ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕೆ ನನ್ನನ್ನು ಚಿತಾವಣೆ ಮಾಡಿ ಜೈಲಿಗೆ ಕಳುಹಿಸಿದರು. ನಾನು ಲಂಚ- ಮಂಚದ ಕೇಸಿನಲ್ಲಿ ಜೈಲಿಗೆ ಹೋಗಲಿಲ್ಲ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.
ರಾಮನಗರ (ಏ.17): ಕಾಂಗ್ರೆಸ್ (Congress) ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕೆ ನನ್ನನ್ನು ಚಿತಾವಣೆ ಮಾಡಿ ಜೈಲಿಗೆ ಕಳುಹಿಸಿದರು. ನಾನು ಲಂಚ- ಮಂಚದ ಕೇಸಿನಲ್ಲಿ ಜೈಲಿಗೆ ಹೋಗಲಿಲ್ಲ ಎಂದು ಬಿಜೆಪಿ (BJP) ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಗುಡುಗಿದರು. ನಗರದ ಪೊಲೀಸ್ ಭವನದ ಎದುರಿನ ವೃತ್ತದಲ್ಲಿ ಮಾಜಿ ಸಚಿವ ಈಶ್ವರಪ್ಪ (KS Eshwarapa) ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈಗಲ್ ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದೆ. ಇದಕ್ಕೆ ಪ್ರತೀಕಾರವಾಗಿ ನನ್ನನ್ನು ಜೈಲಿಗೆ ಕಳುಹಿಸಿದರು. ತಾವು ಈಗಲ್ಟನ್ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ತಮ್ಮ ಕೊಠಡಿಯ ಮೇಲೆ ದಾಳಿ ನಡೆಯಿತು.
ನಮ್ಮ ನಾಯಕರ ಮನೆಗಳ ಮೇಲೂ ದಾಳಿ ಆಯಿತು. ಸಿಕ್ಕಪಟ್ಟೆ ತೊಂದರೆ ಕೊಟ್ಟಿದ್ದಾರೆ. ನಿಮಗೂ ಮುಂದೆ ಕಾದಿದೆ ಎಂದು ಎಚ್ಚರಿಕೆ ನೀಡಿದರು. ನಾನು ಸಚಿವನಾಗಿದ್ದಾಗ ಯಾರ ಬಳಿಯೂ ಲಂಚ ಪಡೆದಿಲ್ಲ. ಯಾರಾದರೂ ಒಬ್ಬರು ನಾನು ಲಂಚ ಪಡೆದಿದ್ದೇನೆ ಎಂದು ಹೇಳಲಿ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸವಾಲು ಹಾಕಿದರು. ಬಿಜೆಪಿ ಆಡಳಿತದಲ್ಲಿ ಲಂಚ ಕೊಡುವವರೆಗೂ ಕಡತ ವಿಲೇವಾರಿ ಆಗುವುದಿಲ್ಲ. ಗುತ್ತಿಗೆದಾರ ಸಂತೋಷ ಪಾಟೀಲ್ ವಿಚಾರದಲ್ಲೂ ಆಗಿದ್ದು ಇದೆ. ಸರ್ಕಾರದ ಪ್ರತಿ ಕಚೇರಿಯ ಗೋಡೆಯೂ ಕಾಸು ಕೇಳುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
'ಸಂತೋಷ ಸಾವಿಗೂ ಡಿಕೆಶಿ, ಹೆಬ್ಬಾಳ್ಕರ್‌ಗೂ ಏನು ಸಂಬಂಧ?'
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಬಿಜೆಪಿ, ಮೋದಿಗಾಗಿ ದುಡಿದವನು. ಗುತ್ತಿಗೆ ಕಾಮಗಾರಿಗೆ ಶೇ 40 ಕಮೀಷನ್ ಕೇಳುತ್ತಾರೆ ಅಂತಾ ಆತ ದೂರಿದ್ದಾನೆ. ಈಶ್ವರಪ್ಪ ಹೇಳಿದ್ದಕ್ಕೆ ಕಾಮಗಾರಿ ಮಾಡಿದ್ದ. ಕಮೀಷನ್ ಕೊಡಲಿಲ್ಲ ಅಂತ ಮೋಸ ಮಾಡಿದ್ದಾರೆ. ಆತ ನೇರವಾಗಿ ಈಶ್ವರಪ್ಪ ಅವರನ್ನು ದೂರಿದ್ದಾನೆ. ಅವರ ಬಂಧನವಾಗಬೇಕು. ಮುಖ್ಯಮಂತ್ರಿಗಳು, ಗೃಹ ಸಚಿವರೇ ನಿರ್ದೋಷಿ ಪಟ್ಟಕಟ್ಟುತ್ತಿದ್ದಾರೆ. ಆ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಬಿಡುತ್ತಿದ್ದರೆ ಎಂದು ಪ್ರಶ್ನಿಸಿದರು. ಕೆಂಪುಕೋಟೆಯ ಮೇಲೆ ಭಾಗವಧ್ವಜ ಹಾರಾಡುತ್ತೆ ಅಂತ ಕೆ.ಎಸ್.ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರು.
ಆಗಲೂ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದೇವು. ನನ್ನ ಮೇಲೆ ಏನೇನೋ ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಸಹ ಈಶ್ವರಪ್ಪ ಅವರ ಹೇಳಿಕೆ ಸರಿಯಲ್ಲ ಅಂದಿದ್ದರು. ಆದರೂ ಅವರು ರಾಜೀನಾಮೆ ಕೊಡಲಿಲ್ಲ. ಕಾಲ ಬರುತ್ತೆ ಅಂತ ಹೇಳಿದ್ದೆ. ನಾವು ಮಾಡುವ ತಪ್ಪುಗಳಿಗೆ ಮಕ್ಕಳು, ಮೊಮ್ಮಕ್ಕಳ ಮೇಲೆ ಪರಿಣಾಮ ಆಗುತ್ತೆ ಎಂಬ ಕಾಲ ಹೋಯಿತು. ಈಗ ನಾವೇ ಅನುಭವಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮಾತಿನಲ್ಲೇ ಈಶ್ವರಪ್ಪ ಅವರನ್ನು ಚುಚ್ಚಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ , ಕೆ.ರಮೇಶ್, ಮುಖಂಡರಾದ ಜಿಯಾವುಲ್ಲಾ, ಕೆ.ಶೇಷಾದ್ರಿ ಮತ್ತಿತರರು ಹಾಜರಿದ್ದರು.
ಅಣ್ಣ ಕುಮಾರಣ್ಣ ದ್ವಂಧ್ವ ನಿಲುವು ಬೇಡಣ್ಣ: ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯ್ದೆ ಹಾಗೂ ಈಶ್ವರಪ್ಪ ವಿಚಾರದಲ್ಲಿ ನಮ್ಮ ಕುಮಾರಣ್ಣ ಮಾತನಾಡಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತರಾಟೆ ತೆಗೆದುಕೊಂಡರು. ನಗರದ ಪೊಲೀಸ್ ಭವನದ ಎದುರಿನ ವೃತ್ತದಲ್ಲಿ ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅಣ್ಣ ಕುಮಾರಣ್ಣ ದ್ವಂದ್ವ ನಿಲುವು ಬೇಡಣ್ಣ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬಾರದು. ಒಳ್ಳೆ ಕೆಲಸ ಮಾಡಿದರೆ ಬೆಂಬಲ ಕೊಡುತ್ತೇವೆ ಎಂದರು.
ಹಲಾಲ್ ಎಂಬ ಬಿಜೆಪಿಗರು ಈಗ ಚುನಾವಣೆಗೆ ಬರಲಿ, ಡಿಕೆಶಿ ಸವಾಲ್!
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಜನ ಬೆಂಬಲಿಸಿದರೆ ಜೀರೋನು ಹೀರೋ ಆಗುತ್ತಾನೆ. ಇಲ್ಲದಿದ್ದರೆ ಹೀರೋನೂ ಜೀರೋ ಆಗುತ್ತಾರೆ ಎಂದು ಎಚ್ಚರಿಸಿದರು. ಮೇಕೆದಾಟು ಪಾದಯಾತ್ರೆ ಮಾಡಿದ್ದನ್ನು ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್, ನಾವು ಪಾದಯಾತ್ರೆ ಮಾಡಿದ್ದಕ್ಕೆ ಡೀಸಿ, ಎಸ್ಪಿ ಕೇಸು ಹಾಕಿದ್ದಾರೆ. ಇಂದು ನಮ್ಮಕ್ಕ (ಅನಿತಾ ಕುಮಾರಸ್ವಾಮಿ) ನೀರು ತರೋಕೆ ಹೋಗಿದ್ದಾರೆ. ಮೇಕೆದಾಟು ಯೋಜನೆಯನ್ನು ಯಾರಾದರು ಮಾಡಲಿ, ನೀರು ಕೊಡಲಿ ಅವರಿಗೆ ಸಹಕಾರ ಕೊಡುತ್ತೇವೆ. ಅಸೂಯೆ ಪಡುವ ಜನ ನಾವಲ್ಲ ಎಂದರು.