ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಮತ ಗೆಲ್ಲಲು ನೀರಾವರಿ ರಾಜಕೀಯ ಅಸ್ತ್ರವಾಗಲಿದೆಯೇ?

Published : Jun 03, 2022, 04:35 PM ISTUpdated : Jun 03, 2022, 05:10 PM IST
ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಮತ ಗೆಲ್ಲಲು ನೀರಾವರಿ ರಾಜಕೀಯ ಅಸ್ತ್ರವಾಗಲಿದೆಯೇ?

ಸಾರಾಂಶ

ಕೃಷ್ಣಾ, ಮಲ​ಪ್ರಭಾ, ಘಟ​ಪ್ರಭಾ, ಹಿರ​ಣ್ಯ​ಕೇಶಿ, ಕಾಳಿ, ದೂದ​ಗಂಗಾ, ವೇದ​ಗಂಗಾ, ತುಂಗ​ಭದ್ರಾ, ವರದಾ, ಮಹ​ದಾ​ಯಿ, ಭೀಮಾ ನದಿ​ಗಳ ವ್ಯಾಪ್ತಿ​ಯನ್ನು ಹಸಿ​ರು​ಗೊ​ಳಿ​ಸುವ ಉತ್ಸು​ಕ​ತೆ​ಯನ್ನು ಈಗ ರಾಜ​ಕೀಯ ಪಕ್ಷ​ಗಳು ತೋರು​ತ್ತಿವೆ. 

ಕರ್ನಾ​ಟ​ಕ​ದಲ್ಲಿ ಇದು ಚುನಾ​ವ​ಣೆಯ ವರ್ಷ. ರಾಜ​ಕೀಯ ಪಕ್ಷ​ಗಳು ಚುನಾ​ವಣಾ ತಂತ್ರ​ಗಳ​ನ್ನು ಶುರು​ವಿ​ಟ್ಟು​ಕೊಂಡಿವೆ. ಅಧಿ​ಕಾ​ರ​ಕ್ಕೆ ಏರ​ಬೇಕು ಎಂಬ ಒಂದೇ ಗುರಿ​ಯನ್ನು ಇಟ್ಟು​ಕೊಂಡು ಮತ​ದಾ​ರನತ್ತ ನಾನಾ ಭರ​ವ​ಸೆ​ಗಳ ಬಾಣ​ ಬಿಡಲು ಆರಂಭಿ​ಸಿವೆ. ಚುನಾ​ವ​ಣೆ ಬರು​ವ​ಷ್ಟ​ರಲ್ಲಿ ಈ ಭರ​ವ​ಸೆ​ಗಳು ಮತ​​ಗ​ಳಾ​ಗಲಿ ಎಂಬ ಆಲೋ​ಚನೆ ಪಕ್ಷ​ಗ​ಳ​ದ್ದು. ಈ ಬಾರಿ ಉತ್ತರ ಕರ್ನಾ​ಟ​ಕ​ದತ್ತ ಎಲ್ಲ ಪಕ್ಷ​ಗಳು ಹೆಚ್ಚು ಗಮನ ನೀಡುತ್ತಿರುವುದು ಪ್ರಮುಖ ಬೆಳ​ವ​ಣಿಗೆ ಎಂದು ರಾಜ​ಕೀಯ ತಜ್ಞರು ಹೇಳುತ್ತಿದ್ದಾರೆ.

ಕಲ್ಯಾಣ ಕರ್ನಾ​ಟಕ ಮತ್ತು ಕಿತ್ತೂರು ಕರ್ನಾ​ಟಕ ಭಾಗ​ದ​ಲ್ಲಿ​ರುವ ಒಟ್ಟು 96 ವಿಧಾ​ನ​ಸಭೆ ಕ್ಷೇತ್ರ​ಗಳಲ್ಲಿ ಎಷ್ಟುಸಾಧ್ಯವೋ ಅಷ್ಟುಕ್ಷೇತ್ರ​ಗ​ಳನ್ನು ತನ್ನ​ದಾ​ಗಿ​ಸಿ​ಕೊ​ಳ್ಳಲು ಮೂರು ಪಕ್ಷ​ಗಳು ತಂತ್ರ​ ಹೆಣೆ​ಯು​ತ್ತಿವೆ. ಅದಕ್ಕೆ ಆಯ್ದು​ಕೊಂಡಿದ್ದು ಕ್ಷೇತ್ರ ನೀರಾ​ವರಿ. ಇದೊಂದನ್ನೇ ವಿಷ​ಯ​ವ​ನ್ನಿ​ಟ್ಟು​ಕೊಂಡು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ 96ರ ಗಂಟಿ​ನಲ್ಲಿ ಎಷ್ಟುಸಾಧ್ಯವೋ ಅಷ್ಟನ್ನು ಪಕ್ಷಕ್ಕೆ ಎಳೆ​ದು​ಕೊ​ಳ್ಳಲು ಕಾತು​ರ​ರಾ​ಗಿ​ದ್ದಾರೆ.

ಈ ಪೈಕಿ ಕಲ್ಯಾಣ ಕರ್ನಾ​ಟಕ ಭಾಗ​ದ​ಲ್ಲಿ​ರುವ 31 ಶಾಸ​ಕರ ಕ್ಷೇತ್ರ​ಗಳು, ಕಿತ್ತೂರು ಕರ್ನಾ​ಟಕ, ಕರಾ​ವ​ಳಿ ಭಾಗ​ದ​ಲ್ಲಿ​ರುವ 64 ಕ್ಷೇತ್ರ​ಗಳ ​ಮೇಲೆ ಕಣ್ಣಿಟ್ಟಿದ್ದಾರೆ. ಇದರ ಹಿಂದಿ​ರುವ ಮರ್ಮ ಇಷ್ಟೆ. ಇಲ್ಲಿ ಗೆದ್ದು ಬ​ರು​ವ ಕ್ಷೇತ್ರ​ಗ​ಳನ್ನು ಹೊರ​ತು​ಪ​ಡಿ​ಸಿ ಇನ್ನು​ಳಿದ 128 ಕ್ಷೇತ್ರ​ಗ​ಳಲ್ಲಿ (ದ​ಕ್ಷಿಣ ಮತ್ತು ಕರಾ​ವಳಿ ಭಾಗ​) ಎಷ್ಟುಸಾಧ್ಯವೋ ಅಷ್ಟನ್ನು ತಮ್ಮ ಬುಟ್ಟಿಗೆ ಹಾಕಿ​ಕೊ​ಂಡು ಅಧಿ​ಕಾ​ರ​ಕ್ಕೇರುವ ದೂರದ ಗುರಿ ರಾಜ​ಕೀಯ ಪಕ್ಷ​ಗ​ಳ​ದ್ದು.

Land Slides:ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ

ಏನೇನು ನಡೆ​ದಿದೆ ಕಸ​ರ​ತ್ತು?

ಉತ್ತರ ಕರ್ನಾ​ಟ​ಕ​ದಲ್ಲಿ (ಕ​ಲ್ಯಾಣ ಮತ್ತು ಕಿತ್ತೂರು ಕರ್ನಾ​ಟ​ಕ ಸೇರಿ) ನೀರಿನ ಮೂಲ ಸಾಕ​ಷ್ಟಿ​ದೆ. ಆದರೆ, ಸದ್ಬ​ಳಕೆ ಆಗು​ತ್ತಿಲ್ಲ. ಕಾರಣ ಅದರ ಸದ್ಬ​ಳ​ಕೆಗೆ ಬೇಕಾದ ಅಗತ್ಯ ಯೋಜ​ನೆ​ಗಳಿಲ್ಲ. ಅದರ ಅನು​ಷ್ಠಾ​ನ​ವಿಲ್ಲ. ಕೃಷಿ​ಯನ್ನೇ ನಂಬಿ​ಕೊಂಡು ತಮ್ಮ ಬದುಕು ಕಟ್ಟಿ​ಕೊಂಡ​ ಲಕ್ಷಾಂತರ ಕುಟುಂಬ​ಗ​ಳಿವೆ ಉ.ಕ. ಭಾಗ​ದಲ್ಲಿ. ಆದರೆ, ಈ ಕೃಷಿ ಕುಟುಂಬ​ಗಳು ಮಳೆ​ಯನ್ನೇ ಆಧ​ರಿ​ಸಿ​ಕೊಂಡಿವೆ. ಒಂದು ವೇಳೆ ನೀರಾ​ವ​ರಿ​ಯನ್ನು ಸಮ​ರ್ಪ​ಕ​ವಾಗಿ ಜಾರಿ ಮಾಡಿ​ದರೆ ಈ ಕುಟುಂಬ​ಗಳ ಆರ್ಥಿಕ ಮಟ್ಟದ ಜತೆಗೆ ಅವರ ಜೀವ​ನ​ಮ​ಟ್ಟ​ವನ್ನೂ ಸುಧಾ​ರಿ​ಸಲು ಸಾಧ್ಯ.

ಉಕ ಭಾಗ​ದ​ಲ್ಲಿ​ ಕೃಷ್ಣಾ, ಮಲ​ಪ್ರಭಾ, ಘಟ​ಪ್ರಭಾ, ಹಿರ​ಣ್ಯ​ಕೇಶಿ, ಕಾಳಿ, ದೂದ​ಗಂಗಾ, ವೇದ​ಗಂಗಾ, ತುಂಗ​ಭದ್ರಾ, ವರದಾ, ಮಹ​ದಾ​ಯಿ, ಭೀಮಾ ಸೇರಿ​ದಂತೆ ಹತ್ತಾರು ನದಿ​ಗಳು ರೈತರ ಬೆಳೆ​ಗ​ಳಿಗೆ ನೀರು​ಣಿ​ಸ​ಲಿ​ರುವ ಪ್ರಮುಖ ನದಿ​ಗಳು. ಈ ನದಿ​ಗಳ ವ್ಯಾಪ್ತಿ​ಯನ್ನು ಹೊಂದಿ​ರುವ ವಿಧಾ​ನ​ಸಭಾ ಕ್ಷೇತ್ರ​ಗಳಲ್ಲಿನ ನೀರಾ​ವರಿ ಯೋಜ​ನೆ​ಗಳ ಜಾರಿಗೆ ಆದ್ಯತೆ ನೀಡಲು ಎಲ್ಲ ಪಕ್ಷ​ಗ​ಳು ಭರ​ವ​ಸೆಗೆ ಮುಂದಾ​ಗು​ತ್ತಿವೆ. ಈ ಮೂಲಕ ಈ ಕ್ಷೇತ್ರ​ಗ​ಳನ್ನು ತಮ್ಮ​ದಾ​ಗಿ​ಸುವ ತಂತ್ರ ಹೆಣೆ​ಯು​ತ್ತಿವೆ ಪಕ್ಷ​ಗ​ಳು.

ಜೆಡಿಎಸ್‌ನ ಪಂಚರತ್ನ

ಜಾತ್ಯ​ತೀತ ಜನ​ತಾ​ದ​ಳವು ಈಗಾ​ಗಲೇ ಜನತಾ ಜಲ​ಧಾರೆ ಹೆಸ​ರಿ​ನಲ್ಲಿ ಸಮಗ್ರ ನೀರಾ​ವ​ರಿಯ ಕನ​ಸನ್ನು ಬಿಚ್ಚಿ​ಟ್ಟಿದೆ. ರಾಜ್ಯಾ​ದ್ಯಂತ ಸಮಗ್ರ ನೀರಾ​ವ​ರಿ ಸೇರಿ​ದಂತೆ ಪಂಚ​ರತ್ನ ಯೋಜ​ನೆ​ಗ​ಳನ್ನು ಜಾರಿಗೆ ತರುವು​ದಾಗಿ ಭರ​ವಸೆಯನ್ನು ನೀಡಿದೆ. ಮಾತ್ರ​ವಲ್ಲ, 15 ಜಿಲ್ಲೆ​ಗ​ಳ​ಲ್ಲಿನ ನದಿಯ ನೀರನ್ನು ಕಳ​ಸ​ದ​ಲ್ಲಿ ಸಂಗ್ರ​ಹಿ​ಸಿದೆ ಜೆಡಿ​ಎಸ್‌. ನುಡಿ​ದಂತೆ ನಡೆದು ನೀರಾ​ವ​ರಿಗೆ ಆದ್ಯತೆ ನೀಡು​ವು​ದಾಗಿ ಹೇಳಿ​ಕೊಂಡಿದೆ. ಸಮಗ್ರ ನೀರಾ​ವ​ರಿಗೆ ಪಣ ತೊಟ್ಟರೂ ಅದರ ಅನು​ಷ್ಠಾ​ನ ಅಷ್ಟುಸುಲ​ಭ​ವಲ್ಲ ಎನ್ನು​ವುದು ಕೂಡ ಅರಿ​ತಿ​ರುವ ವಿಚಾ​ರವೇ ಸರಿ.

Uttara Kannada ಸಹಾಯದ ನಿರೀಕ್ಷೆಯಲ್ಲಿ ವಿರೂಪಾಕ್ಷ ಕಟಗಿ

ಕೃಷ್ಣೆಯ ಕಡೆ ಕಾಂಗ್ರೆಸ್‌ ನಡಿಗೆ

ಕಾಂಗ್ರೆಸ್‌ ಕೂಡ ಈ ಹಿಂದೆ ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಯಾತ್ರೆ ಮಾಡಿತ್ತು. ಕೃಷ್ಣಾ ಮೇಲ್ದಂಡೆ ಯೋಜ​ನೆ ಮೂರನೇ ಹಂತಕ್ಕೆ ಸಾವಿ​ರಾರು ಕೋಟಿ ರು. ಕೊಡು​ವು​ದಾಗಿ ಹೇಳಿತ್ತು. ದಕ್ಷಿ​ಣ​ದಲ್ಲಿ ಮೇಕೆ​ದಾಟು ಯೋಜ​ನೆಗೆ ಕಾಲ್ನ​ಡಿಗೆ ಜಾಥಾ ನಡೆ​ಸಿತ್ತು. ಈಗ ಮಹ​ದಾ​ಯಿ​ಗಾಗಿ ನವ​ಲ​ಗುಂದ​ದಿಂದ ಮಹ​ದಾಯಿ ನದಿಯ ತಾಣ​ವಾ​ಗಿ​ರುವ ಬೆಳ​ಗಾ​ವಿ​ವ​ರೆಗೆ ಕಾಲ್ನ​ಡಿಗೆ ನಡೆ​ಸುವ ಉದ್ದೇ​ಶ​ವನ್ನು ಹೊಂದಿದೆ ಎಂಬು​ವುದು ರಹ​ಸ್ಯ​ವಾಗಿ ಏನೂ ಉಳಿ​ದಿಲ್ಲ. ಇದೆಲ್ಲ ನಡುವೆ ಕಾಂಗ್ರೆ​ಸ್‌ನ ಹಿರಿಯ ನಾಯಕ, ಮಾಜಿ ಸಚಿವ ಎಸ್‌.​ಆ​ರ್‌.​ಪಾ​ಟೀಲ್‌ ಅವರು ಕೂಡ ಇತ್ತೀ​ಚೆಗೆ ನವ​ಲ​ಗುಂದ​ದಿಂದ ಸತತ 5 ದಿನ​ಗಳ ಕಾಲ ಉತ್ತರ ಕರ್ನಾ​ಟಕ ಸ್ವಾಭಿ​ಮಾನ ವೇದಿ​ಕೆಯ ಹೆಸ​ರಿ​ನಲ್ಲಿ 200 ಟ್ರ್ಯಾಕ್ಟ​ರ್‌​ಗ​ಳಲ್ಲಿ ರಾರ‍ಯಲಿ ನಡೆ​ಸಿ​ದರು. ಕೃಷ್ಣಾ, ಮಹ​ದಾಯಿ, ನವಲಿ ನೀರಾ​ವರಿ ಯೋಜ​ನೆ​ಗಳ ತ್ವರಿತ ಅನು​ಷ್ಠಾ​ನಕ್ಕೆ ಆಗ್ರ​ಹಿಸಿ ಈ ರಾರ‍ಯಲಿ ನಡೆ​ದಿತ್ತು. ಈ ಹೋರಾಟ ನ್ಯಾಯ​ಯು​ತ​ವಾ​ದದ್ದೇ. ಆದರೆ, ಅದರ ಅನು​ಷ್ಠಾನ ಯಾರು ಮಾಡ​ಬೇಕು ಎನ್ನುವ ಪ್ರಶ್ನೆ ಈಗ ಎದು​ರಾ​ಗಿ​ದೆ.

ಬಿಜೆಪಿಗೂ ನೀರಾವರಿ ಆಸಕ್ತಿ

ಆಡ​ಳಿ​ತಾ​ರೂಢ ಬಿಜೆಪಿ ಕೂಡ ನೀರಾ​ವ​ರಿಗೆ ಹೆಚ್ಚಿನ ಆದ್ಯತೆ ನೀಡು​ತ್ತಿ​ರು​ವುದು ಕಂಡು​ಬಂದಿದೆ. ಈ ಹಿಂದೆ ಜಲ​ಸಂಪ​ನ್ಮೂಲ ಸಚಿ​ವರೇ ಆಗಿದ್ದ ಈಗಿನ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆ​ಟ್‌​ನಲ್ಲಿ ಯುಕೆ​ಪಿ-3 ಯೋಜ​ನೆಗೆ .5000 ಕೋಟಿ ಮತ್ತು ಮಹ​ದಾ​ಯಿಗೆ .1000 ಕೋಟಿ ಹಣ​ವನ್ನು ಘೋಷಣೆ ಮಾಡಿ​ದ್ದಾರೆ.

ಇನ್ನು ಯುಕೆ​ಪಿ-1 ಮತ್ತು 2ರ ಯೋಜನೆ ಅಡಿ ಬೂದಿ​ಹಾ​ಳ-ಪೀರಾ​ಪುರ, ನಂದ​ವಾ​ಡಗಿ, ನಾರಾ​ಯ​ಣ ಬಲ​ದಂತೆ (9ಎ) ವಿಸ್ತ​ರ​ಣೆಗೆ ಕ್ರಮ ಕೈಗೊ​ಳ್ಳು​ವು​ದಾ​ಗಿಯೂ ಬಜೆ​ಟ್‌​ನಲ್ಲಿ ಪ್ರಸ್ತಾ​ಪಿ​ಸಿ​ದ್ದಾರೆ. ಆದರೆ, ಇನ್ನೂ ಕಾರ್ಯ​ಗ​ತ​ವಾ​ಗದ ಕಳಸಾ ಬಂಡೂ​ರಿಗೆ .1000 ಕೋಟಿ ಹಣ ಮೀಸಲು ಇಟ್ಟಿ​ರು​ವುದು ಮುಂದೆ ಬರ​ಲಿ​ರುವ ಚುನಾ​ವ​ಣೆಯ ಉದ್ದೇ​ಶ​ವ​ನ್ನಿ​ಟ್ಟು​ಕೊಂಡೇ ಎನ್ನು​ವು​ದ​ರಲ್ಲಿ ಅನು​ಮಾನ ಮೂಡದೇ ಇರದು. ಗೋವಾ​ದಲ್ಲಿ ಮಾಂಡೋವಿ ನದಿ ಎನಿ​ಸಿ​ಕೊಂಡಿ​ರುವ ಮಹಾ​ದಾ​ಯಿ ಕರ್ನಾ​ಟ​ಕ​ದ​ಲ್ಲಿ 29 ಕಿಮೀ ವ್ಯಾಪ್ತಿ​ಯನ್ನು ಹೊಂದಿದೆ. ಮಾತ್ರ​ವಲ್ಲ, ಕುಡಿ​ಯುವ ನೀರಿ​ಗಾಗಿ ಸಾಕಷ್ಟುಹೋರಾ​ಟ​ಗಳು ನಡೆ​ದಿವೆ. ಮಾತ್ರ​ವಲ್ಲ, ಜೀವ​ಗಳು ಬಲಿ​ಯಾ​ಗಿವೆ. ಆದರೆ ಸಮ​ರ್ಪಕ ಅನು​ಷ್ಠಾನ ಮಾತ್ರ ಇನ್ನೂ ನನ​ಸಾ​ಗಿಲ್ಲ.

ಚಾರಣ ಪ್ರಿಯರಿಗೆ ಯೋಗ್ಯಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ

ಉತ್ತರ ಕರ್ನಾ​ಟ​ಕ​ದ​ವರೇ ಜಲ​ ಸಚಿ​ವ​ರು

2013ರಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದಾಗ ವಿಜ​ಯ​ಪುರ ಜಿಲ್ಲೆ​ಯ ಬಬ​ಲೇ​ಶ್ವರ ಕ್ಷೇತ್ರದಿಂದ ಶಾಸ​ಕರಾಗಿ ಆಯ್ಕೆ​ಯಾ​ಗಿದ್ದ ಎಂ.ಬಿ.​ಪಾ​ಟೀಲ್‌ ಜಲ​ಸಂಪ​ನ್ಮೂಲ ಸಚಿ​ವ​ರಾ​ದರು. ಇದಕ್ಕೂ ಮೊದಲು ಬಿಜೆಪಿ ಅಧಿ​ಕಾರ ಇದ್ದಾಗ ಹಾಲಿ ಮುಖ್ಯ​ಮಂತ್ರಿ ಬೊಮ್ಮಾಯಿ ಅವರೇ ಜಲ​ಸಂಪ​ನ್ಮೂಲ ಸಚಿ​ವ​ರಾ​ಗಿ​ದ್ದರು. 2018ರಲ್ಲಿ ಜೆಡಿ​ಎ​ಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾ​ರ ರಚ​ನೆ​ಯಾ​ಯಿತು. ಆಗ ಡಿ.ಕೆ.​ಶಿ​ವ​ಕು​ಮಾರ್‌ ಅವರು ಜಲ​ಸಂಪ​ನ್ಮೂಲ ಖಾತೆ ನಿರ್ವ​ಹಿ​ಸಿ​ದ್ದ​ರು. ಅದಾದ ಬಳಿ​ಕ 2019ರಲ್ಲಿ ಬಿಜೆಪಿ ಸರ್ಕಾ​ರ ಅಸ್ತಿ​ತ್ವಕ್ಕೆ ಬಂದಾಗ ಗೋಕಾಕ್‌ ಕ್ಷೇತ್ರದ ಶಾಸ​ಕ​ ರಮೇಶ್‌ ಜಾರ​ಕಿ​ಹೊಳಿ ಅವರು ಜಲ​ಸಂಪ​ನ್ಮೂಲ ಖಾತೆ ನಿರ್ವ​ಹಿ​ಸಿ​ದ್ದರು.

ರಮೇಶ್‌ ಸಚಿವ ಸ್ಥಾನಕ್ಕೆ ರಾಜೀ​ನಾಮೆ ಸಲ್ಲಿ​ಸಿದ ನಂತರ ಅವರ ಜಲ​ಸಂಪ​ನ್ಮೂಲ ಖಾತೆ​ಯನ್ನು ಮುಧೋಳ ಕ್ಷೇತ್ರ ಶಾಸಕ ಗೋವಿಂದ ಕಾರ​ಜೋಳ ಪ್ರಸ್ತುತ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. ಒಂದು ಪ್ರಮುಖ ಅಂಶ​ವೆಂದರೆ ಜಲ​ಸಂಪ​ನ್ಮೂಲ ಖಾತೆ​ಯನ್ನು 2008ರಿಂದ (2018ರಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಹೊರ​ತು​ಪ​ಡಿಸಿ) ಉತ್ತರ ಕರ್ನಾ​ಟ​ಕ​ದ​ವರೇ ನಿರ್ವ​ಹಿ​ಸಿ​ದ್ದಾರೆ. ಆದರೂ ನೀರಾ​ವ​ರಿಗೆ ಸಂಬಂಧಿ​ಸಿ​ದಂತೆ ಇನ್ನೂ ಸಾಕಷ್ಟುಅಭಿ​ವೃ​ದ್ಧಿ​ಯಾ​ಗ​ಬೇ​ಕಾದ ಅನಿ​ವಾ​ರ್ಯತೆ ಇದೆ.

ಎಂ.ಬಿ.​ಪಾ​ಟೀ​ಲ್‌ ತಮ್ಮ ಅಧಿ​ಕಾ​ರಾ​ವ​ಧಿ​ಯಲ್ಲಿ ವಿಜ​ಯ​ಪುರ ಜಿಲ್ಲೆ​ಯಲ್ಲಿ ಕೃಷ್ಣಾ ನದಿ​ಯಿಂದ ಸಾಕಷ್ಟುಕೆರೆ​ಗ​ಳಿಗೆ ನೀರು ತುಂಬಿ​ಸುವ ಯೋಜ​ನೆ ಜಾರಿಗೆ ತಂದಿ​ದ್ದಾರೆ. ಅಂದಾಜು 7 ಟಿಎಂಸಿಗೂ ಅಧಿಕ ನೀರು ಕೆರೆ ತುಂಬಿ​ಸುವ ಯೋಜ​ನೆಗೆ ಸದ್ಬ​ಳ​ಕೆ​ಯಾ​ಗು​ತ್ತದೆ. ಇದ​ರಿಂದ ವಿಜ​ಯ​ಪುರ ಜಿಲ್ಲೆ​ಯಲ್ಲಿ ಸಾಕಷ್ಟುಅಂತ​ರ್ಜಲ ಮಟ್ಟಹೆಚ್ಚ​ಳ​ವಾ​ಗಿ​ರು​ವು​ದ​ರಲ್ಲಿ ಎರಡು ಮಾತಿಲ್ಲ. ಅದ​ರಂತೆ ಬೊಮ್ಮಾಯಿ ತಮ್ಮ ಕ್ಷೇತ್ರ​ದಲ್ಲಿ 10 ಸಾವಿರ ಹೆಕ್ಟೇರ್‌ ಪ್ರದೇ​ಶ​ದಲ್ಲಿ ಹನಿ ನೀರಾ​ವರಿ ಯೋಜ​ನೆ​ಯನ್ನು ತಮ್ಮ ಅಧಿ​ಕಾ​ರ​ವ​ಧಿ​ಯಲ್ಲಿ ಜಾರಿಗೆ ತಂದಿದ್ದು ಇನ್ನೂ ಜನ​ಮಾ​ನ​ಸ​ದ​ಲ್ಲಿದೆ.

ಅದ​ರಂತೆ ರಮೇಶ್‌ ಜಾರ​ಕಿ​ಹೊಳಿ ತಮ್ಮ ಅಲ್ಪ ಅಧಿ​ಕಾ​ರ​ವ​ಧಿಯಲ್ಲಿ ಕಳಸಾ ಬಂಡೂರಿ ನದಿ​ಯಿಂದ ಮಹಾ​ದಾಯಿ ಯೋಜ​ನೆಗೆ ಅಡ್ಡಿ​ಯಾ​ಗಿದ್ದ ಎಲ್ಲ ಅಡ್ಡಿ ಆತಂಕ​ಗ​ಳನ್ನು ನಿವಾ​ರಿ​ಸಲು ಯತ್ನಿ​ಸಿ​ದರು. ಇದ​ಕ್ಕಾಗಿ ಕೇಂದ್ರ ಜಲ​ಸಂಪ​ನ್ಮೂಲ ಖಾತೆ ಸಚಿ​ವ​ರನ್ನು ಪದೇ ಪದೇ ಭೇಟಿ​ಯಾ​ಗಿ ರಾಜ್ಯಕ್ಕೆ ಬೇಕಾದ ಅಗತ್ಯ ಯೋಜ​ನೆ​ಗಳ ಜಾರಿಗೆ ಶ್ರಮಿ​ಸಿ​ದ್ದಾರೆ. ಸದ್ಯ ಕಾರ​ಜೋಳ ಕೂಡ ಈ ನಿಟ್ಟಿ​ನಲ್ಲಿ ದಿಟ್ಟಹೆಜ್ಜೆ​ಯ​ನ್ನಿ​ಟ್ಟಿದ್ದಾ​ರೆ. ಘಟ​ಪ್ರಭಾ ಮಡಿ​ಲಿನ ಕ್ಷೇತ್ರ ಮತ್ತು ಬೃಹತ್‌ ನದಿ​ಯಾದ ಕೃಷ್ಣಾ ನದಿ ಸಂಗ​ಮ​ವಾ​ಗುವ ಜಿಲ್ಲೆ​ಯವರಾದ ಅವರು ಇನ್ನೊಂದು ವರ್ಷ​ದಲ್ಲಿ ರೈತರ ಮತ್ತಷ್ಟುಭೂಮಿ​ಯನ್ನು ಹಸಿರಾ​ಗಿ​ಸುವ ನಿಟ್ಟಿ​ನಲ್ಲಿ ಮುಂದಡಿ ಇಟ್ಟಿ​ದ್ದಾ​ರೆ.

Karwar:ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಇತರ ನಗರಗಳಿಗೆ ಮಾದರಿಯಾದ ಕಾರವಾರ ನಗರಸಭೆ!

ಅದ​ರಂತೆ ನದಿ ಜೋಡಣೆ ಯೋಜನೆ ಕೂಡ ಈಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿ​ನಲ್ಲಿ ಉಕ ಭಾಗ​ದ​ಲ್ಲಿರುವ​ ಕೃಷ್ಣಾ, ಮಲ​ಪ್ರಭಾ, ಘಟ​ಪ್ರಭಾ, ಹಿರ​ಣ್ಯ​ಕೇಶಿ, ಕಾಳಿ, ದೂದ​ಗಂಗಾ, ವೇದ​ಗಂಗಾ, ತುಂಗ​ಭದ್ರಾ, ವರದಾ, ಮಹ​ದಾ​ಯಿ, ಭೀಮಾ ನದಿ​ಗಳ ವ್ಯಾಪ್ತಿ​ಯನ್ನು ಹಸಿ​ರು​ಗೊ​ಳಿ​ಸುವ ಉತ್ಸು​ಕ​ತೆ​ಯನ್ನು ಈಗ ರಾಜ​ಕೀಯ ಪಕ್ಷ​ಗಳು ತೋರು​ತ್ತಿದ್ದು, ಪರೋ​ಕ್ಷ​ವಾಗಿ ಈ ವ್ಯಾಪ್ತಿಯ ಮತ​ಗ​ಳನ್ನು ತಮ್ಮ ಬುಟ್ಟಿಗೆ ಹಾಕುವ ಯತ್ನವನ್ನು ಈಗಿ​ನಿಂದಲೇ ನಡೆ​ಸಿವೆ ಎನ್ನು​ವು​ದ​ರಲ್ಲಿ ಎರಡು ಮಾತಿ​ಲ್ಲ.

- ಬ್ರಹ್ಮಾನಂದ ಎನ್‌. ಹಡ​ಗ​ಲಿ. ಬೆಳಗಾವಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!