ವಕ್ಫ್ ಆಸ್ತಿ ಕಬಳಿಕೆಯ ವರದಿ ಸದನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

By Govindaraj SFirst Published Sep 22, 2022, 1:01 AM IST
Highlights

ರಾಜ್ಯ ವಕ್ಫ್ ಬೋರ್ಡ್‌ನ 2.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ ಕುರಿತ ಅನ್ವರ್‌ ಮಾಣಿಪ್ಪಾಡಿ ಆಯೋಗದ ಪೂರ್ಣ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು.

ವಿಧಾನಸಭೆ (ಸೆ.22): ರಾಜ್ಯ ವಕ್ಫ್ ಬೋರ್ಡ್‌ನ 2.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ ಕುರಿತ ಅನ್ವರ್‌ ಮಾಣಿಪ್ಪಾಡಿ ಆಯೋಗದ ಪೂರ್ಣ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ, ಈ ಕುರಿತು ಉಪ ಲೋಕಾಯುಕ್ತರು ನೀಡಿರುವ ವರದಿ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಬಿಜೆಪಿ ಸದಸ್ಯರಾದ ಕೆ.ರಘುಪತಿ ಭಟ್‌, ಬಸನಗೌಡ ಪಾಟಿಲ್‌ ಯತ್ನಾಳ್‌ ಹಾಗೂ ಸಂಜೀವ ಮಠಂದೂರು ಅವರು, ‘2.5 ಲಕ್ಷ ಕೋಟಿ ರು. ಮೌಲ್ಯದ 29 ಸಾವಿರ ಎಕರೆ ಜಮೀನನ್ನು ದೊಡ್ಡ ದೊಡ್ಡ ಕಳ್ಳರು ಕಬಳಿಸಿದ್ದಾರೆ. ಕೂಡಲೇ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ನೀಡಬೇಕು. ಜತೆಗೆ ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಒತ್ತಾಯ ಮಾಡಿದರು.

ಭೂ ಕಂದಾಯ ಕಾಯ್ದೆ ತಿದ್ದುಪಡಿ 2022: ಠೇವಣಿ ಇಟ್ಟು ಮೋಸಹೋದರೆ ಇನ್ನು ಕಾಯ್ದೆ ರಕ್ಷಣೆ

ಇದನ್ನು ಸ್ವಾಗತಿಸುತ್ತಲೇ ಕುಟುಕಿದ ಕಾಂಗ್ರೆಸ್‌ನ ಯು.ಟಿ.ಖಾದರ್‌, ‘ಅಲ್ಪಸಂಖ್ಯಾತರ ಮೇಲೆ ನಿಮಗಿರುವ ಕಾಳಜಿಗೆ ಅಭಿನಂದನೆ. ರಘುಪತಿ ಭಟ್‌ ಸೇರಿದಂತೆ ಇವರಾರ‍ಯರೂ ಹಿಂದೂಗಳ ಸಮಸ್ಯೆಗಳ ಬಗ್ಗೆಯಾಗಲಿ, ಮೀನುಗಾರರ ಸಮಸ್ಯೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಸ್ಮಾರ್ಚ್‌ ಸಿಟಿ ಬಗ್ಗೆ ಚರ್ಚೆ ಮಾಡಿಲ್ಲ. ಎರಡು ವರ್ಷದಿಂದ ಈ ವಿಚಾರ ಪ್ರಸ್ತಾಪಿಸದೆ ಈಗ 40 ಪರ್ಸೆಂಟ್‌ ವಿಚಾರದಿಂದ ತಪ್ಪಿಸಿಕೊಳ್ಳಲು ಈ ವಿಚಾರ ತಂದಿದ್ದೀರಿ’ ಎಂದು ಟೀಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ‘ನಿಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಸ್ತಿ ರಕ್ಷಣೆಗೆ ಯತ್ನಿಸದೆ ವರದಿ ತಿರಸ್ಕರಿಸಿದಾಗ ನೀವು ಯಾಕೆ ಮಾತನಾಡಲಿಲ್ಲ?’ ಎಂದು ಖಾದರ್‌ ಅವರನ್ನು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದವೂ ನಡೆಯಿತು.

ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ‘40 ಪರ್ಸೆಂಟ್‌ ವಿಚಾರದ ಬಗ್ಗೆಯೂ ಮಾತನಾಡುತ್ತೇವೆ. ಅದರಲ್ಲಿ ಯಾರಾರ‍ಯರ ಹೆಸರು ಬರುತ್ತದೆ ಎಂಬುದು ನಿಮಗೂ ಗೊತ್ತಾಗಲಿದೆ. ಅದಕ್ಕೂ ನೀವೇ ಉತ್ತರ ಕೊಡಬೇಕಾಗುತ್ತದೆ. ಅದು ಭ್ರಷ್ಟಾಚಾರ ಆದರೆ ಪವಿತ್ರವಾದ ಸರ್ಕಾರಿ ವಕ್ಫ್ ಆಸ್ತಿ ಕಬಳಿಕೆಯೂ ಭ್ರಷ್ಟಾಚಾರ ಎಂಬುದು ತಿಳಿದಿರಲಿ. 2.5 ಲಕ್ಷ ಕೋಟಿ ರು. ಆಸ್ತಿ ದೊಡ್ಡ ದೊಡ್ಡ ಭ್ರಷ್ಟರ ಪಾಲಾಗಿದೆ. ಈ ಬಗ್ಗೆ ವರದಿಯನ್ನು ಸದನದಲ್ಲಿ ಮಂಡಿಸಿ ಪ್ರತಿಯೊಬ್ಬ ಸದಸ್ಯರಿಗೂ ಪ್ರತಿ ನೀಡುತ್ತೇವೆ. ಜತೆಗೆ ಈ ಕುರಿತ ಉಪ ಲೋಕಾಯುಕ್ತ ವರದಿ ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ನೆರೆ ಪರಿಹಾರಕ್ಕೆ 3600 ಕೋಟಿ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

ಪರಿಷತ್‌ನಲ್ಲೂ ಮಾಣಿಪ್ಪಾಡಿ ವರದಿ ಪ್ರಸ್ತಾಪ: ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್‌ ಮಾಣಿಪ್ಪಾಡಿ ವರದಿ ಕುರಿತು ವಿಧಾನಪರಿಷತ್‌ನಲ್ಲೂ ಪ್ರಸ್ತಾಪವಾಗಿದೆ. ಆದರೆ ನಿಯಮ ಪ್ರಕಾರ ನೋಟಿಸ್‌ ನೀಡದ ಕಾರಣ, ವರದಿಯನ್ನು ಸದನದಲ್ಲಿ ಸರ್ಕಾರ ಮಂಡಿಸಬೇಕೆಂದು ಕೋರಿದ ಬಿಜೆಪಿ ಸದಸ್ಯರ ಮನವಿಯನ್ನು ಸಭಾಪತಿ ರಘುನಾಥ್‌ರಾವ್‌ ಮಲ್ಕಾಪುರೆ ತಳ್ಳಿ ಹಾಕಿದರು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ವಕ್ಫ್ ಸಚಿವರು ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿದರೂ ಬಿಜೆಪಿ ಸದಸ್ಯರು ಪಟ್ಟು ಮುಂದುವರೆಸಿದರು. ಇದಕ್ಕೆ ಅಸಮಾಧಾನಗೊಂಡ ಸಭಾಪತಿ ಮಲ್ಕಾಪುರೆ, ಪ್ರತಿಪಕ್ಷಗಳ ರೀತಿ ಆಡಳಿತ ಪಕ್ಷದವರು ಮಾತನಾಡಿದರೆ ಹೇಗೆ? ಈ ಬಗ್ಗೆ ಮೊದಲೇ ನೋಟಿಸ್‌ ನೀಡದ ಕಾರಣ ಯಾರಿಗೂ ಮಾತನಾಡಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

click me!