* ಬಿಜೆಪಿ ಕಚೇರಿಯಲ್ಲಿ ಸಂವಾದದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ
* ದೇಶವನ್ನು ಬಲಿಷ್ಠಗೊಳಿಸಿದ್ದಲ್ಲದೇ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋದ ಮೋದಿ
* ಉಕ್ರೇನ್ ಯುದ್ಧದಲ್ಲಿ 23 ಸಾವಿರ ವಿದ್ಯಾರ್ಥಿಗಳ ರಕ್ಷಣೆ
ಶಿವಮೊಗ್ಗ(ಜೂ.03): ಪ್ರಧಾನಿ ಮೋದಿ ಅವರ 8 ವರ್ಷಗಳ ಸಮರ್ಥ ಅಭಿವೃದ್ಧಿಯ ಆಡಳಿತ ಫಲವಾಗಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆದ ನಂತರ 110ಕ್ಕೂ ಹೆಚ್ಚು ಬಾರಿ ವಿದೇಶ ಪ್ರವಾಸ, 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡುವ ಮೂಲಕ ಭಾರತರ ಕೀರ್ತಿಯನ್ನು ವಿಶ್ವಕ್ಕೆ ಹರಡಿದ್ದಾರೆ. ಮೋದಿ ಅವರ 8 ವರ್ಷದ ಸಾಧನೆಯನ್ನು ಪ್ರತಿ ಬೂತ್ ಮಟ್ಟದಿಂದ ತಿಳಿಸಲಾಗುವುದು. ನಮ್ಮ ಕಾರ್ಯಕರ್ತರು ಮೋದಿ ಅವರ ಎಲ್ಲ ಯೋಜನೆಗಳ ಬಗ್ಗೆ ಅರಿವು ಮೂಡಿಸುವರು. ಈ ಎಲ್ಲ ಸಾಧನೆಗಳಿಂದ 2024ರಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ವಿಜೃಂಭಿಸುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಕೊರೋನಾ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಜನರ ಪ್ರಾಣಗಳನ್ನು ರಕ್ಷಿಸಿದ್ದಾರೆ. ಅನೇಕ ಬಡರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಅವರ ವಿದೇಶಾಂಗ ನೀತಿ ಜಗತ್ತಿನ ಗಮನಸೆಳೆದಿದೆ. ಆಂತರಿಕ ಭದ್ರತೆಯ ವಿಷಯದಲ್ಲಿ ಇಡೀ ವಿಶ್ವವೇ ಅಚ್ಚರಿಪಡುವಷ್ಟುಕ್ರಮ ತೆಗೆದುಕೊಂಡಿದ್ದಾರೆ. ಕಾಶ್ಮೀರ ವಿಷಯ, ಅರುಣಾಚಲ ಪ್ರದೇಶದಲ್ಲಿ ರಕ್ಷಣೆ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ, ಪಾಕಿಸ್ತಾನವನ್ನು ಒಂಟಿಯಾಗಿ ಮಾಡಿದ್ದು ಇತಿಹಾಸ ಎಂದರು.
Karnataka Politics: ಪುಗಸಟ್ಟೆ ಬಂಧಿಸೋಕೆ ನಾನೇನು ಕುರಿಯೇ?: ಈಶ್ವರಪ್ಪ
370ನೇ ವಿಧಿಯನ್ನು ತೆಗೆದುಹಾಕಿದ್ದು ರಾಮಮಂದಿರ ಸೇರಿದಂತೆ ಇಡೀ ರಾಷ್ರ್ಟಾದ್ಯಂತ ಹಿಂದೂ ದೇವಾಲಯಗಳ ಪುನರುಜ್ಜೀವನಗೊಳಿಸಿದ್ದು, ಯೋಗಕ್ಕೆ ಒತ್ತುಕೊಟ್ಟಿದ್ದು ಉಕ್ರೇನ್ ಯುದ್ಧದಲ್ಲಿ 23 ಸಾವಿರ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದು ಮೋದಿ ಅವರ ಸಾಧನೆ ಎಂದು ಬಣ್ಣಿಸಿದರು.
ದೇಶವನ್ನು ಬಲಿಷ್ಠಗೊಳಿಸಿದ್ದಲ್ಲದೇ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಿದ್ದಾರೆ. 8 ಲಕ್ಷ ಹಳ್ಳಿಗಳನ್ನು ಬಹಿರ್ದೆಸೆ ಮುಕ್ತ ಮಾಡಿದ್ದಾರೆ. ಎರಡೂವರೆ ಕೋಟಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. 9.5 ಕೋಟಿ ಬಡವರ ಮನೆಗಳಿಗೆ ನೀರು ನೀಡಿದ್ದಾರೆ. 45 ಕೋಟಿಗೂ ಹೆಚ್ಚು ಜನರು ವಿವಿಧ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್ ಇದ್ದರು.