Latest Videos

ಪೋಕ್ಸೋ ಪ್ರಕರಣದಿಂದ ಯಡಿಯೂರಪ್ಪರನ್ನು ಕುಗ್ಗಿಸುವ ಕುತಂತ್ರ: ಸಂಸದ ರಾಘವೇಂದ್ರ

By Kannadaprabha NewsFirst Published Jun 14, 2024, 1:02 PM IST
Highlights

ಪೋಕ್ಸೋ ಕಾಯಿದೆಯಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಂಧನದ ಯತ್ನವು ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ ಎಂದು ಸಂಸದ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹೇಳಿದರು. 

ಶಿವಮೊಗ್ಗ (ಜೂ.14): ಪೋಕ್ಸೋ ಕಾಯಿದೆಯಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಂಧನದ ಯತ್ನವು ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ ಎಂದು ಸಂಸದ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡೂವರೆ ತಿಂಗಳ ಹಿಂದೆ ಈ ಪ್ರಕರಣ ದಾಖಲಾಗಿದ್ದು, ದೂರುದಾರ ಮಹಿಳೆಯು ಅಧಿಕಾರಿಗಳು ಸೇರಿದಂತೆ ಅನೇಕರ ಮೇಲೆ ಹೀಗೆ ಸುಳ್ಳು ದೂರು ನೀಡಿದ್ದು, ಆಕೆ ಮಾನಸಿಕ ಅಸ್ವಸ್ಥೆ ಎಂದು ಸ್ವತಃ ಗೃಹ ಸಚಿವ ಡಾ. ಪರಮೇಶ್ವರ್ ಅವರೇ ಆಗ ಹೇಳಿದ್ದರು. 

ಹೀಗಾಗಿ ಈ ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸಬೇಕಿತ್ತು. ತನಿಖೆ ಮಾಡುವವರು ದೂರಿನಲ್ಲಿ ಏನಿದೆ ಎಂದು ಗಮನಿಸಬೇಕಿತ್ತು ಎಂದು ಹೇಳಿದರು. ಕಳೆದ ಮೂರು ನಾಲ್ಕು ತಿಂಗಳಲ್ಲಿ ಪ್ರಕರಣ ಸಂಬಂಧ ಸಿಐಡಿ ತನಿಖೆಯಾಗಿದೆ. ಯಡಿಯೂರಪ್ಪ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಬಿ ರಿಪೋರ್ಟ್ ಹಾಕುವ ಪ್ರಕರಣವಿದು. ಈಗ ಏಕಾಏಕಿ ಪ್ರಕರಣವನ್ನು ದುರುದ್ದೇಶದಿಂದ ಮುನ್ನೆಲೆಗೆ ತರಲಾಗಿದೆ ಎಂದು ದೂರಿದರಲ್ಲದೆ, ಇದು ಚಾರ್ಜ್‌ಶೀಟ್ ಮಾಡುವ ಕೇಸಲ್ಲ. ವಜಾ ಮಾಡುವ ಕೇಸ್. ನ್ಯಾಯಾಲಯದಲ್ಲಿ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದೆಯೂ ನಮ್ಮ ಕುಟುಂಬವನ್ನು ಕೆಲವರು ವಾಲಿಬಾಲ್, ಪುಟ್ಬಾಲ್ ರೀತಿ ಮಾಡಿಕೊಂಡಿದ್ದರು. ಆದರೆ ಎಲ್ಲ ಪ್ರಕರಣದಲ್ಲಿಯೂ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಈಗಲೂ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿ ಜಾಹೀರಾತು ನೀಡಿದ ಪ್ರಕರಣದಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದರ ಜೊತೆಗೆ ನಿಗಮ ಮಂಡಳಿ ಹಣ ದುರುಪಯೋಗ ಪ್ರಕರಣ ಹೊರ ಬಂದಿತ್ತು. ಇಂತಹ ವಿಚಾರಗಳನ್ನೆಲ್ಲಾ ಮರೆ ಮಾಚಲು ಈ ಪ್ರಕರಣವನ್ನು ಮುನ್ನೆಲೆಗೆ ತಂದಿರುವ ಸಾಧ್ಯತೆ ಇದೆ ಎಂದು ಹೇಳಿದರು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಯಡಿಯೂರಪ್ಪ ಮೊರೆ

ಇದು ರಾಜಕೀಯ ಪ್ರೇರಿತ: ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಜಾಮಿನು ರಹಿತ ಬಂಧನದ ವಾರೆಂಟ್ ಜಾರಿ ಕಾನೂನಿನ ಒಂದು ಪ್ರಕ್ರಿಯೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ರಾಜಕೀಯ ಹತಾಶೆಯಿಂದ ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಕರೆಸಿ ಕೇಸು ಹಾಕಿದ್ದಾರೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮೇಲಿನ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಯಾರು ಬೇಕಾದರೂ ಹೇಳುತ್ತಾರೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಯಡಿಯೂರಪ್ಪ ಆರೋಪ ಮುಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!