ಮರಳು ಮಾಫಿಯಾ ವಿರುದ್ಧ ಪೊಲೀಸ್‌ ಸಮರ ಹಠಾತ್‌ ಧಾಳಿ; 30ಕ್ಕೂ ಅಧಿಕ ವಾಹನಗಳ ವಶ

By Kannadaprabha News  |  First Published Jul 3, 2023, 2:23 PM IST

ಮಹಿಷವಾಡಗಿ ಬಳಿ ಕೃಷ್ಣಾ ನದಿ ದಡದಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧ ಅಥಣಿ ಪೊಲೀಸರು ಸಮರ ಸಾರಿದ್ದು, ಶನಿವಾರ ರಾತ್ರೋ ರಾತ್ರಿ 30ಕ್ಕೂ ಹೆಚ್ಚು ಮರಳು ಸಾಗಣೆ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.


ಅಥಣಿ (ಜು.3) : ಮಹಿಷವಾಡಗಿ ಬಳಿ ಕೃಷ್ಣಾ ನದಿ ದಡದಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧ ಅಥಣಿ ಪೊಲೀಸರು ಸಮರ ಸಾರಿದ್ದು, ಶನಿವಾರ ರಾತ್ರೋ ರಾತ್ರಿ 30ಕ್ಕೂ ಹೆಚ್ಚು ಮರಳು ಸಾಗಣೆ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆಯಿಂದ ಬೆಳಗಾವಿ ಗಡಿ ಪ್ರವೇಶಿಸಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ಹಠಾತ್‌ ಧಾಳಿ ನಡೆಸಿದ್ದು, ದಂಧೆಕೋರರು ವಾಹನಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರು, 26 ಟ್ರ್ಯಾಕ್ಟರ್‌, 4 ಜೆಸಿಪಿ, 2 ಹೈವಾ (ಟಿಪ್ಪರ್‌)ಗಳನ್ನು ವಶಕ್ಕೆ ಪಡೆದಿದ್ದು, ಅಥಣಿ ಡಿವೈಎಸ್ಪಿ ಕಚೇರಿ ಆವರಣದಲ್ಲಿ ವಾಹನಗಳನ್ನು ಇರಿಸಲಾಗಿದೆ.

Latest Videos

undefined

ದಾವಣಗೆರೆ: ನಾಗೇನಹಳ್ಳಿ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ; ನಾಲ್ವರ ಬಂಧನ

ಬೆಳಗಾವಿ ಜಿಲ್ಲೆ ವ್ಯಾಪ್ಯಿಯ ಕೃಷ್ಣಾ ನದಿ ಪಾತ್ರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅಥಣಿ ಮತ್ತು ಐಗಳಿ ಪೊಲೀಸರು ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಗಡಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಶನಿವಾರ ರಾತ್ರೋ ರಾತ್ರಿ ತ್ವರಿತ ಕಾರ್ಯಾಚರಣೆಗೆ ಇಳಿದಿದ್ದಾರೆ.

ಈ ಎರಡೂ ಠಾಣೆಗಳ ಪೊಲೀಸ್‌ ಸಿಬ್ಬಂದಿ ಕೃಷ್ಣಾ ನದಿ ಪಾತ್ರದಲ್ಲಿ ಏಕ ಕಾಲಕ್ಕೆ ದಾಳಿಗಿಳಿದಾಗ ಮರಳು ದಂಧೆಕೋರರು ಜೆಸಿಬಿ, ಟಿಪ್ಪರ್‌ ಮತ್ತು ಟ್ರ್ಯಾಕ್ಟರ್‌ ಬಳಸಿ ಮರಳೆತ್ತುತ್ತಿರುವುದು ಕಂಡು ಬಂದಿದೆ. ಪೊಲೀಸರು ಅನಿರೀಕ್ಷಿತ ಧಾಳಿ ನಡೆಸುತ್ತಿದ್ದಂತೆ ಬಾಗಲಕೋಟೆ ಜಿಲ್ಲೆಯವರು ಎನ್ನಲಾದ ಅಕ್ರಮ ಮರಳು ದಂಧೆಕೋರರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಮಹಿಷವಾಡಗಿ ಬಳಿ ಅಕ್ರಮ ಮರಳುಗಾರಿಕೆ ವಿರುದ್ಧ ದಾಳಿ ನಡೆಸುವ ಮೂಲಕ ಪೊಲೀಸರು ಸಂಚಲನ ಮೂಡಿಸಿದ್ದು, ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶಿವಶಂಕರ ಮುಖರಿ, ರಾಕೇಶ ಬಗಲಿ, ಚಂದ್ರಕಾಂತ ಸಾಗನೂರ, ಸಿಬ್ಬಂದಿ ರಮೇಶ ಹಾದಿಮನಿ, ಜಿ.ಎಚ್‌.ಹೊನವಾಡ, ಶ್ರೀಧರ ಬಾಂಗಿ, ಮಹಾಂತೇಶ ಖೋತ, ಕೆ.ಬಿ.ಶಿರಗೂರ, ಟಿ.ಬಿ.ಪಾಟೀಲ, ಸದಾಶಿವ ಅರಬ್ಯಾನವಾಡಿ, ಕೆ.ಎಚ್‌.ಡಾಂಗೆ ಇತರರಿದ್ದರು.

26 ಮಂದಿ ವಿಚಾರಣೆ:

ಅಥಣಿ ತಾಲೂಕಿನಲ್ಲಿ ಮರಳೆತ್ತುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸದ್ಯ 26 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಪೊಲೀಸರು ದಾಳೆ ನಡೆಸುತ್ತಲೇ ವಾಹನಗಳನ್ನು ಇದ್ದಲ್ಲೇ ಬಿಟ್ಟು ಪರಾರಿಯಾಗಿದ್ದರು ಚಾಲಕರು. ಎಲ್ಲ ವಾಹನಗಳನ್ನು ಪೊಲೀಸ್‌ ಠಾಣೆಗೆ ತಂದು ನಂಬರ್‌ ಆಧರಿಸಿ ವಾಹನ ಮಾಲೀಕರು ಮತ್ತು ಚಾಲಕರನ್ನು ಕರೆಯಿಸಿ ಪೊಲೀಸ್‌ ಅಧಿಕಾರಿಗಳು ವಿಚಾರಣೆ ಶುರು ಮಾಡಿದ್ದಾರೆ. ವಶಕ್ಕೆ ಪಡೆದವರಲ್ಲಿ ಬಹುತೇಕ ಬಾಗಲಕೋಟೆ ಜಿಲ್ಲೆಯವರೇ ಎನ್ನಲಾಗಿದೆ. ಅಕ್ರಮ ಮರಳು ದಂಧೆಯಲ್ಲಿ ಯಾರಾರ‍ಯರ ಕೈವಾಡವಿದೆ? ಮರಳು ದಂಧೆಕೋರರ ಬೆನ್ನಿಗ್ಯಾರಿದ್ದಾರೆ? ಎಂಬಿತ್ಯಾದಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಉನ್ನತ ಅಧಿಕಾರಿಗಳು.

ಬತ್ತಿದ ಕೃಷ್ಣೆ ಒಡಲು ಬಗೆಯುತ್ತಿದ್ದಾರೆ!

ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ಗಡಿಯಲ್ಲಿ ಹರಿದಿರುವ ಕೃಷ್ಣಾ ನದಿ ಬತ್ತಿ ಬರಿದಾಗಿರುವುದೇ ಅಕ್ರಮ ಮರಳು ದಂಧೆ ಕೋರರಿಗೆ ವರವಾಗಿದೆ. ಮುಂಗಾರು ಕೈ ಕೊಟ್ಟಿದ್ದನ್ನೇ ಬಂಡವಾಳ ಮಾಡಿಕೊಂಡ ಮರಳು ದಂಧೆಕೋರರು ಬಹು ದಿನಗಳಿಂದಲೂ ನದಿ ಪಾತ್ರದಲ್ಲಿ ಮರಳೆತ್ತ ತೊಡಗಿದ್ದಾರೆ.

ಅಲ್ಲ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಮತ್ತು ರಬಕವಿ-ಬನಹಟ್ಟಿತಾಲೂಕಿನ ಗಡಿಯಲ್ಲಿ ಹಾಗೂ ಇತ್ತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಬಳಿ ಎಗ್ಗಿಲ್ಲದೆ ಕೃಷ್ಣೆ ಒಡಲು ಬಗೆಯಲಾಗುತ್ತಿದೆ. ಕಳೆದೊಂದು ತಿಂಗಳಿಂದಲೂ ನಿತ್ಯವೂ ನೂರಾರು ವಾಹನಗಳು ಅಕ್ರಮ ಮರಳೆತ್ತಿ ಸಾಗಿಸುವಲ್ಲಿ ನಿರತವಾಗಿವೆ.

ಹತ್ತಾರು ಜೆಸಿಬಿ ವಾಹನಗಳು ನದಿ ದಡ, ಬತ್ತಿದ ನದಿ ಪಾತ್ರದಲ್ಲಿ ಮರಳು ಬಗೆಯುತ್ತಿದ್ದರೆ, ನೂರಾರು ಟಿಪ್ಪರ್‌, ಟ್ರ್ಯಾಕ್ಟರ್‌ಗಳು, ಕ್ಯಾಂಟರ್‌ಗಳು ವಿವಿಧೆಡೆ ಮರಳು ಸಾಗಿಸುತ್ತಿವೆ. ದಂಧೆಕೋರರು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಶನಿವಾರ ಒಂದೇ ದಿನ ಎತ್ತಿದ ಮರಳು ಸುಮಾರು . 5 ಲಕ್ಷ ಮೌಲ್ಯದ್ದೆಂದು ಅಂದಾಜಿಸಲಾಗಿದೆ.

 

ಪೇದೆ ಮಯೂರ್‌ದು ಹತ್ಯೆ​ಯಲ್ಲ : ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಮೇಲೆ ಹರಿದು ಸಾವು: ಬಿಜೆ​ಪಿ

ಅಕ್ರಮ ಮರಳು ದಂಧೆ ವಿರುದ್ಧ ಅಥಣಿ ಪೊಲೀಸರು ನಡೆಸಿದ ಧಾಳಿಯಿಂದ ಮರಳು ಮಾಫಿಯಾದಲ್ಲಿ ಸಂಚಲನ ಮೂಡಿದೆ. ಬಾಗಲಕೋಟೆ ಜಿಲ್ಲೆಯ ಮದನಮಟ್ಟಿ, ಅಸಂಗಿ ಮಾರ್ಗವಾಗಿ ಅಥಣಿ ಪ್ರವೇಶಿಸಿದ್ದ ದಂಧೆಕೋರರು ಅಥಣಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದರು. ಜಪ್ತಿ ಮಾಡಿದ ವಾಹನಗಳ ಮಾಲೀಕರ ಮಾಹಿತಿ ಕಲೆ ಹಾಕಲಾಗುತ್ತಿದೆ.

- ಡಾ.ಸಂಜೀವ ಪಾಟೀಲ, ಬೆಳಗಾವಿ ಎಸ್ಪಿ

 

click me!