* ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಎಸ್.ಆರ್.ಪಾಟೀಲ ನೇತೃತ್ವದ ಸಂಕಲ್ಪ ಯಾತ್ರೆ ಸಮಾರೋಪ
* 500 ಟ್ರ್ಯಾಕ್ಟರ್ ಗಳ ರ್ಯಾಲಿ ಮೂಲಕ ಯಶಸ್ವಿಗೊಂಡ ಸಂಕಲ್ಪ ಯಾತ್ರೆ....
.* 108 ಗ್ರಾಮಗಳಿಗೆ ಭೇಟಿ ನೀಡಿದ ಸಂಕಲ್ಪಯಾತ್ರೆಗೆ ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಸಮಾರೋಪ..
ವರದಿ:- ಮಲ್ಲಿಕಾರ್ಜುನ ಹೊಸಮನಿ ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಏ.17): ಕೃಷ್ಣಾ- ಮಹಾದಾಯಿ- ನವಲಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ಮಾಜಿ ವಿಧಾನ ಪರಿಷತ್ ವಿಪಕ್ಷ ನಾಯಕ, ಮಾಜಿ ಸಚಿವ ಎಸ್.ಆರ್.ಪಾಟೀಲರ ನೇತೃತ್ವದ ಸಂಕಲ್ಪ ಯಾತ್ರೆ ಇಂದು ಸಮಾರೋಪಗೊಂಡಿತು. 500 ಟ್ರ್ಯಾಕ್ಟರ್ಗಳ ಮೂಲಕ 500 ಕಿಮೀ ಸಂಚರಿಸುವುದರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದ ಎಸ್.ಆರ್.ಪಾಟೀಲರ ಯಾತ್ರೆಗೆ ಉತ್ತರ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್ ಕಂಡು ಬಂತು. ಈ ಮಧ್ಯೆ ಎಸ್.ಆರ್.ಪಾಟೀಲರ ಯಾತ್ರೆ ಅತ್ತ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸು ತಂದಿತ್ತು...
ಹೌದು, ಮಾಜಿ ಸಚಿವ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಭರ್ಜರಿಯಾಗಿ ನಡೆದ ಟ್ರ್ಯಾಕ್ಟರ್ ರ್ಯಾಲಿ, ರ್ಯಾಲಿ ಹೋದ ಕಡೆಗೆಲ್ಲಾ ಪಟಾಕಿ ಸಿಡಿಸಿ, ಗೌರವ ಸನ್ಮಾನದೊಂದಿಗೆ ಭರ್ಜರಿ ಬೆಂಬಲ ನೀಡಿದ ಜನಸಮೂಹ, ನರಗುಂದದಲ್ಲಿ ಆರಂಭವಾಗಿದ್ದ ಸಂಕಲ್ಪ ಯಾತ್ರೆಗೆ ಬಾಡಗಂಡಿಯಲ್ಲಿ ಸಮಾರೋಪ. ಹೌದು, ರಾಜ್ಯದಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಏ13ರಿಂದ ನರಗುಂದದಲ್ಲಿ ಆರಂಭವಾಗಿದ್ದ ಸಂಕಲ್ಪ ಯಾತ್ರೆ ಏ 17ರಂದು ಸಂಜೆ ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಸಮಾರೋಪ ಕಾರ್ಯಕ್ರಮ ಮೂಲಕ ಅಂತ್ಯಗೊಂಡಿತು.
Bagalkot: ನೀರಾವರಿ ಯೋಜನೆ ಸಂಕಲ್ಪ ಯಾತ್ರೆಗೆ ನಿರೀಕ್ಷೆ ಮೀರಿ ಬೆಂಬಲ
ಇನ್ನು 500 ಟ್ರ್ಯಾಕ್ಟರ್ಗಳ ಮೂಲಕ ಅಂದಾಜು 500 ಕಿಮೀ ವರೆಗೆ ನಡೆದ ಸಂಕಲ್ಪಯಾತ್ರೆಯು ಗದಗ,ಬಾಗಲಕೋಟೆ,ವಿಜಯಪುರ ಜಿಲ್ಲೆಗಳಲ್ಲಿನ 108 ಗ್ರಾಮಗಳಲ್ಲಿ ಹಾಯ್ದು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಇನ್ನು 5ನೇ ದಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಸಂಕಲ್ಪ ಯಾತ್ರೆ ಬಂದಾಗ ಇನ್ನಿಲ್ಲದ ಬೆಂಬಲ ಕಂಡು ಬಂತು. ಈ ಮದ್ಯೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದ್ರು. ಬಳಿಕ ಬಾಡಗಂಡಿಯ ಬಾಪೂಜಿ ಇಂಟರನ್ಯಾಷನಲ್ ಸ್ಕೂಲ್ ಆವರಣದಲ್ಲಿ ಹಲವು ಮಠಾಧೀಶರು, ಪಕ್ಷಾತೀತವಾಗಿ ಬೆಂಬಲ ನೀಡಿದ ನಾಯಕರು, ಅಭಿಮಾನಿಗಳ ಮಧ್ಯೆ ಬೃಹತ್ ಸಮಾರೋಪ ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ಶಿರಹಟ್ಟಿಯ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಎಸ್.ಆರ್.ಪಾಟೀಲರ ಹೋರಾಟವನ್ನ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಪಾಟೀಲರ ಜೊತೆ ಎಲ್ಲರೂ ನಿಂತು ಹೋರಾಟ ಮಾಡುವಂತಾಗಬೇಕೆಂದು ಕರೆ ಕೊಟ್ಟರು.
ಇನ್ನು ಹೋದ ಕಡೆಗಳಲ್ಲಿ ಸಂಕಲ್ಪ ಯಾತ್ರೆ ಟ್ರ್ಯಾಕ್ಟರ್ ರ್ಯಾಲಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈ ಮಧ್ಯೆ ಕೆಲವು ಕ್ಷೇತ್ರಗಳಲ್ಲಿ ಯಾತ್ರೆಯಿಂದ ಕೆಲ ಕಾಂಗ್ರೆಸ್ ನಾಯಕರು ದೂರವೇ ಉಳಿದರೆ, ಇನ್ನು ಕೆಲವರು ಅಂದ್ರೆ ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಅಜಯಕುಮಾರ ಸರನಾಯಕ್, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಕೆಲವರು ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.
ಇಂತಹ ಯಾತ್ರೆಯೊಂದನ್ನು ಹಮ್ಮಿಕೊಳ್ಳುವ ಮೂಲಕ ಮಾಜಿ ಸಚಿವ ಎಸ್.ಆರ್.ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡುವಂತೆ ಮಾಡಿದರು. ಯಾತ್ರೆ 5 ದಿನಕ್ಕೆ ಕಾಲಿಡುತ್ತಿದ್ದಂತೆ ಸಾವಿರಾರು ಜನ್ರು ಬೆಂಬಲ ಸೂಚಿಸಿ ಅಂತಿಮವಾಗಿ ಬಾಡಗಂಡಿಯಲ್ಲಿ ಸಮಾರೋಪ ಸಮಾರಂಭ ನಡೆಸಿದರು. ಸಮಾರಂಭದಲ್ಲಿ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿದ ನಾಡಿನ ಜನರಿಗೆ ಧನ್ಯವಾದ ಅರ್ಪಿಸಿದ ಮಾಜಿ ಸಚಿವ ಎಸ್.ಆರ್.ಪಾಟೀಲ ಮುಂಬರುವ ದಿನಮಾನಗಳಲ್ಲಿ ಯಾವುದೇ ರೀತಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡೋದಿಲ್ಲ ಎಂದು ಎಂದರು.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರೆನಿಸಿಕೊಂಡ ಮಾಜಿ ಸಚಿವ ಎಸ್.ಆರ್.ಪಾಟೀಲರು ಈ ಬೃಹತ್ ಸಂಕಲ್ಪ ಯಾತ್ರೆ ಮೂಲಕ ತಮ್ಮ ವಿರೋಧಿಗಳಿಗೆ ಟಾಂಗ್ ನೀಡುವುದರಲ್ಲಿ ಯಶಸ್ವಿಗೋದಷ್ಟೇ ಅಲ್ಲದೆ ತಮ್ಮ ಹಿಂದಿನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಂತು ಸುಳ್ಳಲ್ಲ...