
ಬೆಂಗಳೂರು (ನ.11): 2028ಕ್ಕೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿ ಸರ್ಕಾರ ಸ್ಥಾಪಿಸುವ ಒಂದೇ ಗುರಿ ಇದೆ ಎಂದು ಜೆಡಿಎಸ್ ಕೋರ್ ಕಮಿಟಿ ನೂತನ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿಸುವ ಜವಾಬ್ದಾರಿ ನನ್ನ ಮೇಲಿದೆ. ವಾರದಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಇದ್ದು, ಬೇರೆ ಜಿಲ್ಲೆಗಳು ಹಾಗೂ ತಾಲೂಕುಗಳಿಂದ ಬರುವವರ ಸಮಸ್ಯೆ ಆಲಿಸಿ ಬಗೆಹರಿಸುತ್ತೇನೆ.
ಪ್ರತಿ ತಿಂಗಳಿಗೊಮ್ಮೆ ಕೋರ್ ಕಮಿಟಿ ಸಭೆ ಕರೆಯುತ್ತೇವೆ. ಜಿಲ್ಲಾ ಮತ್ತು ತಾಲೂಕು ಪ್ರವಾಸ ಮಾಡುತ್ತೇವೆ ಎಂದು ಹೇಳಿದರು. ಸೋಮವಾರದ ಸಭೆಯಲ್ಲಿ ಗ್ರಾ.ಪಂ., ಜಿ.ಪಂ. ಹಾಗೂ ತಾಲೂಕು ಪಂಚಾಯಿತಿ, ನಗರ ಸಭೆ ಚುನಾವಣೆಗಳು ಬರುತ್ತಿವೆ. ಇದರ ಜೊತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯೂ ಬರುತ್ತಿರುವುದರಿಂದ ಯೋಜನೆ ರೂಪಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗೆಲ್ಲುವ ಲೆಕ್ಕಾಚಾರದಲ್ಲಿ ಸೀಟು ಹಂಚಿಕೆ: ಈಗ ಎನ್‌ಡಿಎ ಮೈತ್ರಿ ಕೂಟದಲ್ಲಿ ಇರುವುದರಿಂದ ನಮಗೆ ಎಷ್ಟು ಸ್ಥಾನಬೇಕು ಎಂದು ಕೇಳುವುದಿಲ್ಲ. ಜೆಡಿಎಸ್ ಅಸ್ತಿತ್ವ ಎಲ್ಲಿದೆ? ಎಲ್ಲಿ ಜೆಡಿಎಸ್ ಗೆಲ್ಲಬಹುದು ಎಂಬ ಲೆಕ್ಕಾಚಾರಗಳಲ್ಲಿ ಸ್ಥಾನ ಕೇಳುತ್ತೇವೆ. ನಾವು ಅಂಕಿ-ಸಂಖ್ಯೆಗಳಲ್ಲಿ 100 ಸ್ಥಾನ ಅಥವಾ 120 ಸ್ಥಾನ ಬೇಕು ಎನ್ನುವುದಲ್ಲ. ನಾವು ಎಷ್ಟು ಗೆಲ್ಲುತ್ತೇವೆ ಎಂಬುದು ಬಹಳ ಮುಖ್ಯ. ಹಾಗಾಗಿ ಅದರ ತಯಾರಿ ಮಾಡುತ್ತೇವೆ ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕರಾದ ಜಿ.ಟಿ. ದೇವೇಗೌಡರ ಮನೆಗೇ ಹೋಗಿ ಭೇಟಿ ಮಾಡುತ್ತೇನೆ. ಈ ರೀತಿ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಇಲ್ಲಿ ಯಾರದು ದೊಡ್ಡಸ್ತಿಕೆ ಪ್ರಶ್ನೆ ಬರುವುದಿಲ್ಲ. ಪಕ್ಷ ಸಂಘಟನೆಗಾಗಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಆ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.