ಲಂಡನ್ನಲ್ಲಿ ಭಾರತ ಟೀಕೆ 130 ಕೋಟಿ ಜನಕ್ಕೆ ಅವಮಾನ: ರಾಹುಲ್‌ಗೆ ಚಾಟಿ ಬೀಸಿದ ಪ್ರಧಾನಿ ಮೋದಿ

By Kannadaprabha News  |  First Published Mar 13, 2023, 5:52 AM IST

‘ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅಮೆರಿಕ ಹಾಗೂ ಐರೋಪ್ಯ ದೇಶಗಳು ನೆರವಿಗೆ ಬರಬೇಕು’ ಎಂದು ಲಂಡನ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದಾರೆ. 


ಧಾರವಾಡ (ಮಾ.13): ‘ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅಮೆರಿಕ ಹಾಗೂ ಐರೋಪ್ಯ ದೇಶಗಳು ನೆರವಿಗೆ ಬರಬೇಕು’ ಎಂದು ಲಂಡನ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದಾರೆ. ಇದು ದೇಶದ 130 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಹರಿಹಾಯ್ದಿದ್ದಾರೆ. ಇಡೀ ಪ್ರಪಂಚಕ್ಕೆ ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ಇಂತಹ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ, ಅವಮಾನಿಸುವ ಕೆಲಸವನ್ನು ಕೆಲವರು ವಿದೇಶಿ ನೆಲದಲ್ಲಿ ಮಾಡುತ್ತಿದ್ದಾರೆ. ಆದರೆ, ಪ್ರಪಂಚದ ಯಾವುದೇ ಶಕ್ತಿಯೂ ನಮ್ಮ ಪ್ರಜಾಸತ್ತಾತ್ಮಕ ಮೌಲ್ಯ, ಸಂಪ್ರದಾಯಗಳಿಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದೂ ಗುಡುಗಿದ್ದಾರೆ.

ಧಾರವಾಡದ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ದೇಶದ ಪ್ರಪ್ರಥಮ ಹಸಿರು ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ)ಯ ನೂತನ ಕಟ್ಟಡ, ಹುಬ್ಬಳ್ಳಿಯಲ್ಲಿನ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾಮ್‌ರ್‍, ಹಂಪಿ ಶಿಲ್ಪಕಲೆಗಳ ರೀತಿ ನಿರ್ಮಿಸಲಾಗಿರುವ ನವೀಕೃತ ಹೊಸಪೇಟೆ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ ಭಾನುವಾರ ಅವರು ಮಾತನಾಡಿದರು. ‘ನಾನು ಬಸವೇಶ್ವರರ ನಾಡಿಗೆ ಬಂದಿದ್ದೇನೆ. ಬಸವೇಶ್ವರರ ಕೊಡುಗೆಗಳಲ್ಲಿ ಅನುಭವ ಮಂಟಪದ ಸ್ಥಾಪನೆ ಅತ್ಯಂತ ಮುಖ್ಯವಾಗಿದೆ. ಭಾರತ ಕೇವಲ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಲ್ಲ, ಪ್ರಜಾಪ್ರಭುತ್ವದ ತಾಯಿ. 

Tap to resize

Latest Videos

ನಾನು ಬಡವರ ಬದುಕು ಕಟ್ಟುತ್ತಿದ್ದರೆ ಕಾಂಗ್ರೆಸ್‌ ನನ್ನ ಗೋರಿ ತೋಡುತ್ತಿತ್ತು: ಪ್ರಧಾನಿ ಮೋದಿ

ಬಸವೇಶ್ವರರು ಲೋಕತಂತ್ರ ಹೇಗಿರಬೇಕೆಂಬುದನ್ನು 12ನೇ ಶತಮಾನದಲ್ಲೇ ತೋರಿಸಿದ ಮಹಾನ್‌ ವಿಶ್ವಗುರು. ಮಾದರಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದವರು. ಇಂತಹ ಮಹಾನ್‌ ವ್ಯಕ್ತಿಯ ಪುತ್ಥಳಿಯನ್ನು ಲಂಡನ್‌ನಲ್ಲಿ ಅನಾವರಣ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಇದು ನನ್ನ ಸೌಭಾಗ್ಯವೂ ಆಗಿತ್ತು. ಆದರೆ, ಅದೇ ಲಂಡನ್‌ನಲ್ಲಿ ಕೆಲವರು ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಾರೆ. ಇಂತಹ ಮಾತು ಬರೀ ಪ್ರಜಾಪ್ರಭುತ್ವ, ಪರಂಪರೆಗಷ್ಟೇ ಅಲ್ಲ, ಇಡೀ ಭಾರತದ 130 ಕೋಟಿ ಪ್ರಜ್ಞಾವಂತ ನಾಗರಿಕರಿಗೆ ಮಾಡಿದ ಅವಮಾನ. 

ಇಂತಹ ಹೇಳಿಕೆಗಳು ಜಗತ್ತಿನಲ್ಲಿ ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಗೆ ಹಾನಿಯುಂಟು ಮಾಡಬಹುದು. ಇದು ಬಸವೇಶ್ವರರಿಗೂ ಮಾಡಿದ ಅವಮಾನ. ಆದ ಕಾರಣ ಇಂತಹ ಜನರ ಬಗ್ಗೆ ಕರ್ನಾಟಕದ ಜನತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ’ ಎಂದು ಕಿಡಿಕಾರಿದರು. ‘ಆದರೆ, ಪ್ರಪಂಚದ ಯಾವುದೇ ಶಕ್ತಿಯೂ ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ಭಾರತದ ಪ್ರಜಾಪ್ರಭುತ್ವ ಬಹು ವರ್ಷಗಳಿಂದ ಗಟ್ಟಿಯಾಗುತ್ತಾ ಬಂದಿದೆ. ಯಾರೇ, ಯಾವುದೇ ರೀತಿಯ ದಾಳಿ ಮಾಡಿದರೂ ಅದನ್ನು ಎದುರಿಸಿ ಇನ್ನಷ್ಟು ಬಲಶಾಲಿಯಾಗುವ ಗುಣ ಇದರಲ್ಲಿದೆ’ ಎಂದರು.

ಪ್ರತಿ ಮನೆಗೂ ಮೋದಿ ಸರ್ಕಾರದ ಸವಲತ್ತು ತಲುಪಿದೆ: ಬಿ.ಎಸ್‌.ಯಡಿಯೂರಪ್ಪ

ಪ್ರಧಾನಿ ಕುರಿತಾದ ಟೀಕೆ ದೇಶದ ವಿರುದ್ಧದ ಟೀಕೆ ಯಾವಾಗಿಂದ ಆಯಿತು?: ಪ್ರಧಾನಿ ಮೋದಿ ಅವರ ನೀತಿಗಳ ಬಗ್ಗೆ ಮಾಡುವ ಟೀಕೆ ಯಾವಾಗಿನಿಂದ ದೇಶದ ಕುರಿತಾದ ಟೀಕೆಯಾಯಿತು? ಮೋದಿ ಅವರೇ, ನೀವೊಬ್ಬ ಪ್ರಧಾನಿ. ನೀವೇನು ದೇಶವೂ ಅಲ್ಲ, ದೇವರೂ ಅಲ್ಲ. ಕಳೆದ 70 ವರ್ಷಗಳಿಂದ ಏನೂ ಆಗಿಲ್ಲ ಎಂದು ಮೂರು ಪೀಳಿಗೆಗಳನ್ನು ನೀವು ಟೀಕಿಸಿದಾಗ ದೇಶದ ಘನತೆಗೆ ಧಕ್ಕೆಯಾಗಲಿಲ್ಲ. ಭಾರತದಲ್ಲಿ ಹುಟ್ಟುವುದೇ ದುರಾದೃಷ್ಟ ಎಂದು ಜನರು ಭಾವಿಸಿದ್ದರು ಎಂದು ನೀವು ವಿದೇಶದಲ್ಲಿ ಹೇಳಿದಾಗ ದೇಶದ ಘನತೆ ಬಗ್ಗೆ ನಿಮಗೆ ಚಿಂತೆಯಾಗಲಿಲ್ಲ. ವಿದೇಶಿ ಮಾಧ್ಯಮಗಳ ಮೇಲೆ ದಾಳಿ ಮಾಡಿದಾಗ ದೇಶದ ಘನತೆ ಬಗ್ಗೆ ನೀವು ಯೋಚಿಸಲಿಲ್ಲ. ನಿಮ್ಮ ಬಗ್ಗೆ ನಿಮಗೇ ತಪ್ಪು ಕಲ್ಪನೆಗಳು ಇವೆ.

click me!