ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ, ಪೆನ್ ಡ್ರೈವ್ ಹಂಚಿರುವವರು, ಮಹಿಳೆ ಕಿಡ್ನಾಪ್ ಸೇರಿದಂತೆ ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಆಗ್ರಹಿಸಿದರು.
ಮೈಸೂರು (ಮೇ.08): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ, ಪೆನ್ ಡ್ರೈವ್ ಹಂಚಿರುವವರು, ಮಹಿಳೆ ಕಿಡ್ನಾಪ್ ಸೇರಿದಂತೆ ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಆಗ್ರಹಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿಯಲ್ಲಿನ ಕೆಲವು ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಎಸ್ಐಟಿ ಬಳಸಿಕೊಂಡು ಜೆಡಿಎಸ್ ಪಕ್ಷ ಮತ್ತು ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಕ್ರಮ ಆಗಲಿ, ಆದರೆ ಪೆನ್ ಡ್ರೈವ್ ಹಂಚಿ ಹೆಣ್ಣು ಮಕ್ಕಳ ಮರ್ಯಾದೆ ತೆಗೆಯಲು ಕಾರಣರಾದವರು ಯಾರು ಎಂಬುದು ಬಹಿರಂಗವಾಗಬೇಕು. ವಕೀಲ ದೇವರಾಜೇಗೌಡ ಹೇಳಿದ ಹಾಗೆ ಡ್ರೈವರ್ ಕಾರ್ತಿಕ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ದೂರಿದರು. ಕಾರ್ತಿಕ್ ಹೊರ ದೇಶಕ್ಕೆ ಹೋಗಲು ಡಿ.ಕೆ. ಶಿವಕುಮಾರ್ ಅವರೇ ಕಾರಣ. ಅಂತಹದರಲ್ಲಿ ಪ್ರಧಾನಿ ಮೋದಿ ಅವರನ್ನು ಏಕೆ ದೂಷಣೆ ಮಾಡುತ್ತಿದ್ದೀರಿ? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದರು.
ಇಬ್ಬರು ಒಪ್ಪಿ ಅರ್ಜಿ ವಾಪಸ್ ಪಡೆದ್ರೆ ವ್ಯಾಜ್ಯ ಇತ್ಯರ್ಥ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್ ಸಲಹೆ
ವಕೀಲ ದೇವರಾಜೇಗೌಡ ಅವರು ಎಲ್.ಆರ್. ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿ ಡಿ.ಕೆ. ಶಿವಕುಮಾರ್ ಅವರಿಗೂ ಫೋನ್ ಕೊಟ್ಟಿದ್ದರು ಎಂಬ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಸಿಬಿಐಗೆ ವಹಿಸಿದರೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಎಂಬ ಭಾವನೆ ಮೂಡುತ್ತದೆ. ಅದಕ್ಕೆ ಎಸ್ಐಟಿನೂ ಬೇಡ, ಸಿಬಿಐಯೂ ಬೇಡ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬೀಳಲಿದೆ ಎಂದು ಅವರು ಒತ್ತಾಯಿಸಿದರು.
ಪ್ರಜ್ವಲ್ ಮಾಡಿರುವ ಯಾವುದೇ ಲೈಂಗಿಕ ಹಗರಣಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರಿಗೂ ಗೊತ್ತಿರಲಿಲ್ಲ. ಗೊತ್ತಿದ್ದರೆ ಟಿಕೆಟ್ ಕೊಡಲು ಮುಂದಾಗುತ್ತಿರಲಿಲ್ಲ ಎಂದರು. ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಚಿಕ್ಕಣ್ಣ, ಕೆ. ಮಹದೇವ್, ಎಂ. ಅಶ್ವಿನ್ ಕುಮಾರ್, ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್ ಆರ್. ಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವಕ್ತಾರ ರವಿಚಂದ್ರೇಗೌಡ, ಎಚ್.ಕೆ. ರಾಮು, ಪಾಲಿಕೆ ಮಾಜಿ ಸದಸ್ಯರಾದ ಎಸ್.ಬಿ.ಎಂ. ಮಂಜು, ಅಶ್ವಿನಿ ಅನಂತು ಮೊದಲಾದವರು ಇದ್ದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೇ.80ಕ್ಕೂ ಹೆಚ್ಚಿನ ಸ್ಥಾನ: ರೇಣುಕಾಚಾರ್ಯ ವಿಶ್ವಾಸ
ಡಿಕೆಶಿ ಸಚಿವ ಸ್ಥಾನದಿಂದ ವಜಾಗೊಳಿಸಿ: ಹಾಸನದ ಪೆನ್ ಡ್ರೈವ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ. ಈ ವಿಚಾರವಾಗಿ ವಕೀಲ ದೇವರಾಜೇಗೌಡ ಅವರು ಖಚಿತ ಪಡಿಸಿದ್ದಾರೆ. ಹೀಗಾಗಿ, ಡಿ.ಕೆ. ಶಿವಕುಮಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಆಗ್ರಹಿಸಿದರು.