ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ: ಚಟುವಟಿಕೆ ಶುರು

Published : May 13, 2022, 04:14 AM ISTUpdated : May 13, 2022, 04:17 AM IST
ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ: ಚಟುವಟಿಕೆ ಶುರು

ಸಾರಾಂಶ

* ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಹೊರಟ್ಟಿ ಸ್ಪರ್ಧೆ? *  ಹೊರಟ್ಟಿ ವಿರುದ್ಧ ಗುರಿಕಾರ ಕಾಂಗ್ರೆಸ್‌ ಅಭ್ಯರ್ಥಿ *  ಬಿಜೆಪಿ ಬಲ ಜಾಸ್ತಿ  

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.13):  ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಪ್ರತಿನಿಧಿಸುತ್ತಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದೆ. ಇಷ್ಟುದಿನ ಶಾಂತವಾಗಿದ್ದ ಶಿಕ್ಷಕರ ಕ್ಷೇತ್ರದಲ್ಲಿ ಇದೀಗ ಮತ್ತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಹೇಗಾದರೂ ಮಾಡಿ ಈ ಸಲ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುಲು ಕಾಂಗ್ರೆಸ್‌(Congress) ಕಾತರಿಸುತ್ತಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಬರೋಬ್ಬರಿ ಏಳು ಬಾರಿ ಗೆದ್ದು ರಾಷ್ಟ್ರ ದಾಖಲೆ ನಿರ್ಮಿಸಿದವರು ಹೊರಟ್ಟಿ. ಈ ಏಳರಲ್ಲಿ ಮೊಟ್ಟಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಬಳಿಕ ನಡೆದ ಆರು ಚುನಾವಣೆಗಳಲ್ಲೂ ಜನತಾ ಪರಿವಾರದಿಂದ ಸ್ಪರ್ಧಿಸಿ ಗೆಲುವು ಕಂಡವರು. ಸದ್ಯ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿ(BJP) ಸೇರಿ ಆ ಪಕ್ಷದಿಂದಲೇ ಈ ಸಲ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?

76ರ ಹಿಂಜರಿಕೆ:

ಬಿಜೆಪಿಯಲ್ಲಿ 75 ದಾಟಿದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಮಾತಿದೆ. ಆದರೆ ಹೊರಟ್ಟಿ ಅವರಿಗೀಗ 76. ವಯಸ್ಸಿನ ವಿನಾಯಿತಿ ನೀಡುವುದೇ ಬಿಜೆಪಿ? ವಯಸ್ಸಿನ ಕಾರಣ ನೀಡಿ ಹೊರಟ್ಟಿ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದರೆ, ಅವರ ಪುತ್ರ ವಸಂತ ಹೊರಟ್ಟಿ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವ ಎಲ್ಲ ಸಾಧ್ಯತೆಗಳಿವೆ. ಆದರೆ ಸದ್ಯ ಚುನಾವಣೆಗೆ ಸಂಬಂಧಪಟ್ಟಂತೆ ಬಸವರಾಜ ಹೊರಟ್ಟಿ ಅವರ ತಯಾರಿ ನೋಡಿದರೆ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಗುರಿಕಾರ ಗುರಿ?:

ಈ ನಡುವೆ ಶಿಕ್ಷಕರ ಕ್ಷೇತ್ರಕ್ಕೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಕಾಂಗ್ರೆಸ್‌ ಪಕ್ಷ ತಯಾರಿ ನಡೆಸಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸೋಲನುಭವಿಸಿರುವ ಬಸವರಾಜ ಗುರಿಕಾರ ಅವರನ್ನು ಕಾಂಗ್ರೆಸ್‌ ತನ್ನ ಹುರಿಯಾಳು ಎಂದು ಘೋಷಿಸಿಕೊಂಡಿದೆ. ಏಳು ಬಾರಿ ಗೆದ್ದಿರುವ ಹೊರಟ್ಟಿಅವರಿಗೆ ಈ ಸಲ ಸೋಲಿನ ರುಚಿ ತೋರಿಸಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ, ಪ್ರಚಾರವನ್ನೂ ಭರ್ಜರಿಯಾಗಿ ನಡೆಸಿದೆ.

ಲಿಂಬಿಕಾಯಿ ಕಥೆ?:

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ(Mohan Limbikai) ತಾವೇ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರವನ್ನೂ ಶುರು ಮಾಡಿದ್ದರು. ಅದಕ್ಕೆ ತಕ್ಕಂತೆ ಕೇಂದ್ರ ಸಮಿತಿಗೂ ಅವರದೊಬ್ಬರದೇ ಹೆಸರು ಹೋಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊರಟ್ಟಿ ಬಿಜೆಪಿಗೆ ಬರುತ್ತಿರುವುದು ಮತ್ತು ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಲಿಂಬಿಕಾಯಿ ಅವರಿಗೆ ನುಂಗಲಾರದ ತುತ್ತಾಗಿದೆ.

ಇಷ್ಟುದಿನ ತಾವೇ ಬಿಜೆಪಿ ಅಭ್ಯರ್ಥಿ ಎಂದುಕೊಂಡಿದ್ದ ಲಿಂಬಿಕಾಯಿ ಅವರಿಗೆ ಹೊರಟ್ಟಿಅವರೇ ಅಡ್ಡಗಾಲಾದಂತಾಗಿದೆ. ಟಿಕೆಟ್‌ ಸಿಗದಿದ್ದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಪಕ್ಷದೊಂದಿಗೆ ನಿಲ್ಲುತ್ತಾರೋ? ಅಥವಾ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಲಿಂಬಿಕಾಯಿ ಅವರ ನಿರ್ಧಾರ ಇನ್ನೂ ನಿಗೂಢವಾಗಿಯೇ ಇದೆ. ಜೆಡಿಎಸ್‌(JDS) ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಹಾಗಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ.

JDS ತೊರೆದು BJP ಸೇರಿದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

ಬಿಜೆಪಿ ಬಲ ಜಾಸ್ತಿ

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರವಿದು. ಒಟ್ಟು 23 ಶಾಸಕರು ಇದ್ದಾರೆ. ಇದರಲ್ಲಿ 18 ಶಾಸಕರು ಬಿಜೆಪಿ, ಐವರು ಕಾಂಗ್ರೆಸ್‌ನವರು. ಮೂವರು ಎಂಎಲ್‌ಸಿ ಪೈಕಿ ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್‌ನವರು. ಈ ಕ್ಷೇತ್ರದಲ್ಲಿ ಬರುವ ಮೂವರು ಸಂಸದರೂ ಬಿಜೆಪಿಗರೇ. ಹೀಗಾಗಿ ಬಿಜೆಪಿಯ ತೂಕ ಜಾಸ್ತಿಯಿದೆ. ಇದು ಬಿಜೆಪಿ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ.

ಎರಡ್ಮೂರು ತಿಂಗಳ ಮುಂಚೆಯೇ ನಾವು ನಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಹೊರಟ್ಟಿಅವರು ಇದೀಗ ಬಿಜೆಪಿ ಸೇರುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರಲ್ಲಿ ಬೇಸರವಿದೆ. ಇದು ನಮ್ಮ ಪಕ್ಷದ ಅಭ್ಯರ್ಥಿಗೆ ವರದಾನವಾಗಲಿದೆ. ಈ ಸಲ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವುದು ಖಚಿತ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ತಿಳಿಸಿದ್ದಾರೆ.  

ಬಿಜೆಪಿ ಯಾರಿಗೆ ಟಿಕೆಟ್‌ ಕೊಡುತ್ತದೆಯೋ ಗೊತ್ತಿಲ್ಲ. ಅದನ್ನು ಕೇಂದ್ರ ಸಮಿತಿ ನಿರ್ಧರಿಸುತ್ತದೆ. ಆದರೆ ಚುನಾವಣೆ ತಯಾರಿ ಮಾತ್ರ ಭರಪೂರ ನಡೆದಿದೆ. ಯಾರಿಗೆ ಟಿಕೆಟ್‌ ಕೊಟ್ಟರೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಕಟ್ಟಿಟ್ಟಬುತ್ತಿ ಅಂತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ