ಇಡೀ ದೇಶಕ್ಕೆ ಮೋದಿಯವರೇ ಗ್ಯಾರಂಟಿ. ಇವರೊಬ್ಬರ ಗ್ಯಾರಂಟಿ ಬಿಟ್ಟರೆ ಇನ್ಯಾವುದೇ ಗ್ಯಾರಂಟಿಯೂ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿದರು.
ಮಂಡ್ಯ (ಜ.12): ಇಡೀ ದೇಶಕ್ಕೆ ಮೋದಿಯವರೇ ಗ್ಯಾರಂಟಿ. ಇವರೊಬ್ಬರ ಗ್ಯಾರಂಟಿ ಬಿಟ್ಟರೆ ಇನ್ಯಾವುದೇ ಗ್ಯಾರಂಟಿಯೂ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿದರು. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಬಗ್ಗೆ ದೇಶದ ಜನರಿಗೆ ಸಂಪೂರ್ಣ ವಿಶ್ವಾಸವಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ (ಎನ್‌ಡಿಎ) ಮೈತ್ರಿಕೂಟ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ.
ನಾವು ಕರ್ನಾಟಕದ ೨೮ ಸ್ಥಾನಗಳಲ್ಲಿ ಗೆಲ್ಲಲು ಗುರಿ ಹಾಕಿಕೊಂಡಿದ್ದೇವೆ. ಬಿಜೆಪಿಯನ್ನೇ ಜನರು ಬೆಂಬಲಿಸಲಿದ್ದಾರೆ ಎಂದು ಖಚಿತವಾಗಿ ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ. ಇದರಿಂದ ಎರಡೂ ಪಕ್ಷಗಳ ಪ್ರಾಬಲ್ಯ ಹೆಚ್ಚಿದೆ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಜತೆ ಯಾವ ಪಕ್ಷದವರೂ ಕೂಡ ಸೇರುತ್ತಿಲ್ಲ. ಅವರು ಏಕಾಂಗಿಯಾಗುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಎದುರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ.
ರಾಜಕಾರಣಕ್ಕಾಗಿ ಬಟ್ಟೆ ಹರಿದುಕೊಳ್ಳದಿರಿ: ಶಾಸಕ ಪ್ರದೀಪ್ ಈಶ್ವರ್
ಆಯಾಯ ಪರಿಸ್ಥಿತಿ-ಸನ್ನಿವೇಶಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಬಿಜೆಪಿ ಮತ್ತು ಜಾ.ದಳ ಮೈತ್ರಿಯಿಂದ ದೇಶ ಮತ್ತು ರಾಜ್ಯಕ್ಕೆ ಅನುಕೂಲವಾಗಲಿದೆ. ೨೦೨೪ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ. ಹರಿಯಾಣದಲ್ಲಿ ೨೮ ಸೀಟುಗಳನ್ನು ಗೆದ್ದಂತೆ ಕರ್ನಾಟಕದಲ್ಲೂ ಕೂಡ ೨೮ಕ್ಕೆ ೨೮ನ್ನೂ ಎನ್‌ಡಿಎ ಮೈತ್ರಿಕೂಟ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ನರೇಂದ್ರ ಮೋದಿಯವರು ದೇಶದಲ್ಲಿ ರೈತರು, ಮಹಿಳೆಯರಿಗೆ ಸೇರಿದಂತೆ ಅನೇಕರಿಗೆ ಜನಪರ ಯೋಜನೆಗಳನ್ನು ನೀಡಿದ್ದಾರೆ.
ಮೋದಿಯವರ ಕಾರ್ಯವೈಖರಿಯಿಂದ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯು ೧೦ನೇ ಸ್ಥಾನದಿಂದ ೫ನೇ ಸ್ಥಾನಕ್ಕೇರಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೊಟ್ಟ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಿದೆ. ೩೫.೫೭ ಲಕ್ಷ ಉಜ್ವಲ ಅನಿಲ ಸಂಪರ್ಕಗಳು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೪.೪೮ ಲಕ್ಷ ಮನೆಗಳ ನಿರ್ಮಾಣ, ೪೮ ಲಕ್ಷಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ, ೭.೧೨ ಲಕ್ಷ ಕುಡಿಯುವ ನೀರಿನ ಸಂಪರ್ಕ, ಮುದ್ರಾ ಯೋಜನೆಯಡಿ ಶೇ.೬೯ ರಷ್ಟು ಮಹಿಳೆಯರಿಗೆ ೩೭.೫ ಲಕ್ಷ ಸಾಲ ಮಂಜೂರು, ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣುಮಕ್ಕಳ ಹೆಸರಿನಲ್ಲಿ ೨೭.೬ ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಜಾತಿಗೊಂದು ಡಿಸಿಎಂ ಸ್ಥಾನ ನೀಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
ಪಿ.ಎಂ. ಕಿಸಾನ್ ಯೋಜನೆಯಡಿ ೫೮.೧೨ ಲಕ್ಷ ರೈತರಿಗೆ ೧೩,೨೫೬ ಕೋಟಿ ರು. ತಲುಪುತ್ತಿದೆ. ಜನೌಷಧಿ ಯೋಜನೆಯಡಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳು, ೫ ಲಕ್ಷದವರೆಗೆ ಪ್ರತಿ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ, ೧.೫೧ ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡುಗಳು, ಅಪಘಾತ ವಿಮೆ ಯೋಜನೆಗೆ ೧.೮೦ ಕೋಟಿ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ೩೪ ಲಕ್ಷ ಜನ ಎ.ಸಿ.ವೈ.ಗೆ ಚಂದಾದಾರರಾಗಿದ್ದಾರೆ. ಪ್ರಧಾನಮಂತ್ರಿ ಸ್ವನಿ ಯೋಜನೆಯಡಿ ೨.೬೨ ಲಕ್ಷ ಫಲಾನುಭವಿಗಳಿಗೆ ಬಂಡವಾಳ ಸಾಲವಾಗಿ ೪೯೦.೬೩ ರು. ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಉದ್ದಗಲಕ್ಕೂ ನದಿಯಂತೆ ಹರಿದು ಬಡವರ ಹಾಗೂ ಕೃಷಿ ಕಾರ್ಮಿಕರ, ಮಹಿಳೆಯರ, ಯುವಕರ ಬದುಕಲ್ಲಿ ಬೆಳಕು ಕಂಡಿರುವುದಾಗಿ ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಂ, ಡಾ. ಎನ್.ಎಸ್. ಇಂದ್ರೇಶ್, ಪ.ನಾ. ಸುರೇಶ್, ಸಿ.ಟಿ. ಮಂಜುನಾಥ್ ಹಾಜರಿದ್ದರು.