇಳೆ ಭಾಷಣ ಮಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಡವಾಗಿ ಆಗಮಿಸುತ್ತಿರೋದಕ್ಕೆ ಕ್ಷಮೆ ಕೋರಿದರು. ಬಳಿಕ ಮಧ್ಯಾಹ್ನ 2.30ಕ್ಕೆ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ವಾಯುವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ್ ನಾಮಪತ್ರ ಸಲ್ಲಿಸಿದ್ರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕರಾದ ಲಕ್ಷೀ ಹೆಬ್ಬಾಳ್ಕರ್, ಗಣೇಶ್ ಹುಕ್ಕೇರಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವು ನಾಯಕರು ಸಾಥ್ ನೀಡಿದರು.
Desur IT Park: ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಕೈಗನ್ನಡಿ: ರೈತರ ಆಕ್ರೋಶ
ಪ್ರಕಾಶ್ ಹುಕ್ಕೇರಿಗೆ ನೂರಾರು ನಾಯಕರ ಸೃಷ್ಟಿ ಮಾಡುವ ಶಕ್ತಿಯಿದೆ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, 'ಪ್ರಕಾಶ್ ಹುಕ್ಕೇರಿ, ಸುನೀಲ್ ಸಂಕ್ ಅವರ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಈ ರಾಜ್ಯದಲ್ಲಿ ಆಗ್ತಿರುವ ಅನೇಕ ಬೆಳವಣಿಗೆ, ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ, ನಿರುದ್ಯೋಗ ಯುವಕರಿಗೆ ಆಗುತ್ತಿರುವ ಅನ್ಯಾಯ ಜನ ನೋಡುತ್ತಿದ್ದಾರೆ. ಪ್ರಬುದ್ಧ ಮತದಾರರು ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಇದನ್ನೆಲ್ಲ ಗಮನಿಸಬೇಕು. ನಾವೆಲ್ಲ ಸಮೀಕ್ಷೆ ಮಾಡಿ ಅಭ್ಯರ್ಥಿಗಳನ್ನ ಚುನಾವಣೆ ಕಣಕ್ಕಿಳಿಸಿದ್ದೇವೆ. ಅನೇಕ ಸಂಸ್ಥೆಗಳ ಮುಖ್ಯಸ್ಥರ ಜೊತೆಯೂ ನಾವು ಸಂಪರ್ಕದಲ್ಲಿದ್ದೇವೆ. ಅವರೆಲ್ಲಾ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ.
ವಿದ್ಯಾವಂತ ಮತದಾರರ ಮೇಲೆ ನಮಗೆ ವಿಶ್ವಾಸವಿದೆ. ರಾಜ್ಯ, ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ಅವರಿಗೆ ಆಗಿರುವ ಭ್ರಮನಿರಸನದ ವಿರುದ್ಧವಾಗಿ ಮತ ಚಲಾಯಿಸುತ್ತಾರೆ ಅಂತಾ ವಿಶ್ವಾಸವಿದೆ. ವಾಯುವ್ಯ ಕ್ಷೇತ್ರದ ಎರಡು ಅಭ್ಯರ್ಥಿಗಳನ್ನೂ ಗೆಲ್ಲಿಸಿ ತರುತ್ತೇವೆ ಎಂಬ ವಿಶ್ವಾಸವಿದೆ. ಪ್ರಕಾಶ್ ಹುಕ್ಕೇರಿ ನಮ್ಮ ನಾಯಕರು, ನೂರಾರು ಜನ ನಾಯಕರನ್ನ ಸೃಷ್ಟಿ ಮಾಡುವ ಶಕ್ತಿ ಇರುವವರು' ಎಂದರು. ಕಾಂಗ್ರೆಸ್ ಅಭ್ಯರ್ಥಿ ಲ್ಯಾಪ್ ಟಾಪ್ ಹಂಚಿಕೆ ಮಾಡುತ್ತಿದ್ದಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, 'ಲ್ಯಾಪ್ ಟಾಪ್ ಕೊಡುತ್ತಾರೋ, ಇನ್ನೊಂದು ಕೊಡುತ್ತಾರೋ ಅದೆಲ್ಲಾ ನಾನು ಚರ್ಚೆ ಮಾಡುವುದಿಲ್ಲ. ನಾವು ಲ್ಯಾಪ್ ಟಾಪ್ ಕೊಡಲ್ಲಾ ಏನೂ ಕೊಡಲ್ಲ. ಮತದಾರರ ಹೃದಯ ಗೆದ್ದು ಕೈಮುಗಿದು ಮತವನ್ನ ಕೇಳುತ್ತಿದ್ದೇವೆ' ಎಂದರು.
'ಚಿಕ್ಕ ಮಕ್ಕಳಿಗೆ ಕೋಮು ವಿಷಬೀಜ ಬಿತ್ತುತ್ತಿದ್ದಾರೆ': ಬಡವರಿಗೆ, ಯುವಕರರಿಗೆ, ವಿದ್ಯಾವಂತರಿಗೆ ನಿರುದ್ಯೋಗದ ಸಮಸ್ಯೆ ಬಗ್ಗೆ, ದೇಶದಲ್ಲಿ ಆಗ್ತಿರುವ ಸಮಸ್ಯೆ ಬಗ್ಗೆ ಅವರು ಯೋಚನೆ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೆ ಕೋಮು ವಿಷಬೀಜ ಬಿತ್ತಲು ಹೊರಟ್ಟಿದ್ದಾರೆ' ಎಂದರು. ಇನ್ನೂ ತಾಂಬೂಲ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಅದು ಅವರ ಪರ್ಸನಲ್, ಸರ್ಕಾರ ಇಂತಹದ್ದಕ್ಕೆ ಅವಕಾಶ ನೀಡಬಾರದು. ಇಂತಹ ಪ್ರಶ್ನೆಗಳನ್ನ ನೀವು ಹಾಕೋಬಹುದು ನಾನು ಹಾಕೋಬಹುದು' ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಟಿಕೆಟ್ ನೀಡಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, 'ನಮ್ಮ ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚು ಗೌರವ ಕೊಡುವವರು. 'ಲಕ್ಷ್ಮೀ ಹೆಬ್ಬಾಳ್ಕರ್' ಇಲ್ಲೇ ಇದ್ದಾರೆ ನೋಡಿ ಎಂದು ಎಂ.ಬಿ ಪಾಟೀಲ್ ಹೇಳಿದಾಗ 'ಇವರದ್ದು ಬಿಡಿ' ಎಂದು ಡಿಕೆ ಶಿವಕುಮಾರ್ ಹೇಳಿದರು. ಹಿಂದೆ ನಾಲ್ಕು ಜನ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದೇವು. ಈಗಲೂ ಕೊಡ್ತೇವಿ ಸರ್ಕಾರ ತರಬೇಕು ತಂದಾಗ ಅವಕಾಶ ಸಿಗುತ್ತೆ' ಎಂದರು.
ನನ್ನ ತಮ್ಮನ ತರಹ ಇವರಿಬ್ಬರನ್ನೂ ಗೆಲ್ಲಿಸಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್: ಇನ್ನು ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 'ಪ್ರಕಾಶ್ ಹುಕ್ಕೇರಿಗೆ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ ಈಗಾಗಲೇ ಅವರು ಒಳ್ಳೆಯ ಕೆಲಸಗಾರ ಅಂತಾ ಪ್ರಕಾಶ್ ಹುಕ್ಕೇರಿ ಪ್ರೂವ್ ಮಾಡಿದ್ದಾರೆ. ಶಿಕ್ಷಣದಲ್ಲಿ ನಮ್ಮ ದೇಶ ಇಷ್ಟೊಂದು ಮುಂದುವರೆಯಲು ಕಾಂಗ್ರೆಸ್ ಸರ್ಕಾರ ಕಾರಣ. ಶಿಕ್ಷಣದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದ ಅನೇಕ ಉದಾಹರಣೆ ನೋಡ್ತೆವೆ. ಅಧಿಕಾರ ಶಾಶ್ವತ ಅಲ್ಲ ಅಧಿಕಾರ ಇದ್ದ ಸಂದರ್ಭದಲ್ಲಿ ಮಾಡಿದ ಕೆಲಸ ಶಾಶ್ವತ ಆಗುತ್ತೆ. ಪ್ರಕಾಶ್ ಹುಕ್ಕೇರಿ ಮಾಡಿದ ಕೆಲಸಗಳು ಇಂದು ಸಾಕ್ಷಿ. ಪ್ರಸ್ತುತ ಕಾಲ ಘಟ್ಟದಲ್ಲಿ ಏನಾಗುತ್ತಿದೆ ಅನ್ನೋದನ್ನ ಅರ್ಥ ಮಾಡಿಕೊಂಡು ಮತ ಹಾಕಬೇಕು. ಈ ಚುನಾವಣೆಯಿಂದ ಬದಲಾವಣೆ ಪರ್ವ ಆರಂಭ ಆಗಲಿದೆ. ಮೊನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಹಕಾರ ಮಾಡಿದ್ರಿ.
ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲೇ ಹೆಚ್ಚು ಆವಾಜ್ Satish jarkiholi
ಇದು ಅತ್ಯಂತ ಸೂಕ್ಷ್ಮವಾದ, ಬುದ್ದಿವಂತರ ಚುನಾವಣೆ. ಬುದ್ದಿವಂತರಿಗೆ ಬುದ್ದಿ ಹೇಳಲು ನಾಚಿಕೆಯೂ ಆಗುತ್ತೆ ಮುಜುಗೂರನೂ ಆಗುತ್ತೆ. ದೇಶದಲ್ಲಿ ಶಿಕ್ಷಣ ಬೆಳೆಯಲು ಕಾಂಗ್ರೆಸ್ ಶಿಕ್ಷಣ ನೀತಿ ಕಾರಣ. ಇಂದು ದೇಶ ಮುಂದುವರೆಯಲ ಕಾಂಗ್ರೆಸ್ ಶಿಕ್ಷಣ ನೀತಿ ಕಾರಣ. ಕಾಂಗ್ರೆಸ್ ಪಕ್ಷ ಹಿರಿಯ ಮುತ್ಸದ್ಧಿ ರಾಜಕಾರಣಿಯನ್ನು ಶಿಕ್ಷಕರ ಕ್ಷೇತ್ರಕ್ಕೆ ನಿಲ್ಲಿಸಿದ್ದೀವಿ. ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ. ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ನೀಡಿದ್ದಕ್ಕೆ ಒಳ್ಳೆಯ ಅಭಿಪ್ರಾಯ ಒಲವು ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿ ಬಿಮ್ಸ್ ವೈದ್ಯಕೀಯ ಕಾಲೇಜು ಆಗಲು ಪ್ರಕಾಶ್ ಹುಕ್ಕೇರಿ ಕಾರಣ, ಇಳಿ ವಯಸ್ಸಿನಲ್ಲೂ ಬತ್ತದೇ ಇರುವ ಉತ್ಸಾಹ ಪ್ರಕಾಶ್ ಹುಕ್ಕೇರಿ ಬಳಿ ಇದೆ. ಯಾವುದೇ ಕೆಲಸ ಇರಲಿ ನಾನು ಮಾಡೇ ತೀರ್ತೀನಿ ಅನ್ನೋ ಉತ್ಸಾಹ ಇದೆ. ನನ್ನ ತಮ್ಮನ ಗೆಲ್ಲಿಸಿದ ಹಾಗೇ ಬೆಳಗಾವಿಯನ್ನ ಮತ್ತೊಮ್ಮೆ ತಿರುಗಿ ನೋಡುವ ಹಾಗೇ ಗೆಲ್ಲಿಸಿ. ಅದೇ ರೀತಿ ಇಡೀ ರಾಜ್ಯ ಬೆಳಗಾವಿ ಕಡೆ ಮುಖ ಮಾಡುವ ಹಾಗೇ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.