ರಾಜಕೀಯ ಪಕ್ಷಗಳಿಗೆ ಅದೃಷ್ಟದ ತಾಣವಾದÜ, ರಾಜ್ಯ-ರಾಷ್ಟ್ರೀಯ ನಾಯಕರಿಗೆ ಪುನರ್ಜನ್ಮ ಕೊಟ್ಟಭೂಮಿ, ಹೋರಾಟ-ಚಳವಳಿಗಳಿಗೆ ಸಂಚಲನ ತಂದ ಮಧ್ಯ ಕರ್ನಾಟಕದ ಅದೃಷ್ಟದ ನೆಲ ದಾವಣಗೆರೆ ಮಾ.25ಕ್ಕೆ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶದಿಂದಾಗಿ ತೀವ್ರ ಕುತೂಹಲ ಹುಟ್ಟು ಹಾಕಿದೆ.
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಮಾ.24) : ರಾಜಕೀಯ ಪಕ್ಷಗಳಿಗೆ ಅದೃಷ್ಟದ ತಾಣವಾದÜ, ರಾಜ್ಯ-ರಾಷ್ಟ್ರೀಯ ನಾಯಕರಿಗೆ ಪುನರ್ಜನ್ಮ ಕೊಟ್ಟಭೂಮಿ, ಹೋರಾಟ-ಚಳವಳಿಗಳಿಗೆ ಸಂಚಲನ ತಂದ ಮಧ್ಯ ಕರ್ನಾಟಕದ ಅದೃಷ್ಟದ ನೆಲ ದಾವಣಗೆರೆ ಮಾ.25ಕ್ಕೆ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶದಿಂದಾಗಿ ತೀವ್ರ ಕುತೂಹಲ ಹುಟ್ಟು ಹಾಕಿದೆ.
undefined
ಗೋಕಾಕ್ ಚಳವಳಿ(Gokak chalavali)ಗೆ ಡಾ.ರಾಜಕುಮಾರ್(Dr Rajkumar)ರ ಪ್ರವೇಶದೊಂದಿಗೆ ಹೋರಾಟ ತೀವ್ರತೆ ಪಡೆದಿದ್ದು ಇದೇ ದಾವಣಗೆರೆಯಿಂದ. ಕನ್ನಡ ನಾಡು, ನುಡಿ, ಜನಪರ, ಕಾರ್ಮಿಕರ, ರೈತರ ಪರ ಹೋರಾಟಗಳಿಗೆ ಹೆಸರಾದ ದಾವಣಗೆರೆ ಬರೀ ಹೋರಾಟ, ಚಳವಳಿಗಷ್ಟೇ ಅಲ್ಲ, ರಾಜಕೀಯ ಪಕ್ಷಗಳಿಗೆ ಅಧಿಕಾರ, ಅಸ್ತಿತ್ವ ದೊರಕಿಸಿಕೊಟ್ಟ, ರಾಜಕೀಯ ನಾಯಕರಿಗೆ ಪುನರ್ಜನ್ಮ ನೀಡಿದ ಅದೃಷ್ಟದ ನೆಲವಾಗಿಯೂ ಗಮನ ಸೆಳೆದಿದೆ.
ನಾಳೆ ಬೆಣ್ಣೆನಗರಿಗೆ ಮೋದಿ ಆಗಮನ: ಮಹಾಸಂಗಮಕ್ಕೆ ಬಿಜೆಪಿ ಭಾರೀ ಸಿದ್ಧತೆ!
ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ, ಭಾರತ ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಈಚಿನ ಆಮ್ ಆದ್ಮಿ ಪಕ್ಷದವರೆಗೂ ದಾವಣಗೆರೆಯಲ್ಲೇ ಸಮಾವೇಶ, ಕಾರ್ಯಕ್ರಮ ಆಯೋಜಿಸುವ, ಚುನಾವಣೆ ಪೂರ್ವದ ಕಾರ್ಯವನ್ನು ಇಲ್ಲಿಂದಲೇ ಆರಂಭಿಸಿ, ಅದೃಷ್ಟಹುಡುಕುವ ತವಕ. ಅದಕ್ಕೆ ಕಳೆದ 2022ರ ಆಗಸ್ಟ್ ನಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮ್ಯಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಸಿದ್ದರಾಮೋತ್ಸವ ಕಾಂಗ್ರೆಸ್ಸಿಗೆ ಚೈತನ್ಯ ತುಂಬಿತ್ತು.
ಜನತಾ ಪರಿವಾರದ ತ್ರಿಮೂರ್ತಿಗಳಾದ ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲರ ದಶ ದಿಕ್ಕುಗಳಿಂದ ಸಮಾವೇಶದಿಂದ ಹಿಡಿದು ಇದೇ ಮಾ.25ಕ್ಕೆ ನಡೆಯಲಿರುವ ಬಿಜೆಪಿ ಮಹಾ ಸಂಗಮ ಸಮಾವೇಶದವರೆಗೆ ಇಲ್ಲಿ ನಡೆದ ಕಾರ್ಯಕ್ರಮ ಸಮಾವೇಶ ಹುಸಿಯಾದ ನಿದರ್ಶನವಿಲ್ಲ. ಕೆಲವರಿಗೆ ಅಧಿಕಾರಕ್ಕೆ ತರದಿದ್ದರೂ ರಾಜಕೀಯ ಪುನರ್ಜನ್ಮ ನೀಡಿದ, ಅಸ್ತಿತ್ವ ಗಟ್ಟಿಗೊಳಿಸಿದ ನೆಲವಿದು. ದಿಕ್ಕೇ ತೋಚದಂತಾಗಿದ್ದ ಜನತಾ ಪರಿವಾರ ದಶ ದಿಕ್ಕುಗಳಿಂದ ಸಮಾವೇಶಗೊಂಡು, ನಂತರ ದೊಡ್ಡ ಮಟ್ಟದಲ್ಲಿ ಅಧಿಕಾರಕ್ಕೆ ಬಂದಿದ್ದು, ಆ ನಂತರ ಪರಿವಾರದ ನಾಯಕರ ರಾಜಕೀಯ ಭವಿಷ್ಯವೇ ಉಜ್ವಲಗೊಂಡಿದ್ದು ಇತಿಹಾಸ.
ಎಲ್ಲಾ ನಾಯಕರಿಗೂ ಆಸರೆಯಾದ ಭೂಮಿ
ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಸಮಾಜವಾದಿ ಪಕ್ಷ ಹೀಗೆ ಎಲ್ಲಾ ಪಕ್ಷಗಳ ನಾಯಕರಿಗೆ, ಮಾತೃ ಪಕ್ಷದಿಂದ ಸಿಡಿದೆದ್ದು ಬಂದ ನಾಯಕರಿಗೆ ದೊಡ್ಡ ಶಕ್ತಿ ತುಂಬಿದ್ದು ಇದೇ ದಾವಣಗೆರೆ. ಅದು ದಿ.ಎಸ್.ಬಂಗಾರಪ್ಪ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಯಾರೇ ಆಗಿರಬಹುದು. ಅಷ್ಟರಮಟ್ಟಿಗೆ ಮಧ್ಯ ಕರ್ನಾಟಕದ ಈ ನೆಲ ತಮ್ಮ ರಾಜಕೀಯ ಹಾದಿಯನ್ನೇ ಬದಲಿಸುತ್ತದೆಂಬ ನಂಬಿಕೆ ಹೊಂದಿದ್ದಾರೆ ರಾಜಕೀಯ ನಾಯಕರು. ಅದಕ್ಕೆ 3 ದಶಕದಿಂದ ಇಲ್ಲಿ ಆದ ರಾಜಕೀಯ ಸಮಾವೇಶ, ಜಾತಿ ಸಮಾವೇಶ, ನಾಯಕರ ಜನ್ಮದಿನಾಚರಣೆಗಳೇ ಪುಷ್ಟಿನೀಡುತ್ತವೆ. ಎಡ, ಬಲ ಪಕ್ಷ ಹೀಗೆ ಯಾವುದೇ ಪಕ್ಷವಾದರೂ, ಯಾವ ಪಕ್ಷದ ನಾಯಕರಾದರೂ ಈ ಊರು ತಮ್ಮ ಅದೃಷ್ಟದ ತಾಣವೆಂಬುದನ್ನಂತೂ ಅಲ್ಲಗೆಳೆಯುವುದಿಲ್ಲ. ಭೌಗೋಳಿಕವಾಗಿ ರಾಜ್ಯದ ಕೇಂದ್ರ ಬಿಂದುವಾದ ದಾವಣಗೆರೆ ಜಿಲ್ಲೆಗೆ ಬಂದು ಹೋಗಲು ಎಲ್ಲರಿಗೂ ಅನುಕೂಲವೆಂಬುದು ದಶ ದಿಕ್ಕುಗಳಿಂದ ದಾವಣಗೆರೆಯತ್ತ ಸಮಾವೇಶದ ಲೆಕ್ಕಾಚಾರವಾಗಿತ್ತು.
ದಾವಣಗೆರೆ ಅದೃಷ್ಟದ ನೆಲಕ್ಕೆ ಹಲವು ದೃಷ್ಟಾಂತ
-1994ರ ಚುನಾವಣೆ ಪೂರ್ವದಲ್ಲಿ ರಾಮಕೃಷ್ಣ ಹೆಗಡೆ-ಎಚ್.ಡಿ.ದೇವೇಗೌಡ(HD Devegowda)-ಜೆ.ಎಚ್.ಪಟೇಲರ ನೇತೃತ್ವದಲ್ಲಿ ಜನತಾ ಪರಿವಾರವು ದಶದಿಕ್ಕುಗಳಿಂದ ದಾವಣಗೆರೆಗೆ ಸಮಾವೇಶ ಆಯೋಜಿಸಿ, ನಂತರ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
-1994ರಲ್ಲಿ ಕಾಂಗ್ರೆಸ್ಸಿನಿಂದ ಹೊರ ಬಂದಿದ್ದ ಮಾಜಿ ಸಿಎಂ ಎಸ್.ಬಂಗಾರಪ್ಪ ಕೆಸಿಪಿ ಸಮಾವೇಶ ದಾವಣಗೆರೆಯಲ್ಲಿ ಆಯೋಜಿಸಿದ್ದರು. ಆಗಿನ ಚುನಾವಣೆಯಲ್ಲಿ 10 ಕ್ಷೇತ್ರ ಗೆದ್ದು, ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕೆಂಬ ಜಿದ್ದು ಸಾಧಿಸುವಲ್ಲೂ ಬಂಗಾರಪ್ಪ ಯಶಸ್ವಿಯಾಗಿದ್ದರು.
-1999ರಲ್ಲಿ ಎಸ್ಸೆಂ ಕೃಷ್ಣ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶಕ್ಕೆ ಸೋನಿಯಾಗಾಂಧಿ ಆಗಮಿಸಿದ್ದರು. ಅದೇ ವರ್ಷ ನಡೆದ ಎಸ್ಸೆಂ ಕೃಷ್ಣ ಪಾಂಚಜನ್ಯ ರಥವನ್ನೇರಿ, ಇಲ್ಲಿಗೆ ಆಗಮಿಸಿದ್ದರು. ಆಗಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದಿತು.
-ಬಿಜೆಪಿ ತೊರೆದ ಬಂಗಾರಪ್ಪ ಸೈಕಲನ್ನೇರುವ ಮೂಲಕ ಸಮಾಜವಾದಿ ಪಕ್ಷದ ನಾಯಕತ್ವ ವಹಿಸಿ, ಆಗಿನ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಜಯಾ ಬಚ್ಚನ್, ಜಯಪ್ರದರನ್ನು ದಾವಣಗೆರೆಗೆ ಕರೆಸಿ ಸಮಾವೇಶ ಸಂಘಟಿಸಿದ್ದರು.
-ಜನತಾ ಪರಿವಾರ ಮತ್ತೆ ವಿಭಜನೆಯಾದಾಗ ಜೆಡಿಯು ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಕೈಜೋಡಿಸಿದಾಗ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಲಾಲ್‌ಕೃಷ್ಣ ಆಡ್ವಾಣಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲರು ಪಾಲ್ಗೊಂಡಿದ್ದರು.
-ಜೆಡಿಎಸ್-ಬಿಜೆಪಿ ಟ್ವೆಂಟಿ-20 ಸಮ್ಮಿಶ್ರ ಸರ್ಕಾರ ಪತನವಾದಾಗ ತುಮಕೂರಿನಿಂದ ರಥವೇರಿ ಬಂದಿದ್ದ ಬಿ.ಎಸ್.ಯಡಿಯೂರಪ್ಪ ದಾವಣಗೆರೆಯಲ್ಲಿ ಸಮಾವೇಶ ಆಯೋಜಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದು,ಬಿಜೆಪಿಗೆ ಅಧಿಕಾರಕ್ಕೆ ತಂದರು.
-80ರ ದಶಕದಲ್ಲಿ ಒಂದು ಕಾಲದಲ್ಲಿ ಕಮ್ಯುನಿಷ್‌್ಟಪಕ್ಷದ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಭಾರತೀಯ ಕಮ್ಯುನಿಷ್‌್ಟಪಕ್ಷ ಸಮಾವೇಶ ಆಯೋಜಿಸಿದ್ದರೂ, ಅಧಿಕಾರಕ್ಕೆ ಬರಲಿಲ್ಲ. ಆದರೆ, ಕೆಲವು ಕಾಲ ದಾವಣಗೆರೆಯಲ್ಲಿ ಕಮ್ಯುನಿಷ್‌್ಟಪಕ್ಷವು ಯಶಸ್ಸಿನ ಉತ್ತುಂಗದಲ್ಲಿದ್ದು, ನೆಲ ಕಚ್ಚಿದ್ದು ಇತಿಹಾಸ.
-2004ರ ಲೋಕಸಭೆ ಚುನಾವಣೆಯಲ್ಲಿ ಭಾರತ ನಿರ್ಮಾಣದ ಮೂಲಕ ಕಾಂಗ್ರೆಸ್ ಪ್ರಚಾರ ಶುರು ಮಾಡಿದ್ದು ಇದೇ ದಾವಣಗೆರೆಯಿಂದ. ನಂತರ ಯುಪಿಎ-1 ಸರ್ಕಾರ ರಚಿಸಿದ್ದು ಇತಿಹಾಸ. ಸೋನಿಯಾ ಗಾಂಧಿ ಭಾರತ ನಿರ್ಮಾಣ ಪ್ರಚಾರಕ್ಕೆ ಚಾಲನೆ ನೀಡಿದ್ದರು.
-2008ರಲ್ಲಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಇದೇ ದಾವಣಗೆರೆಯಲ್ಲಿ ಆಯೋಜಿಸಿ, ಗೆಲುವಿನ ರಣತಂತ್ರ ಹೆಣೆದು ದಕ್ಷಿಣ ಭಾರತದಲ್ಲೇ ಮೊಟ್ಟಮೊದಲಿಗೆ ಅಧಿಕಾರಕ್ಕೆ ಬಂದಿತು.
-2012ರಲ್ಲಿ ಜೆಡಿಎಸ್‌ನಿಂದ ಹೊರ ಬಂದಿದ್ದ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಕುರುಬರ ಹಾಲುಮತ ಸಮಾವೇಶ ಆಯೋಜಿಸುವ ಮೂಲಕ ಸಮಾಜದ ಶಕ್ತಿ ಪ್ರದರ್ಶನ ಮಾಡಿದ್ದರು.
- 2014ರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ನರೇಂದ್ರ ಮೋದಿ ಆಗಮಿಸಿ, ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಮಾತನಾಡಿದ್ದರು. 2016ರಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಇಲ್ಲಿಯೇ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ದಾವಣಗೆರೆಯಲ್ಲೇ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಆಗ ಯಡಿಯೂರಪ್ಪ ಸೇರಿ ರಾಜ್ಯ ನಾಯಕರೂ ಭಾಗವಹಿಸಿದ್ದರು.
ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸಲಿರುವ ಪ್ರಧಾನಿ ಮೋದಿ : 150 ಸೀಟು ಗೆಲ್ಲಲು ಇಲ್ಲಿಂದಲೇ ರಣಕಹಳೆ!
-ಆಗಸ್ಟ್ 2022ರಲ್ಲಿ ಸಿದ್ದರಾಮಯ್ಯ 75ನೇ ಜನ್ಮದಿನವನ್ನು ಐತಿಹಾಸಿಕವಾಗಿ ಆಚರಿಸಲು ಕಾರಣವಾಗಿದ್ದು ದಾವಣಗೆರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಅದು ಮಧ್ಯ ಕರ್ನಾಟಕದಲ್ಲಿ ದಾಖಲಾಗಿದೆ.
-2023ರ ಮಾಚ್‌ರ್‍ನಲ್ಲಿ ಆಮ್ ಆದ್ಮಿ ಪಕ್ಷದ ಸಮಾವೇಶ ನಡೆಸಿದ್ದು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಸಿಂಗ್ ಮಾನ್ ಪಾಲ್ಗೊಂಡಿದ್ದು ಗಮನಾರ್ಹ.