ಮೋದಿ ಭೇಟಿ ಹಿನ್ನೆಲೆಯಲ್ಲಿ ಕೋಲಾರ, ಚನ್ನಪಟ್ಟಣ, ಮೈಸೂರು ಹಾಗೂ ಹಾಸನ ನಗರದ ಪ್ರಮುಖ ರಸ್ತೆಗಳ ಮಾರ್ಗದುದ್ದಕ್ಕೂ ಬಿಜೆಪಿಯ ಕೇಸರಿ ಧ್ವಜಗಳು ಹಾರಾಡುತ್ತಿದ್ದು, ರಾಜಮಾರ್ಗಗಳು ಕೇಸರಿಮಯವಾಗಿವೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೋಲಾರ/ಚನ್ನಪಟ್ಟಣ/ಮೈಸೂರು(ಏ.30): ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕೋಲಾರ, ಚನ್ನಪಟ್ಟಣ, ಬೇಲೂರುಗಳಲ್ಲಿ ಬೃಹತ್ ಸಮಾವೇಶ ನಡೆಸಿ, ಬಿಜೆಪಿ ಪರ ಮತಯಾಚನೆ ನಡೆಸಲಿದ್ದಾರೆ. ಸಂಜೆ ಮೈಸೂರಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಬೆಳಗ್ಗೆ ಕೋಲಾರಕ್ಕೆ ಆಗಮಿಸುವ ಮೋದಿ, ಬಿಜೆಪಿ ಪರ ಮತಯಾಚಿಸಲಿದ್ದಾರೆ. ಇದಕ್ಕಾಗಿ, ಕೆಂದಟ್ಟಿಸಮೀಪ ಸುಮಾರು 150 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಂತರ, ಮಧ್ಯಾಹ್ನ 1.15ರ ವೇಳೆಗೆ ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ ತೆರಳಿ, ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕಾಗಿ ಸುಮಾರು 40 ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಬಳಿಕ ಬೇಲೂರಿಗೆ ತೆರಳಿ ಪ್ರಚಾರ ಮಾಡಲಿದ್ದಾರೆ. ಸಂಜೆ ಮೈಸೂರಲ್ಲಿ ರೋಡ್ ಶೋ ಮಾಡಲಿದ್ದಾರೆ.
undefined
ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!
ಈ ವೇಳೆ, ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು, ಮೋದಿಗೆ 5.30 ಕೆ.ಜಿ ತೂಕದ ಪ್ರಸಿದ್ಧ ಅಂಬೆಗಾಲಿನ ಕೃಷ್ಣನ ಪಂಚಲೋಹದ ವಿಗ್ರಹವನ್ನು ಉಡುಗೊರೆಯಾಗಿ ನೀಡುವ ಸಾಧ್ಯತೆಯಿದೆ.
ಮಧ್ಯಾಹ್ನ ಅಲ್ಲಿಯೇ ಭೋಜನ ಸ್ವೀಕರಿಸಿ, ಬಳಿಕ, ಹಾಸನ ಜಿಲ್ಲೆಯ ಬೇಲೂರಿಗೆ ತೆರಳಿ, ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಮೈಸೂರಿಗೆ ಆಗಮಿಸಲಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದ ಮೂಲಕ 4 ಕಿ.ಮೀ.ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ನಡೆಸಲು ಒಂದು ಟನ್ ಹೂವನ್ನು ಸಂಗ್ರಹಿಸಲಾಗಿದೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಕೋಲಾರ, ಚನ್ನಪಟ್ಟಣ, ಮೈಸೂರು ಹಾಗೂ ಹಾಸನ ನಗರದ ಪ್ರಮುಖ ರಸ್ತೆಗಳ ಮಾರ್ಗದುದ್ದಕ್ಕೂ ಬಿಜೆಪಿಯ ಕೇಸರಿ ಧ್ವಜಗಳು ಹಾರಾಡುತ್ತಿದ್ದು, ರಾಜಮಾರ್ಗಗಳು ಕೇಸರಿಮಯವಾಗಿವೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ 11 ಬಿಜೆಪಿ ಅಭ್ಯರ್ಥಿಗಳು, ದೇವನಹಳ್ಳಿ, ಹೊಸಕೋಟೆ ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಹಾಜರಿರಲಿದ್ದಾರೆ.