ದಾವಣಗೆರೆ ಬಿಜೆಪಿ ಮಹಾಸಂಗಮಕ್ಕೆ ನಾಳೆ ಮೋದಿ: 10 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

By Kannadaprabha News  |  First Published Mar 24, 2023, 8:44 AM IST

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಶ್ವಮೇಧ ಯಾಗಕ್ಕೆ ಹೊರಟಂತೆ ರಾಜ್ಯ ನಾಲ್ಕೂ ಕಡೆಯಿಂದ ಬಿಜೆಪಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಧಾನಿ ಮೋದಿ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.


ದಾವಣಗೆರೆ (ಮಾ.24): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಶ್ವಮೇಧ ಯಾಗಕ್ಕೆ ಹೊರಟಂತೆ ರಾಜ್ಯ ನಾಲ್ಕೂ ಕಡೆಯಿಂದ ಬಿಜೆಪಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಧಾನಿ ಮೋದಿ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 10 ಲಕ್ಷ ಮಂದಿ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 

ಮಿಷನ್‌ 150 ಗುರಿಯೊಂದಿಗೆ ರಾಜ್ಯದ 4 ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮಾ.1ರಂದು ಮಲೆ ಮಾದೇಶ್ವರ ಬೆಟ್ಟ, ಮಾ.2ರಂದು ನಂದಗಡ, ಮಾ.3ಕ್ಕೆ ಬಸವ ಕಲ್ಯಾಣ, ಅದೇ ದಿನ ಅವತಿ ದೇವನಹಳ್ಳಿಯಿಂದ ರಥಯಾತ್ರೆ ಆರಂಭವಾಗಿದ್ದು, ಸುಮಾರು 5,600 ಕಿ.ಮೀ. ಕ್ರಮಿಸಿ ರಥಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿವೆ. ಸಮಾವೇಶಕ್ಕೂ ಮುನ್ನಾ ದಿನವಾದ ಮಾ.24ರಂದು ನಾಲ್ಕೂ ರಥಯಾತ್ರೆಗಳು ದಾವಣಗೆರೆಯಲ್ಲಿ ಸೇರುವ ಸ್ಥಳದಿಂದ ಶೋಭಾಯಾತ್ರೆ ಹಾಗೂ ಚಿಕ್ಕ ರೋಡ್‌ ಶೋ ಮಾಡುವ ಬಗ್ಗೆ ವರಿಷ್ಠರು ಚರ್ಚೆ ನಡೆಸಿದ್ದಾರೆ.

Tap to resize

Latest Videos

ರಾಹುಲ್‌ ಗಾಂಧಿಗೆ ಜೈಲು ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ್‌

ಜಿಎಂಐಟಿ ಕಾಲೇಜಿನ ಸಮೀಪದ ಮೈದಾನದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿರುವ ಈ ಸಮಾವೇಶಕ್ಕೆ ಬರುವ ಜನರಿಗಾಗಿ ಉಪಹಾರ, ಊಟದ ವ್ಯವಸ್ಥೆಗಾಗಿ 1 ಸಾವಿರ ಮಂದಿ ಬಾಣಸಿಗರು ಸಿದ್ಧರಾಗಿದ್ದಾರೆ. ಪೆಂಡಾಲ್‌ನಲ್ಲೇ ಮೋದಿ ರೋಡ್‌ ಶೋ: ಸದ್ಯ ಮೋದಿ ಪಾಲ್ಗೊಳ್ಳುವ ಮುಖ್ಯ ವೇದಿಕೆ ಮುಂಭಾಗ, ಅಕ್ಕಪಕ್ಕದಲ್ಲಿ ವಿಶಾಲ ಪೆಂಡಾಲ್‌ ವ್ಯವಸ್ಥೆ ಮಾಡಲಾಗುತ್ತಿದೆ. ಪೆಂಡಾಲ್‌ ಒಳಗೆಯೇ ಚಿಕ್ಕಮಟ್ಟದಲ್ಲಿ ಮೋದಿ ರೋಡ್‌ ಶೋ ಮಾಡುವ ಆಲೋಚನೆ ಪಕ್ಷದ್ದು. ಪ್ರಧಾನಿ ಮೋದಿ ಜನರ ಮಧ್ಯದಿಂದಲೇ ವೇದಿಕೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾಗಿ ಇತ್ತೀಚೆಗಷ್ಟೇ ಅರುಣ್‌ ಸಿಂಗ್‌ ಹೇಳಿದ್ದರು. ಅದರಂತೆ ಪೆಂಡಾಲ್‌ ಒಳಗೆ ವಿಶೇಷ ವಾಹನದ ಮೂಲಕ ರೋಡ್‌ ಶೋ ನಡೆಸಲು ಉದ್ದೇಶಿಸಲಾಗಿದೆ.

ಮೆಟ್ರೋದಲ್ಲಿ ಸಂಚಾರ: ಇದಕ್ಕೂ ಮುನ್ನ ದೆಹಲಿಯಿಂದ ಆಗಮಿಸಲಿರುವ ಮೋದಿ ಅವರು ಚಿಕ್ಕಮಗಳೂರಿನ ಮಧುಸೂದನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸಚ್‌ರ್‍ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ ಬೆಂಗಳೂರಿನ ವೈಟ್‌ಫೀಲ್ಡ್‌ ಮೆಟ್ರೋ ಲೈನ್‌ ಉದ್ಘಾಟಿಸಿ, ಮೆಟ್ರೋದಲ್ಲಿ ಸಂಚಾರವನ್ನೂ ನಡೆಸಲಿದ್ದಾರೆ. ನಂತರ ದಾವಣಗೆರೆ ಪ್ರಯಾಣಿಸಲಿದ್ದಾರೆ.

ಸಂಚಾರ ಮಾರ್ಗ ಬದಲು, ನಿಲುಗಡೆ ಸ್ಥಳ ನಿಗದಿ: ಪ್ರಧಾನಿ ನರೇಂದ್ರ ಮೋದಿ ಮಾ.25ರಂದು ದಾವಣಗೆರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಮಾರ್ಗ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿಲುಗಡೆಗೆ ಸ್ಥಳವನ್ನು ಜಿಲ್ಲಾ ಪೊಲೀಸ್‌ ಇಲಾಖೆ ನಿಗದಿಪಡಿಸಿದೆ.

* ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬುಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬರುವ ವಾಹನಗಳಿಗೆ ಬಾಡಾ ಕ್ರಾಸ್‌ನಿಂದ ದಾವಣಗೆರೆ ಪ್ರವೇಶ ಮಾಡುವ ವಾಹನಗಳಿಗೆ ಎಪಿಎಂಸಿ ಮತ್ತು ಚಿಕ್ಕನಹಳ್ಳಿಯಲ್ಲಿ ಪಾರ್ಕಿಂಗ್‌ ಮಾಡಲು ವ್ಯವಸ್ಥೆ ಕಲ್ಪಿಸಿದೆ.

* ಚನ್ನಗಿರಿ ಶಿವಮೊಗ್ಗ, ಭದ್ರಾವತಿ, ಮಂಗಳೂರು, ಕಡೂರು ಕಡೆಯಿಂದ ಹದಡಿ ರಸ್ತೆ ಮಾರ್ಗವಾಗಿ ದಾವಣಗೆರೆ ಪ್ರವೇಶಿಸುವ ವಾಹನಗಳನ್ನು ಡಿಆರ್‌ಎಂ ವಿಜ್ಞಾನ ಕಾಲೇಜು, ಹೈಸ್ಕೂಲ್‌ ಮೈದಾನ, ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬೇಕು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಬೈಪಾಸ್‌ ರಸ್ತೆ ಮುಖಾಂತರ ಹಳೆ ಕುಂದುವಾಡ ಕಡೆಯಿಂದ ಬರುವ ವಾಹನಗಳನ್ನು ಕುಂದುವಾಡ ಕೆರೆ ಸಮೀಪದ ಜಾಗದಲ್ಲಿ ಪಾರ್ಕಿಂಗ್‌ ಮಾಡಬೇಕು.

ಇಂದು ಬಾದಾಮಿಗೆ ಸಿದ್ದರಾಮಯ್ಯ ಭೇಟಿ: ತೀವ್ರ ಕುತೂಹಲ

* ಹರಪನಹಳ್ಳಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್‌, ಕಲಬುರಗಿ, ಗದಗ, ಯಾದಗಿರಿ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಬರುವ ವಾಹನಗಳನ್ನು ಆವರಗೊಳ್ಳ ಸಮೀಪದ ಕೇಂದ್ರೀಯ ವಿದ್ಯಾಲಯದ ಜಾಗದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿದೆ. ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ ಕಡೆಯಿಂದ ಜಗಳೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಬಡಗಿ ಕೃಷ್ಣಪ್ಪ ಲೇಔಟ್‌ನಲ್ಲಿ ಪಾರ್ಕಿಂಗ್‌ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಸೂಚನೆ ನೀಡಿದೆ.

click me!