Karnataka Politics: ಮೋದಿಗೆ ಮರ್ಯಾದೆಯಿದ್ದರೆ ಬಿಜೆಪಿ ಸರ್ಕಾರ ಪದಚ್ಯುತಿಗೊಳಿಸಲಿ: ಹರಿಪ್ರಸಾದ್‌

By Kannadaprabha News  |  First Published Dec 4, 2021, 1:52 PM IST

*   ಪ್ರಧಾನಿ ಮೋದಿಗೆ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಆಗ್ರಹ
*   ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ
*   ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಂಡಿತರೆಲ್ಲ ಜ್ಯೋತಿಷಿಗಳಾಗ್ತಾರೆ
 


ಹಾವೇರಿ(ಡಿ.04):  ರಾಜ್ಯದಲ್ಲಿ 40 ಪರ್ಸೆಂಟೇಜ್‌ ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿ ಮೋದಿಗೆ(Narendra Modi) ಮರ್ಯಾದೆಯಿದ್ದರೆ ರಾಜ್ಯ ಬಿಜೆಪಿ ಸರ್ಕಾರವನ್ನು ಕೂಡಲೇ ಬರ್ಖಾಸ್ತುಗೊಳಿಸಿ ರಾಜ್ಯಪಾಲರ ಆಡಳಿತ ಹೇರಬೇಕು ಎಂದು ಕಾಂಗ್ರೆಸ್‌ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌(BK Hariprasad) ಆಗ್ರಹಿಸಿದರು. ಇಲ್ಲಿಯ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ ಖಾವೂಂಗಾ, ನ ಖಾನೆದೂಂಗಾ ಎಂದು ಮೋದಿ ಹೇಳಿದ್ದರು. ಆದರೆ, ಅವರದೇ ಪಕ್ಷದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ(Corruption) ಮಿತಿಮೀರಿದೆ. ಕೋವಿಡ್‌(Covid19) ಸಂದರ್ಭದಲ್ಲೂ ಲೂಟಿ ಮಾಡುವುದನ್ನು ಬಿಜೆಪಿಯವರು ಬಿಡಲಿಲ್ಲ.

ಕೋವಿಡ್‌ ಸಂದರ್ಭದಲ್ಲಿ ಪಿಎಂ ಕೇರ್ಸ್‌ಗೆ ಸಂಘಸಂಸ್ಥೆಗಳು, ಸಾರ್ವಜನಿಕರಿಂದ ಹಣ ಪಡೆಯಲಾಯಿತು. ಲೆಕ್ಕ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಕೇಂದ್ರ ಸರ್ಕಾರ(Central Government) ಹೇಳುತ್ತದೆ. ಜನರ ಹಣವನ್ನು ಸ್ವಂತಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

Tap to resize

Latest Videos

undefined

Karnataka Politics: ಸಿಎಂ ಬದಲಾವಣೆ ಬಿಜೆಪಿ ಜನ್ಮ ನಕ್ಷತ್ರದಲ್ಲಿದೆ: ಬಿ.ಕೆ.ಹರಿಪ್ರಸಾದ್‌

ತಕ್ಕ ಪಾಠ

ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್‌(Petrol), ಡೀಸೆಲ್‌(Diesel) ಬೆಲೆ ಏರಿಕೆಯಿಂದ ದಿನಬಳಕೆ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ. 7 ವರ್ಷದಿಂದ ಮೋದಿ ಅಹಂಕಾರ ಮತ್ತು ಸರ್ವಾಧಿಕಾರತ್ವದಿಂದ ಮೆರೆದರು. ಈಗ ಜನರ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ. ಜನರು ಬೊಬ್ಬೆ ಹೊಡೆದರೂ ತೈಲ ಬೆಲೆ ಇಳಿಸಲಿಲ್ಲ, ಚುನಾವಣೆಗಳಲ್ಲಿ(Elections) ಸೋತ ಮೇಲೆ ಸ್ವಲ್ಪ ಬೆಲೆ ಇಳಿಸಿದರು. ಜನಸಾಮಾನ್ಯರ ಆಶಯಕ್ಕೆ ವಿರುದ್ಧವಾದ ತೀರ್ಮಾನಗಳನ್ನು ತೆಗೆದುಕೊಂಡ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್‌ ಸರ್ಕಾರ(Congress Government) ದೇಶಕ್ಕೆ ಸಂಪತ್ತು ಸೃಷ್ಟಿಸಿತು. ಆದರೆ, ಬಿಜೆಪಿ ಸರ್ಕಾರ ಏಳು ವರ್ಷದಲ್ಲಿ ದೇಶದ ಸಾರ್ವಜನಿಕ ಸ್ವತ್ತನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. 2014ರಲ್ಲಿ ಉದ್ಯೋಗ ಖಾತ್ರಿಯನ್ನು ಬಿಜೆಪಿ ಲೇವಡಿ ಮಾಡಿತ್ತು. ಕೊರೋನಾ ಸಂದರ್ಭದಲ್ಲಿ ಬಡಜನರಿಗೆ ಉದ್ಯೋಗ ನೀಡಿದ್ದು ಇದೇ ಉದ್ಯೋಗ ಖಾತ್ರಿ. ಉದ್ಯೋಗ ಜನಸಾಮಾನ್ಯರ ಹಕ್ಕು. ಆದರೆ ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಬಿ.ಎಸ್‌. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿಯಾಗಿದ್ದ 2008ರ ಅವಧಿಯಲ್ಲಿ ಹಾವೇರಿಯಲ್ಲಿ ಗೋಲಿಬಾರ್‌ ಘಟನೆ ನಡೆದು, ಇಬ್ಬರು ರೈತರು ಮೃತಪಟ್ಟಿದ್ದರು. ಪ್ರತಿಭಟನೆ ನಡೆಸಿದ ರೈತರನ್ನು ಗೂಂಡಾಗಳು ಎಂದು ಜರಿಯುವ ಮೂಲಕ ಬಿಜೆಪಿ ರೈತರನ್ನು ತುಚ್ಛವಾಗಿ ಕಂಡಿತು. ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಪಾಕಿಸ್ತಾನಿಗಳು(Pakistanis), ಖಲಿಸ್ಥಾನಿಗಳು(Khalistanis), ಆಂದೋಲನ ಜೀವಿಗಳು ಎಂದು ಬಿಜೆಪಿಯವರು ಟೀಕಿಸಿದರು.

ಸತ್ತ ರೈತರ(Farmers) ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಕೇಂದ್ರ ಕೃಷಿ ಸಚಿವರು ಹೇಳುತ್ತಿರುವುದು ರೈತರ ಬಗ್ಗೆ ಈ ಸರ್ಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇಂಥ ಸರ್ಕಾರವನ್ನು ಕಿತ್ತೆಸೆಯಲು ಜನರು ಕಾಯುತ್ತಿದ್ದಾರೆ. ವಿಧಾನ ಪರಿಷತ್‌, ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಪಾಠ ಕಲಿಸಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗ್ರಾಪಂ ಸದಸ್ಯರ ಹಕ್ಕನ್ನು ಹಂತಹಂತವಾಗಿ ಮೊಟಕುಗೊಳಿಸುತ್ತ ಬಂದಿದೆ ಎಂದು ಹೇಳಿದರು.

' ಜನರ ಸಾವನ್ನೂ ಸಂಭ್ರಮಿಸುವ ಏಕೈಕ ಪಕ್ಷ ಬಿಜೆಪಿ : ಹರಿಪ್ರಸಾದ್‌

ಧಾರವಾಡ, ಗದಗ, ಹಾವೇರಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿರುವ ಸಲೀಂ ಅಹ್ಮದ್‌ ಅವರು ಈ ಹಿಂದೆ ಜಿಲ್ಲೆಗೆ ಅನುದಾನ ನೀಡಿದ್ದಾರೆ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ಅವರನ್ನು ಪಕ್ಷ ಭೇದ ಮರೆತು ಗೆಲ್ಲಿಸಬೇಕು ಎಂದು ಹೇಳಿದರು.

ಎಲ್ಲರೂ ಜ್ಯೋತಿಷಿಗಳಾಗುತ್ತಿದ್ದಾರೆ

ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಂಡಿತರೆಲ್ಲ ಜ್ಯೋತಿಷಿಗಳಾಗುತ್ತಿದ್ದಾರೆ(Astrologer). ಮತದಾನ ಮಾಡುವ ಜನಸಾಮಾನ್ಯರು ನಿಜವಾದ ಜ್ಯೋತಿಷಿಗಳು. ಪ್ರಶಾಂತ ಕಿಶೋರ, ಗುಲಾಂ ನಬಿ ಸೇರಿದಂತೆ ಎಲ್ಲರೂ ಜ್ಯೋತಿಷಿಗಳಾಗಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ ವ್ಯಂಗ್ಯವಾಡಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ವೀರಣ್ಣ ಮತ್ತಿಕಟ್ಟಿ, ಡಿ. ಬಸವರಾಜ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ಬಾಲರಾಜು ಇತರರು ಇದ್ದರು.
 

click me!