Karnataka Cabinet ಸಂಘ ಪರಿವಾರ ಮೂಲದ ಸಚಿವರ ಖಾತೆ ಬದಲಿಲ್ಲ?

Published : May 13, 2022, 03:08 AM IST
Karnataka Cabinet ಸಂಘ ಪರಿವಾರ ಮೂಲದ ಸಚಿವರ ಖಾತೆ ಬದಲಿಲ್ಲ?

ಸಾರಾಂಶ

- ಸಂಪುಟ ಸರ್ಜರಿ ಚರ್ಚೆ ನಡುವೆಯೇ ವರಿಷ್ಠರ ನಿರ್ಧಾರ -ಆರಗ, ನಾಗೇಶ್‌, ಸುನೀಲ್‌, ಆಚಾರ್‌ ಖಾತೆ ಬದಲಿಲ್ಲ? - ಆರೆಸ್ಸೆಸ್‌ ಮೂಲದ ಮತ್ತಷ್ಟುಮಂದಿಗೆ ಮಂತ್ರಿ ಸ್ಥಾನ?  

ಬೆಂಗಳೂರು(ಮೇ.13): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸರ್ಜರಿ ನಡೆಯಲಿದೆ ಎಂಬ ಚರ್ಚೆಯ ನಡುವೆಯೇ ಬೊಮ್ಮಾಯಿ ಅವರೊಂದಿಗೆ ಹೊಸದಾಗಿ ಸಚಿವರಾಗಿರುವ ಸಂಘ ಪರಿವಾರ ಮೂಲದ ಸಚಿವರ ಖಾತೆಗಳನ್ನು ಬದಲಾಯಿಸದೇ ಇರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆ ವೇಳೆಯೇ ಸಂಘ ಪರಿವಾರ ಮೂಲದ ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್‌, ವಿ.ಸುನೀಲ್‌ ಕುಮಾರ್‌, ಹಾಲಪ್ಪ ಆಚಾರ್‌ ಅವರು ಮೊದಲ ಬಾರಿಗೆ ಸಚಿವರಾಗಿ ನೇಮಕಗೊಂಡರು. ಸಂಘ ಹಾಗೂ ಪಕ್ಷ ನಿಷ್ಠರಿಗೆ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬ ಉದ್ದೇಶದಿಂದ ಇವರ ಹೆಸರನ್ನು ಸೂಚಿಸಲಾಗಿತ್ತು ಎನ್ನಲಾಗಿದೆ.

ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಶಾಸಕ ಕುಮಾರಸ್ವಾಮಿ!

ಈ ನಾಲ್ವರಿಗೂ ಪ್ರಬಲ ಖಾತೆಗಳನ್ನೇ ನೀಡಲಾಗಿದೆ. ಆರಗ ಜ್ಞಾನೇಂದ್ರ ಅವರಿಗೆ ಗೃಹ, ನಾಗೇಶ್‌ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸುನೀಲ್‌ಕುಮಾರ್‌ ಅವರಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ, ಹಾಲಪ್ಪ ಆಚಾರ್‌ ಅವರಿಗೆ ಗಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗಳ ಜವಾಬ್ದಾರಿ ವಹಿಸಲಾಗಿದೆ. ಪಕ್ಷದ ವರಿಷ್ಠರು ಮತ್ತು ಸಂಘ ಪರಿವಾರದ ಮುಖಂಡರು ಅಳೆದು ತೂಗಿ ಈ ಖಾತೆ ನೀಡಿರುವುದರಿಂದ ಚುನಾವಣೆ ಹೊಸ್ತಿಲಲ್ಲಿ ಬದಲಾವಣೆ ಮಾಡಬಾರದು ಎಂಬ ನಿಲವಿಗೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಾಂಗ್ರೆಸಿಗರು ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಈ ಹಂತದಲ್ಲಿ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಮೂಲ ಬಿಜೆಪಿಗರಿಗೆ ನೀಡಿದ ಖಾತೆಯಲ್ಲಿ ಕೈಯಾಡಿಸುವುದು ಸೂಕ್ತವಲ್ಲ ಎಂಬುದು ವರಿಷ್ಠರ ಅಭಿಪ್ರಾಯ. ಸಾಧ್ಯವಿದ್ದರೆ ಸಂಘ- ಪರಿವಾರದ ಹಿನ್ನೆಲೆಯ ಇನ್ನಷ್ಟುಶಾಸಕರಿಗೆ ಸಚಿವ ಸ್ಥಾನ ನೀಡುವುದು ಬಿಜೆಪಿ ವರಿಷ್ಠರ ಉದ್ದೇಶ ಎಂದು ತಿಳಿದು ಬಂದಿದೆ.

ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದ್ದಾರೆ.

ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಸ್ಥಿತಿಗತಿ ಹಾಗೂ ಸಚಿವ ಸಂಪುಟದ ಕುರಿತು ಅಮಿತ್‌ ಶಾ ಅವರ ಜತೆ ಸಮಾಲೋಚನೆ ನಡೆಸಿದ್ದೇನೆ. ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗುತ್ತವೆ. ಸ್ಥಿತಿ ಗತಿಗಳನ್ನು ಅವರಿಗೆ ವಿವರಿಸಲಾಗಿದೆ. ಮುಂದಿನ ಒಂದು ವಾರ ಬಹಳ ಮುಖ್ಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ದೊಡ್ಡ ಪ್ರಮಾಣದ ಚುನಾವಣೆ ಇರುವುದರಿಂದ ಅದರ ಪರಿಣಾಮಗಳೇನು ಎಂದು ಅಧ್ಯಯನ ಮಾಡಿ ತಿಳಿಸುವುದಾಗಿ ಶಾ ಹೇಳಿದ್ದಾರೆ ಎಂದರು.

Cabinet Reshuffle ಸ್ಥಳೀಯ ಚುನಾವಣೆ ಮೇಲೆ ಸಂಪುಟ ಪುನಾರಚನೆ ಭವಿಷ್ಯ!

ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಸುಪ್ರೀಂಕೋರ್ಚ್‌ ಆದೇಶದ ಪರಿಣಾಮಗಳೇನು, ಚುನಾವಣಾ ಆಯೋಗದ ನಿರ್ಧಾರ, ಸಚಿವ ಸಂಪುಟದ ವಿಸ್ತರಣೆ ಇವೆಲ್ಲವುಗಳ ತೀರ್ಮಾನಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಿ ಎರಡು ಅಥವಾ ಮೂರು ದಿನಗಳ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ನಿರ್ಣಯವನ್ನು ತಿಳಿಸುವುದಾಗಿ ಅಮಿತ್‌ ಶಾ ಹೇಳಿದ್ದಾರೆ ಎಂದು ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ