ಬಾಂಗ್ಲಾದೇಶವೆಂದರೆ ಬಿಜೆಪಿಯವರಿಗೆ ಮುಸ್ಲಿಂ ರಾಷ್ಟ್ರ. ಆದ್ದರಿಂದ ನನ್ನ ಹೇಳಿಕೆಯನ್ನು ತಿರುಚಿ ಪ್ರಕರಣ ದಾಖಲಿಸಿದ್ದಾರೆ. ಕಲ್ಲು ಬಿಸಾಡುವುದು ಬಿಜೆಪಿಯ ಗೂಂಡಾ ಸಂಸ್ಕೃತಿ. ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಗೂಂಡಾ ಸಂಸ್ಕೃತಿಯ ಶಾಸಕರು. ಇವರ ಮೇಲೆ ರೌಡಿಶೀಟ್ ತೆರೆಯಬೇಕು. ಇಂಥವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಆಗ್ರಹಿಸಿದ ಐವನ್ ಡಿಸೋಜಾ
ಮಂಗಳೂರು(ಆ.24): ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ವಿರೋಧಿಸಿ ಕೈಪಡೆ ಶುಕ್ರವಾರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ತಾಕತ್ತಿದ್ದರೆ ಕಚೇರಿಗೆ ಬರಲಿ ಎಂದು ಕೇಸರಿ ನಾಯಕರು ಸವಾಲು ಹಾಕಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಸಮರ ತಾರಕ್ಕಕ್ಕೇರಿದೆ.
ಪಟ್ಟಣದಲ್ಲಿರುವ ಐವನ್ ಡಿಸೋಜಾ ಮನೆಯಿಂದ ಶುಕ್ರವಾರ ಪಾದಯಾತ್ರೆ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಕಂಕನಾಡಿ ವೃತ್ತದ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆಹಿಡಿದರು. ಆಗ ರಸ್ತೆಯ ಫುಟ್‌ಪಾತ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿ ರಾಜ್ಯಪಾಲರ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಮುತ್ತಿಗೆ ತಡೆಯಲು ಪಿವಿಎಸ್ ಬಳಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದರು. ಅಲ್ಲದೆ, ಕಾಂಗ್ರೆಸ್‌ನವರ ಕೊರಳಿಗೆ ಹಾಕಲು ಚಪ್ಪಲಿ ಹಾರ ಸಿದ್ಧಪಡಿಸಿಕೊಂಡಿದ್ದರು.
ಕಾರ್ಕಳ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಶಾಸಕ ಸುನಿಲ್ ಕುಮಾರ ಆಕ್ರೋಶ
ಶಾಸಕರ ಮೇಲೆ ರೌಡಿಶೀಟ್‌ಗೆ ಐವನ್ ಆಗ್ರಹ:
ಬಾಂಗ್ಲಾದೇಶವೆಂದರೆ ಬಿಜೆಪಿಯವರಿಗೆ ಮುಸ್ಲಿಂ ರಾಷ್ಟ್ರ. ಆದ್ದರಿಂದ ನನ್ನ ಹೇಳಿಕೆಯನ್ನು ತಿರುಚಿ ಪ್ರಕರಣ ದಾಖಲಿಸಿದ್ದಾರೆ. ಕಲ್ಲು ಬಿಸಾಡುವುದು ಬಿಜೆಪಿಯ ಗೂಂಡಾ ಸಂಸ್ಕೃತಿ. ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಗೂಂಡಾ ಸಂಸ್ಕೃತಿಯ ಶಾಸಕರು. ಇವರ ಮೇಲೆ ರೌಡಿಶೀಟ್ ತೆರೆಯಬೇಕು. ಇಂಥವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದರು.
ಬಿಜೆಪಿ ಕಚೇರಿಗೆ ಬರಲಿ ನೋಡೋಣ:ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದವರ ಗೊಡ್ಡು ಬೆದರಿಕೆಗಳಿಗೆಲ್ಲ ಭಾರತ್ ಮಾತಾ ಕಿ ಜೈ ಎನ್ನುವ ದೇಶಭಕ್ತರು ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಚೇರಿಗೆ ನುಗ್ಗುವುದೆಂದರೆ ಬಸ್‌ಗೆ ಕಲ್ಲು ಹೊಡೆದಷ್ಟು ಸುಲಭವಲ್ಲ. ತಾಕತ್ತಿದ್ದರೆ ಬನ್ನಿ ವಿಶೇಷ ಚಪ್ಪಲಿಯ ಹಾರಗಳು ಸಿದ್ಧವಾಗಿವೆ ಎಂದು ಶಾಸಕ ವೇದವ್ಯಾಸ ಕಾಮತ್ ಕಾಂಗ್ರೆಸ್‌ಗೆ ಸವಾಲು ಹಾಕಿದರು.
ಐವನ್ ಡಿಸೋಜಾ ಓರ್ವ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್ ಹಾಕಲಿ ನೋಡೋಣ. ಕಾಂಗ್ರೆಸ್ ತಪ್ಪನ್ನು ತೋರಿಸಿದವರ ವಿರುದ್ಧ ರೌಡಿಶೀಟರ್ ಹಾಕುವುದು ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರಲ್ಲ ಎಂದು ವಾಗ್ದಾಳಿ ನಡೆಸಿದ ಕಾಮತ್, ರಾಜಭವನದ ಮೇಲೆ ಬಾಂಗ್ಲಾ ಮಾದರಿ ಉಗ್ರದಾಳಿ ನಡೆಸುವ ಬೆದರಿಕೆ ಹಾಕಿದ ಐವನ್ ಡಿಸೋಜಾ ಮೇಲೆ ಯಾವ ಕೇಸ್ ಹಾಕಬೇಕು? ಅವನೊಬ್ಬ ಭಯೋತ್ಪಾದಕ ಎಂದು ತಿರುಗೇಟು ನೀಡಿದರು.