ಒಕ್ಕಲಿಗರ ಭದ್ರಕೋಟೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಲು ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಬೊಂಬೆನಾಡು ಸಜ್ಜುಗೊಂಡಿದೆ.
-ವಿಜಯ್ ಕೇಸರಿ
ಚನ್ನಪಟ್ಟಣ (ಏ.30) : ಒಕ್ಕಲಿಗರ ಭದ್ರಕೋಟೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಲು ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಬೊಂಬೆನಾಡು ಸಜ್ಜುಗೊಂಡಿದೆ.
ಹಾಲಿ ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಕಾರ್ಯಕ್ರಮಕ್ಕೆ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಬಳಿ ಸುಮಾರು 30ರಿಂದ 40 ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದು, 1 ಲಕ್ಷ ಕುರ್ಚಿಗಳನ್ನು ಹಾಕಿ ಸಕಲ ಸಿದ್ಧತೆ ಮಾಡಲಾಗಿದೆ. ಬೃಹತ್ ವೇದಿಕೆ, ವಾಹನ ನಿಲುಗಡೆ ಸ್ಥಳ, ಪತ್ರಕರ್ತರು, ವಿವಿಐಪಿ ಮತ್ತು ವಿಐಪಿ ಗ್ಯಾಲರಿ, ಸಾರ್ವಜನಿಕರು ಕುಳಿತಕೊಳ್ಳಬೇಕಾದ ಸ್ಥಳಗಳನ್ನು ಪ್ರತ್ಯೇಕಿಸಲಾಗಿದೆ. ಇನ್ನು ಪ್ರಧಾನಿ ಮತ್ತಿತರ ಗಣ್ಯರು ಕುಳಿತುಕೊಳ್ಳಲು ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇದರಿಂದ ಸುಮಾರು 300 ಅಡಿಗಳಿಗೂ ಹೆಚ್ಚು ಜಾಗವನ್ನು ನಿರ್ಬಂಧಿತ ಪ್ರದೇಶ ಎಂದು ಗುರುತಿಸಲಾಗಿದೆ.
ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ತಂತ್ರಗಾರಿಕೆ: ಬೇಲೂರಿನಲ್ಲಿ ಮೋದಿ ಬಿರುಸಿನ ಪ್ರಚಾರ
ವಿಐಪಿ ಪಾಸ್: ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ವಿವಿಐಪಿ ಮತ್ತು ವಿಐಪಿ ಪಾಸ್ ವಿತರಿಸಲಾಗಿದೆ. 500 ವಿವಿಐಪಿ ಮತ್ತು 1500 ವಿಐಪಿ ಪಾಸ್‌ಗಳನ್ನು ವಿತರಿಸಲಾಗಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ವಿವಿಐಪಿ ಪಾಸ್ ಹೊಂದಿದವರು ಸರ್ವಿಸ್ ರಸ್ತೆಯಲ್ಲಿ ವೇದಿಕೆ ಎದುರು ಭಾಗದ ರಸ್ತೆಯವರೆಗೆ ಸಂಚರಿಸಬೇಕಾಗಿದೆ. ಇನ್ನು ಮೋದಿ ಸಮಾವೇಶದಲ್ಲಿ ಭಾಗಿಯಾಗಲಿರುವವರು ಸಮಾವೇಶದ ಜಾಗದಿಂದ ಸುಮಾರು 0.08 ಕಿ.ಮಿ ಹಿಂದೆ ಗೊತ್ತುಪಡಿಸಿರುವ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಸಮಾವೇಶಕ್ಕೆ ನಡೆದುಕೊಂಡು ಹೋಗಬೇಕಿದೆ.
ಮಧ್ಯಾಹ್ನ ಸಮಾವೇಶ:
ಕೋಲಾರದಲ್ಲಿನ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾದ ನಂತರ ಭಾನುವಾರ ಮಧ್ಯಾಹ್ನ ಸುಮಾರು 1.15ರ ವೇಳೆಗೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಚನ್ನಪಟ್ಟಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಮೋದಿ ಹೆಲಿಕಾಪ್ಟರ್ ಚನ್ನಪಟ್ಟಣದ ಮತ್ತೀಕೆರೆ ಶೆಟ್ಟಿಹಳ್ಳಿ ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಲಿದೆ. ಹೆಲಿಪ್ಯಾಡ್‌ನಲ್ಲಿ ಪ್ರಧಾನಿಯನ್ನು ಸ್ವಾಗತಿಸಿದ ನಂತರ 1.20ಕ್ಕೆ ರಸ್ತೆ ಮೂಲಕ ವೇದಿಕೆಗೆ ಮೋದಿ ಆಗಮಿಸಲಿದ್ದಾರೆ. 1.25ರ ವೇಳೆಗೆ ಸಮಾವೇಶದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. 2.20 ವೇಳೆಗೆ ವೇದಿಕೆ ಕಾರ್ಯಕ್ರಮ ಮುಗಿಸಿ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಮೋದಿ ಬೇಲೂರಿಗೆ ನಿರ್ಗಮಿಸಲಿದ್ದಾರೆ.
ತಪಾಸಣೆ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎರಡು ಮೂರು ದಿನಗಳ ಹಿಂದೆಯೇ ಬಂದು ಬೀಡುಬಿಟ್ಟಿರುವ ಪ್ರಧಾನಿಗಳ ಭದ್ರತಾ ಪಡೆ ಎಲ್ಲೆಡೆ ತೀವ್ರ ತಪಾಸಣೆ ನಡೆಸಿದೆ. ಗಣ್ಯರು ಕುಳಿತುಕೊಳ್ಳುವ ವೇದಿಕೆ, ಸಮಾವೇಶ ನಡೆಯುವ ಜಾಗ, ಹೆಲಿಪ್ಯಾಡ್ ಸೇರಿದಂತೆ ತಪಾಸಣೆ ನಡೆಸಲಾಗಿದೆ. ಬಾಂಬ್ ನಿಷ್ಕಿ್ರಯ ದಳ, ಶ್ವಾನದಳಗಳು ಸಮಾವೇಶ ನಡೆಯುವ ಎಲ್ಲ ಕಡೆ ಸೂಕ್ಷ್ಮವಾಗಿ ತಪಾಸಣೆ ನಡೆಸಿವೆ.
ಪೊಲೀಸ್ ಸರ್ಪಗಾವಲು: ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದಲೇ ಸಮಾವೇಶ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದೆ. ಮೋದಿ ಕಾರ್ಯಕ್ರಮಕ್ಕೆ 5 ಜನ ಎಸ್‌ಪಿಗಳು, 4ಜನ ಡಿವೈಎಸ್‌ಪಿಗಳು, 14ಜನ ಇನ್ಸ್‌ಪೆಕ್ಟರ್‌ಗಳು ಹಾಗೂ 41ಮಂದಿ ಪಿಎಸ್‌ಐಗಳು ಹಾಗೂ 64 ಎಎಸ್‌ಐಗಳನ್ನು ನಿಯೋಜಿಸಲಾಗಿದೆ. ಇವರೊಂದಿಗೆ 580 ಪೊಲೀಸ್ ಸಿಬ್ಬಂದಿ, 183 ಹೋಮ್ ಗಾರ್ಡ್‌ಗಳು ಸೇರಿದಂತೆ 881 ಮಂದಿಯನ್ನು ನಿಯೋಜಿಲಾಗಿದೆ. ಇದಲ್ಲದೇ ನಾಲ್ಕು ಕೆಎಸ್‌ಆರ್‌ಪಿ ತುಕುಡಿ ಹಾಗೂ 3 ಡಿಆರ್ ತುಕುಡಿಗಳನ್ನು ಬಂದೋಬಸ್‌್ತಗಾಗಿ ನಿಯೋಜಿಸಲಾಗಿದೆ. ಇವರೊಂದಿಗೆ ಪ್ರಧಾನಿ ಭದ್ರತಾ ಪಡೆಯಾದ ಎಸ್‌ಪಿಜಿ, ಬಾಂಬ್ ನಿಷ್ಕಿ್ರೕಯ ದಳ ಸೇರಿದಂತೆ ಮೋದಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಸರ್ಪಗಾವಲು ಇರಲಿದೆ..
ಪ್ರಧಾನಿ ಭೋಜನದ ಮೆನು
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನದ ಭೋಜನಕ್ಕೆ ಫುಲ್ಕಾ ಚಪಾತಿ, ದಾಲ್ ಫ್ರೈ, ಪಲಾವ್, ವೆಜ್ ಸೂಪ್, ವೆಜ್ ಅರಬರ ಕಬಾಬ್, ಡ್ರೈ ಫ್ರೂಟ್ಸ್ ಮತ್ತು ಹಣ್ಣಗಳ ಮೆನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಮಜ್ಜಿಗೆ ಹಾಗೂ ಬ್ಲಾಕ್ ಟಿ ಸಹ ಪ್ರಧಾನಿ ಮೆನುವಿನಲ್ಲಿದ್ದು, ಪ್ರಧಾನಿಗಳೊಂದಿಗೆ 50 ಜನ ಮುಖ್ಯ ಅತಿಥಿಗಳಿಗೆ ಆಹಾರ ಸಿದ್ಧಪಡಿಸುವ ಜವಾಬ್ದಾರಿಯನ್ನು ಸಮಾವೇಶ ನಡೆಯುವ ಸ್ಥಳಕ್ಕೆ ಸಮೀಪದಲ್ಲೇ ಇರುವ ಶಿವಳ್ಳಿ ರೆಸ್ಟೋರೆಂಟ್‌ಗೆ ವಹಿಸಲಾಗಿದೆ.
ಅಂಬೆಗಾಲು ಕೃಷ್ಣನ ವಿಗ್ರಹ ಉಡುಗೊರೆ
ಚುನಾವಣಾ ಪ್ರಚಾರಕ್ಕೆ ಬೊಂಬೆನಾಡಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಪ್ರಸಿದ್ಧ ಅಂಬೆಗಾಲಿನ ಕೃಷ್ಣನ ಪಂಚಲೋಹದ ವಿಗ್ರಹವನ್ನು ಉಡುಗೊರೆಯಾಗಿ ಕೊಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 5.30 ಕೆ.ಜಿ ತೂಕದ ಪಂಚಲೋಹದ ವಿಗ್ರಹವನ್ನು ಸಿದ್ಧಪಡಿಸಲಾಗಿದ್ದು, ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಧಾನಿ ನರೇಂದ್ರ ಮೋದಿಗೆ ಅಂಬೆಗಾಲಿನ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಕಮಲ ಅರಳಿಸಲು ಕಾರ್ಯತಂತ್ರ
ಒಕ್ಕಲಿಗರ ಶಕ್ತಿಕೇಂದ್ರದಲ್ಲಿ ಕಮಲ ಅರಳಿಸುವ ಸಂಕಲ್ಪ ತೊಟ್ಟಿರುವ ಬಿಜೆಪಿ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಸುಮಾರು 10 ವಿಧಾನಸಭಾ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವ ಚುನಾವಣಾ ಪ್ರಚಾರ ಸಮಾವೇಶ ಆಯೋಜಿಸಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ಜಿಲ್ಲೆಯ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು, ಈ ಭಾಗದಲ್ಲಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುಲು ಯೋಚಿಸಿದೆ. ಅದರಂತೆ ರಾಮನಗರ ಮತ್ತು ಮಂಡ್ಯ ಎರಡು ಜಿಲ್ಲೆಯ ಜನರನ್ನು ಒಂದೆಡೆ ಸೇರಿಸಿ ಬಿಜೆಪಿಯತ್ತ ಸೆಳೆಯಲು ಸಮಾವೇಶ ಆಯೋಜಿಲಾಗಿದ್ದು, ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಶ್ರಮಿಸುತ್ತಿದೆ.
ಡಿಕೆಶಿ-ಎಚ್ಡಿಕೆಗೆ ಠಕ್ಕರ್
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಠಕ್ಕರ್ ನೀಡಿ ಕ್ಷೇತ್ರದಲ್ಲೇ ಅವರನ್ನು ಕಟ್ಟಿಹಾಕಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಅದರಂತೆ ಕನಕಪುರದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಆರ್.ಅಶ್ವತ್‌್ಥ ಅವರನ್ನು ಕಣಕ್ಕಿಳಿಸಿದ್ದರೆ, ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿ ಠಕ್ಕರ್ ನೀಡಿದೆ. ಇದೀಗ ರಾಮನಗರ ಜಿಲ್ಲೆಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಆಯೋಜಿಸುವ ಮೂಲಕ ಒಕ್ಕಲಿಗರ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದ್ದು, ಈ ಕಾರ್ಯತಂತ್ರ ಎಷ್ಟುಫಲಕೊಡಲಿದೆ ಕಾದು ನೋಡಬೇಕಿದೆ.
ಮನ್ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ
6 ಕಡೆ ಪಾರ್ಕಿಂಗ್ ವ್ಯವಸ್ಥೆ
ಪ್ರಧಾನಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಸಾರ್ವಜನಿಕರ ವಾಹನಗಳಿಗೆ 6 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಚನ್ನಪಟ್ಟಣ ಕಡೆಯಿಂದ ಬರುವವರು ಬೈರಾಪಟ್ಟಣದ ಹೊರಭಾಗ ಇರುವ ಬೈಪಾಸ್ ರಸ್ತೆ, ಬೈರಾಪಟ್ಟಣ ಸರಕಾರಿ ಪ್ರೌಢಶಾಲಾ ಆವರಣ, ನಯರಾ ಪೆಟ್ರೋಲ್ ಬಂಕ್‌ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಮಂಡ್ಯ ಕಡೆಯಿಂದ ಬರುವವರಿಗೆ ವೈಶಾಲಿ ಹೋಟೆಲ್ ಪಕ್ಕ, ಕವಿತಾ ಉಪಚಾರ್, ಶಿವಳ್ಳಿ ಹೋಟೆಲ್ ಪಕ್ಕದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ವಿಐಪಿ ಪಾಸ್ ಹೊಂದಿರುವವರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.