Davanagere: ಪ್ರಧಾನಿ ಮೋದಿಯಿಂದ ದೇಶಕ್ಕೆ ದೊಡ್ಡ ಗಂಡಾಂತರ, ಒಳಿತು ಮಾಡುವುದಿದ್ದರೆ ತಕ್ಷಣ ರಾಜೀನಾಮೆ ಕೊಡಲಿ: ಕಾಂಗ್ರೆಸ್ ಮುಖಂಡ

Kannadaprabha News   | Kannada Prabha
Published : May 29, 2026, 01:38 PM IST
PM Modi failed in every sector should resign immediately kpcc D Basavaraj demands

ಸಾರಾಂಶ

ಬೆಲೆ ಏರಿಕೆ, ವಿದೇಶಾಂಗ ನೀತಿ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ತಕ್ಷಣವೇ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮೋದಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ ಎಂದು ಎಚ್ಚರಿಸಿದ್ದಾರೆ.

ದಾವಣಗೆರೆ (ಮೇ.29): ಬೆಲೆ ಏರಿಕೆ, ವಿದೇಶ ವ್ಯವಹಾರ, ಆರ್ಥಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಒಳಿತು ಮಾಡುವುದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮೋದಿಯವರು ಇದೇ ರೀತಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂದರು.

ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ತಿಂಗಳಾದರೂ ತೈಲ, ಅನಿಲ ಬೆಲೆ ಹೆಚ್ಚಳದ ಬಗ್ಗೆ ನರೇಂದ್ರ ಮೋದಿಯವರಿಗೆ ಗೊತ್ತಿರಲಿಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆಯೂ ಅದೆಲ್ಲಾ ನೆನಪಿಗೆ ಬರಲಿಲ್ಲ. ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಬರುತ್ತಿದ್ದಂತೆ ಜ್ಞಾನೋದಯವಾಗಿ, ಪೆಟ್ರೋಲ್‌-ಡೀಸೆಲ್‌ ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆ ಜೊತೆಗೆ ಅದರ ದರ ಹೆಚ್ಚಿಸಿದ್ದಾರೆ ಎಂದು ಅವರು ಟೀಕಿಸಿದರು.

ಮಿತವ್ಯಯದ ಬಗ್ಗೆ ದೇಶ ವಾಸಿಗಳಿಗೆ ಉಪದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಇದಕ್ಕೆ ನೂರಾರು ಕೋಟಿ ರು. ಖರ್ಚು ಮಾಡುತ್ತಿದ್ದಾರೆ. ವಿದೇಶ ಪ್ರವಾಸ ಕೈಗೊಳ್ಳುವುದು ಅದಾನಿ ವ್ಯವಹಾರ ಸ್ಥಾಪನೆಗೆ ಹೊರತು, ದೇಶದ ಹಿತದೃಷ್ಟಿಯಿಂದ ಅಲ್ಲ. ಅದಾನಿ ಅಮೇರಿಕಾದ ಜೊತೆಗೆ ವ್ಯವಹಾರ ಸಂಬಂಧ ಹೊಂದಿರುವ ಕಾರಣಕ್ಕೆ ಮೋದಿ ಈಗ ಅಮೇರಿಕಾ ಹೇಳಿದಂತೆ ಕೇಳುತ್ತಿದ್ದಾರೆ ಎಂದು ದೂರಿದರು.

ಮೋದಿ ಸರ್ಕಾರದ ವಿದೇಶಾಂಗ ನೀತಿಗಳ ಪರಿಣಾಮವಾಗಿ ದೇಶ ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದೆ. ನೆರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನೇ ಹೊಂದಿಲ್ಲ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತಾಗಿದೆ. ನರೇಂದ್ರ ಮೋದಿಯೆಂದರೆ ದುಬಾರಿ ಎನ್ನುವಂತೆ ತೈಲ, ಅನಿಲ ಬೆಲೆ ದಿನದಿನಕ್ಕೂ ಏರಿಕೆಯಾಗುತ್ತಿದ್ದು, ಜನಜೀವನಕ್ಕೆ ಒಂದಲ್ಲ ಒಂದು ರೀತಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಇಂಟೆಕ್ ಅಧ್ಯಕ್ಷ ಕೆ.ಎಂ.ಮಂಜುನಾಥ, ಬಿ.ಎಚ್.ಉದಯಕುಮಾರ, ಡಿ.ಶಿವಕುಮಾರ, ಡಿ.ಕೇಶವ ನಾಯ್ಕ, ಬಿ.ಎಸ್.ಸುರೇಶ ಇತರರು ಇದ್ದರು.

ಅಚ್ಚೇ ದಿನ್‌ ಅಂತಲೇ ಹೇಳಿಕೊಂಡೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇರುವವರೆಗೂ ದೇಶಕ್ಕೆ ಅಚ್ಚೇ ದಿನ್ ಬರಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಜನರ ಒಳ್ಳೆಯದು ಮಾಡಬೇಕೆಂಬ ಕನಿಷ್ಠ ಕಾಳಜಿಯೇನಾದರೂ ನರೇಂದ್ರ ಮೋದಿ ಅವರಿಗೆ ಇದ್ದರೆ ತಕ್ಷಣವೇ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಕಾರ ಮಾಡಲಿ.

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೆಡಿಎಸ್‌ಗೆ ಸೇರಿದ ಬೆನ್ನಲ್ಲೇ ದೇವೇಗೌಡರ ಕಾಲು ಹಿಡಿದು ಆಶೀರ್ವಾದ ಪಡೆದ ಯುವನಾಯಕಿ ಬಿಗ್‌ಬಾಸ್‌ ಜಾಹ್ನವಿ
EXCLUSIVE: ದೆಹಲಿ ವಿಮಾನದಲ್ಲೇ ಸಚಿವರ ಪಟ್ಟಿ ಸಿದ್ಧಪಡಿಸಿದ ಡಿ.ಕೆ. ಶಿವಕುಮಾರ್! ಹೈಕಮಾಂಡ್‌ಗೆ ನೀಡಲಿರುವ 'ಡಿಕೆಶಿ ಟೀಮ್'ನಲ್ಲಿ ಯಾರಿದ್ದಾರೆ?