Karnataka Politics: ಕರ್ನಾಟಕದಲ್ಲಿ ಅವಧಿಗೆ ಮುನ್ನವೇ ಚುನಾವಣೆ?

Published : Mar 13, 2022, 06:31 AM IST
Karnataka Politics: ಕರ್ನಾಟಕದಲ್ಲಿ ಅವಧಿಗೆ ಮುನ್ನವೇ ಚುನಾವಣೆ?

ಸಾರಾಂಶ

*  ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ತಿರಸ್ಕಾರ *  ಪಂಚರಾಜ್ಯ ಚುನಾವಣೆ ಬೆನ್ನಲ್ಲೇ ಹಬ್ಬಿದ್ದ ವದಂತಿ *  ಗುಜರಾತ್‌ ಜತೆ ರಾಜ್ಯ ಎಲೆಕ್ಷನ್‌ ಬಗ್ಗೆ ಗಾಳಿಸುದ್ದಿ  

ಬೆಂಗಳೂರು(ಮಾ.13):  ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ(BJP) ಸಾಧಿಸಿದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ(Karnataka) ಅವಧಿ ಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಕುರಿತು ವದಂತಿ ಹಬ್ಬಿದೆ. ಆದರೆ, ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನ(Congress) ಮೂಲಗಳು ಇಂತಹ ಸಾಧ್ಯತೆಯನ್ನು ಅಲ್ಲಗಳೆಯುತ್ತವೆ. ಜೆಡಿಎಸ್‌ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು(HD Devegowda) ‘ಅವಧಿಪೂರ್ವ ಚುನಾವಣೆಗೆ ನಾವು ಸಿದ್ಧ’ ಎಂದರೂ, ‘ಈ ರೀತಿ ಮಾಡುವುದು ಸುಲಭವಲ್ಲ’ ಎನ್ನುವ ಮೂಲಕ ಇಂಥ ಸಾಧ್ಯತೆ ಕ್ಷೀಣ ಎಂಬ ಸಂದೇಶ ನೀಡಿದ್ದಾರೆ.

ಪರಿಪೂರ್ಣ ಆಡಳಿತ ನಡೆಸಿ ಅಂತಿಮ ವರ್ಷ ಜನಪ್ರಿಯ ಬಜೆಟ್‌(Budget) ಮಂಡಿಸಿ ಜನರ ಮನ ಗೆಲ್ಲುವ ಅವಕಾಶವಿರುವಾಗ ಅವಧಿ ಪೂರ್ವ ಚುನಾವಣೆಗೆ ಹೋಗುವ ಅಗತ್ಯವೇನಿದೆ ಎಂಬ ಪ್ರಶ್ನೆ ಬಿಜೆಪಿ ಮೂಲಗಳಿಂದ ಕೇಳಿ ಬಂದರೆ, ಕಾಂಗ್ರೆಸ್‌ ಮೂಲಗಳು ಕೂಡ ಇಂತಹ ಸಾಧ್ಯತೆಯನ್ನು ಅಲ್ಲಗಳೆಯುತ್ತವೆ. ಖುದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೇ ಇಂತಹ ಬೆಳವಣಿಗೆ ಸಾಧ್ಯವಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡದವರು ಅವಧಿ ಪೂರ್ವ ಚುನಾವಣೆ ಮಾಡ್ತಾರಾ ಎಂದು ಪ್ರಶ್ನಿಸುವ ಮೂಲಕ ಈ ವದಂತಿಯನ್ನು ನಿರಾಕರಿಸುತ್ತಾರೆ.

Congress Working Committee Meet ಇಂದು ಐತಿಹಾಸಿಕ ಘಟನೆ ನಡೆವ ಬಗ್ಗೆ ಭಾರಿ ವದಂತಿ

ವದಂತಿಗೆ ಕಾರಣ ಪಂಚರಾಜ್ಯ ಯಶಸ್ಸು:

ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರ ಬಿದ್ದ ನಂತರ ಭಾರಿ ಹುಮ್ಮಸ್ಸಿನಲ್ಲಿರುವ ಬಿಜೆಪಿ ಗುಜರಾತ್‌ ಚುನಾವಣೆ ಜತೆಗೆ ಅಂದರೆ ನವೆಂಬರ್‌- ಡಿಸೆಂಬರ್‌ನಲ್ಲಿ ಕರ್ನಾಟಕದಲ್ಲೂ ಚುನಾವಣೆ(Election) ನಡೆಸುವ ಚಿಂತನೆ ಹೊಂದಿದೆ ಎಂಬುದು ಈ ವದಂತಿಯ ಸಾರ. ರಾಷ್ಟ್ರ ಮಟ್ಟದಲ್ಲಿ ಮೋದಿ(Narendra Modi) ಪರ ಅಲೆಯಿರುವಾಗ ಅದನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮತ್ತೆ ಅಧಿಕಾರ ಗಿಟ್ಟಿಸುವ ಉದ್ದೇಶದಿಂದ ಇಂತಹ ಚಿಂತನೆ ಹೊಂದಿದೆ ಎಂಬುದು

ವದಂತಿಯ ಹಿಂದಿನ ತರ್ಕ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ‘ಅವಧಿಗೂ ಪೂರ್ವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Assembly Elections) ನಡೆಯೋದು ಅನುಮಾನ. ಆದರೂ ಅವ​ಧಿಗೂ ಮುನ್ನ ಚುನಾ​ವಣೆ ನಡೆ​ದರೆ ಅದನ್ನು ಎದು​ರಿ​ಸಲು ನಾವು ಸಿದ್ಧ’ ಎಂದರು.

‘ರಾಜ್ಯ ಸರ್ಕಾ​ರದ(Government of Karnataka) ಬಜೆಟ್‌ ನೋಡಿ ಕೆಲವರು ಹೀಗೆ ಹೇಳುತ್ತಿದ್ದಾರೆ. ನನಗಂತೂ ಹಾಗೆ ಅನ್ನಿಸೋದಿಲ್ಲ. ಜಿಲ್ಲಾ ಪಂಚಾಯ್ತಿ ಚುನಾ​ವಣೆಯನ್ನೇ ಮಾಡ​ದ​ವರು ವಿಧಾನಸಭೆ ಚುನಾವಣೆ ಮಾಡ್ತಾರಾ? ನನಗಿರೋ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನ ಚುನಾವಣೆಗೆ ಹೋಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಅವಕಾಶ ಕಳೆದುಕೊಳ್ಳಲ್ಲ- ಬಿಜೆಪಿ:

‘ರಾಜ್ಯ ಸರ್ಕಾರದ ಆಡಳಿತ ಸುಲಲಿತವಾಗಿ ನಡೆದಿದೆ. ಸಂಪೂರ್ಣ ಆಡಳಿತ ನಡೆಸುವ ಅವಕಾಶವಿದೆ. ಹೀಗಿರುವಾಗ ಅವಧಿ ಪೂರ್ವ ಚುನಾವಣೆ ನಡೆಸುವ ಅಗತ್ಯವಾದರೂ ಬಿಜೆಪಿಗೆ ಏನಿದೆ? ಗುಜರಾತ್‌ ಚುನಾವಣೆ ವೇಳೆ ಕರ್ನಾಟಕದಲ್ಲೂ ಚುನಾವಣೆ ನಡೆಸುತ್ತಾರೆ ಎಂಬುದು ವದಂತಿ ಸಾರ. ಆದರೆ, ಹೈಕಮಾಂಡ್‌ ಗುಜರಾತ್‌ನಂತಹ ಪ್ರಮುಖ ರಾಜ್ಯದ ಚುನಾವಣೆ ವೇಳೆ ಕರ್ನಾಟಕದಂತಹ ಮತ್ತೊಂದು ದೊಡ್ಡ ಹಾಗೂ ದಕ್ಷಿಣ ಭಾರತದ ದೃಷ್ಟಿಯಿಂದ ತನಗೆ ಅತ್ಯಂತ ಮಹತ್ವದ್ದೇನಿಸುವ ರಾಜ್ಯದ ಚುನಾವಣೆಗೂ ಕೈ ಹಾಕುವ ರಿಸ್ಕ್‌ ಏಕೆ ತೆಗೆದುಕೊಳ್ಳುತ್ತದೆ?’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಪ್ರಶ್ನಿಸುತ್ತಾರೆ.

‘ಪಕ್ಷದೊಳಗೆ ಅಂತಹ ಚರ್ಚೆಗಳೇನೂ ಇಲ್ಲ. ವಾಸ್ತವವಾಗಿ ಬಿಬಿಎಂಪಿ ಚುನಾವಣೆಯನ್ನು(BBMP Election) ನಡೆಸುವ ಚರ್ಚೆಯಿದೆ. ಈ ಚುನಾವಣೆಯಲ್ಲಿ ಜಯಭೇರಿ ಭಾರಿ ಅನಂತರ ಮುಂದಿನ ವರ್ಷ ಅಂದರೆ ಅಂತಿಮ ವರ್ಷದ ಬಜೆಟ್‌ ಅನ್ನು ಅತ್ಯಂತ ಜನಪ್ರಿಯ ಮಾದರಿಯಲ್ಲಿ ಮಂಡಿಸಿ ಅದರ ಲಾಭ ಪಡೆದು ಚುನಾವಣೆಗೆ ಹೋಗುವುದು ಉತ್ತಮ ತಂತ್ರ. ಇಂತಹ ತಂತ್ರಗಾರಿಕೆ ಬಳಸಲು ಅಗತ್ಯವಿರುವ ಎಲ್ಲ ಅವಕಾಶಗಳು ಇವೆ. ಹೀಗಾಗಿ ಅನಗತ್ಯವಾಗಿ ಅವಧಿ ಪೂರ್ವ ಚುನಾವಣೆಯನ್ನು ಮೈ ಮೇಲೆ ಎಳೆದುಕೊಳ್ಳುವ ಅಗತ್ಯವಾದರೂ ಬಿಜೆಪಿಗೆ ಏನಿದೆ? ಅಂತಹ ಆಲೋಚನೆಯೇ ಸದ್ಯಕ್ಕೆ ಇಲ್ಲ’ ಎಂದು ಅವರು ಹೇಳುತ್ತಾರೆ.

Election Result 5 ರಾಜ್ಯಗಳಲ್ಲಿ ಸರ್ಕಾರ ರಚನೆ ಕಸರತ್ತು ಶುರು

ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೇ ಸರ್ಕಾರ ಮಾಡಿಲ್ಲ. ಇನ್ನು ಅವಧಿಪೂರ್ವ ವಿಧಾನಸಭೆ ಚುನಾವಣೆಗೆ ಹೋಗುತ್ತಾ? ನನಗಂತೂ ಅನುಮಾನವಿದೆ. ಆದಾಗ್ಯೂ ಅವಧಿಗೆ ಮುನ್ನವೇ ಚುನಾವಣೆ ನಡೆದರೆ ಎದುರಿಸಲು ನಾವಂತೂ ಸಿದ್ಧರಿದ್ದೇವೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮೋದಿ ಭೇಟಿ ಕಾರಣ ವದಂತಿಗೆ ರೆಕ್ಕೆ ಪುಕ್ಕ

ಪಂಚರಾಜ್ಯ ಫಲಿತಾಂಶ ಬೆನ್ನಲ್ಲೇ, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿರುವ ಗುಜರಾತ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ರಣ ಕಹಳೆ ಮೊಳಗಿಸಿದ್ದಾರೆ. ಅಲ್ಲದೆ, ಮುಂದಿನ ತಿಂಗಳು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಪಂಚಾಯತ್‌ರಾಜ್‌ ಕಾರ್ಯಕ್ರಮದ ನಿಮಿತ್ತ ಏ.24ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಕರ್ನಾಟಕ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಮೋದಿ ಭೇಟಿ ನೀಡುತ್ತಿರುವುದರಿಂದ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಬಹುದು ಎಂಬ ಊಹಾಪೋಹಗಳಿಗೆ ರೆಕ್ಕಪುಕ್ಕ ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!