ಪೌತಿ ಖಾತೆ, ಪೋಡಿಗೆ ಡಿಸೆಂಬರ್‌ ಗಡುವು: ಎರಡೂ ಕಾರ್ಯಕ್ಕೆ ವೇಗ ನೀಡಲು ತಹಶೀಲ್ದಾರ್‌ಗಳಿಗೆ ಸಚಿವ ಕೃಷ್ಣ ಸೂಚನೆ

Published : Nov 11, 2025, 08:52 AM IST
Krishna Byre Gowda

ಸಾರಾಂಶ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು (ನ.11): ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನದಡಿ ಇದುವರೆಗೆ ಕೇವಲ ಶೇ.5ರಷ್ಟು ಗುರಿ ಸಾಧನೆ ಮಾಡಲಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ವಿಡಿಯೋ ಸಂವಾದ ಮೂಲಕ ನಡೆದ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ ಅವರು, ಪೌತಿ ಖಾತೆ ಅಭಿಯಾನ ಆರಂಭವಾಗಿ ಎಷ್ಟು ತಿಂಗಳಾಯಿತು? 41.62 ಲಕ್ಷ ಜಮೀನು ಮೃತರ ಹೆಸರಲ್ಲಿದೆ. ಈ ಪೈಕಿ ಎರಡು ಲಕ್ಷ ಪ್ರಕರಣಗಳನ್ನು ಮಾತ್ರ ಇದುವರೆಗೆ ಮೃತರ ವಾರಸುದಾರರ ಹೆಸರಿಗೆ ಬದಲಿಸಲಾಗಿದೆ. ನಮ್ಮ ಗುರಿಯಲ್ಲಿ ಶೇ. 5 ರಷ್ಟು ಕೆಲಸ ಮಾತ್ರ ಆಗಿದೆ. ಕೂಡಲೇ ಅಭಿಯಾನಕ್ಕೆ ವೇಗ ನೀಡಿ ಪೂರ್ಣ ಗುರಿ ಸಾಧನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.

ತಹಶೀಲ್ದಾರರು ಸರಿಯಾಗಿ ಕೆಲಸ ಮಾಡ್ತಿಲ್ಲ: ಅದೇ ರೀತಿ ತಡವಾಗಿರುವ ಪೋಡಿ ದುರಸ್ತಿ ಕಾರ್ಯವನ್ನು ಮತ್ತೆ ಆದ್ಯತೆ ಮೇಲೆ ಆರಂಭಿಸಿ ಡಿಸೆಂಬರ್‌ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು. ದುರಸ್ತಿಗಾಗಿ 1.40 ಲಕ್ಷ ಪ್ರಕರಣ ಸರ್ವೇಗೆ ಹೋಗಿದೆ. 1.50 ಲಕ್ಷ ಪ್ರಕರಣ ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಹೋಗಿದೆ. ತಹಶೀಲ್ದಾರರು ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟೊಂದು ಪ್ರಕರಣಗಳನ್ನು ಮಿಸ್ಸಿಂಗ್ ರೆಕಾರ್ಡ್ಸ್ ಕಮಿಟಿಗೆ ಕಳಿಸುವುದು ಸರಿಯಲ್ಲ. ಎಲ್ಲ ತಾಲೂಕುಗಳಲ್ಲೂ ಮಂಜೂರುದಾರರಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲವನ್ನೂ ಮುಗಿಯುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಡೇಟಾ ಎಂಟ್ರಿಯಿಂದ ತಹಶೀಲ್ದಾರ್‌ವರೆಗೆ ಎಲ್ಲವೂ ಈ ಗಡುವಿನೊಳಗೆ ಆಗಬೇಕು ಎಂದು ಸೂಚಿಸಿದ್ದಾರೆ.

ಆಧಾರ್ ಸೀಡಿಂಗ್: ರೈತರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಶೀಘ್ರ ಎಲ್ಲ ತಾಲೂಕುಗಳಲ್ಲೂ ಆಧಾರ್ ಸೀಡಿಂಗ್ ಮುಗಿಸುವಂತೆ ಸಚಿವರು ಸೂಚಿಸಿದ್ದಾರೆ. ವಿರಾಜಪೇಟೆ, ಬೈಂದೂರು, ಪೊನ್ನಂಪೇಟೆ, ಮಡಿಕೇರಿ, ಆನೇಕಲ್, ಖಾನಾಪುರ, ಯಳಂದೂರು, ಗೋಕಾಕ್ ತಾಲೂಕಲ್ಲಿ ಶೇ.1ಕ್ಕಿಂತ ಕಡಿಮೆ ಆಧಾರ್‌ ಸೀಡಿಂಗ್‌ ಆಗಿದೆ. ಈ ತಾಲ್ಲೂಕುಗಳ ತಹಶೀಲ್ದಾರರುಗಳ ವಿರುದ್ಧ ಕಿಡಿಕಾರಿದ ಸಚಿವರು, ಈ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭೂ ಸುರಕ್ಷಾ ಯೋಜನೆ

49 ತಾಲೂಕು ಭೂ ದಾಖಲೆಗಳ ಸ್ಕ್ಯಾನಿಂಗ್‌ ಮುಕ್ತಾಯವಾಗಿದೆ. ಪ್ರಾಯೋಗಿಕವಾಗಿ ಸ್ಕ್ಯಾನ್ ಆರಂಭಿಸದ 29 ತಾಲೂಕುಗಳಲ್ಲೂ ಮುಕ್ತಾಯ ಆಗಿದೆ. ಈವರೆಗೆ 50 ಕೋಟಿ ಪುಟ ಸ್ಕ್ಯಾನ್ ಆಗಿದೆ ಇನ್ನೂ 50 ಕೋಟಿ ಪುಟ ಸ್ಕ್ಯಾನಿಂಗ್ ಬಾಕಿ ಇದೆ. ಎಲ್ಲೆಲ್ಲಿ ದಾಖಲೆಗಳು ಅಧಿಕವಾಗಿದೆಯೋ ಅಲ್ಲಿ ಮತ್ತಷ್ಟು ಉಪಕರಣ ಹಾಗೂ ಮಾನವ ಸಂಪನ್ಮೂಲ ನೀಡಲು ಸೂಚಿಸಲಾಗಿದ್ದು, ಈ ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!