ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ ಬಿಜೆಪಿ: ಮಹಮ್ಮದ್‌ ನಲಪಾಡ್‌

By Govindaraj SFirst Published Sep 22, 2022, 12:32 AM IST
Highlights

ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವುದರ ಮೂಲಕ ದೇಶದ ಜನರನ್ನು ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯುವಜನರು ಮುಂದಾಗಬೇಕು ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಲಪಾಡ್‌ ತಿಳಿಸಿದರು. 

ಮಳವಳ್ಳಿ (ಸೆ.22): ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವುದರ ಮೂಲಕ ದೇಶದ ಜನರನ್ನು ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯುವಜನರು ಮುಂದಾಗಬೇಕು ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಲಪಾಡ್‌ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದ ಬಿಜೆಪಿ ಸರ್ಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ. ಅಚ್ಚೆದೀನ್‌ ಎನ್ನುವುದು ಉದ್ಯಮಿಗಳಾದ ಅಂಬಾನಿ, ಅದಾನಿ ಅವರಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಜೀವನ ಮಾಡಲು ಬಡವರು ಸಂಕಷ್ಟಪಡುವಂತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಿರುದ್ಯೋಗ ಸಮಸ್ಯೆ ನಿವಾರಿಸಿ ದೇಶವನ್ನು ಉಳಿಸಲು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು, ಈಗಾಗಲೇ ಬಿಜೆಪಿ ಜನವಿರೋಧಿ ನೀತಿಯಿಂದ ಬೇಸತ್ತಿರುವ ಜನರು ಕಾಂಗ್ರೆಸ್‌ ಕಡೆಗೆ ಮುಖ ಮಾಡಿದ್ದಾರೆ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರ ತಂದರೆ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು. ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗ ಸೃಷ್ಟಿಎಂಬ ವೆಬ್‌ಸೈಟ್‌ ತೆರೆದಿದ್ದು, ಇದರಲ್ಲಿ ನೋಂದಣಿಯಾದ ಯುವಕ-ಯುವತಿಯರಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿದ ಕೂಡಲೇ ಉದ್ಯೋಗ ಸೇರಿದಂತೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

Belagavi: ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ್ದ ಚಾಲಾಕಿ ಕಳ್ಳಿಯ ಬಂಧನ

ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರ ಭಾರತ್‌ ಜೋಡೋ ಪಾದಯಾತ್ರೆಯೂ ಕರ್ನಾಟಕದಲ್ಲಿ 23 ದಿನ ಸಂಚರಿಸಲಿದ್ದು, ಮೂರು ದಿನಗಳ ಕಾಲ ಯುವಕರೊಂದಿಗೆ ಸಂವಾದ ಹಾಗೂ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡವರನ್ನು ಭೇಟಿ ಮಾಡಿಸಿ ನಿರುದ್ಯೋಗದ ಸಮಸ್ಯೆ ಮೇಲೆ ಬೆಳಕು ಚೆಲ್ಲಲಾಗುವುದು ಎಂದರು. ರಾಜ್ಯದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿದಂತೆ 7 ಜಿಲ್ಲೆಗಳಲ್ಲಿ ಪಾದಯಾತ್ರೆಯೂ ನಡೆಯುತ್ತಿದ್ದು, ಯೂತ್‌ ಕಾಂಗ್ರೆಸ್‌ನಿಂದ 8 ಜಿಲ್ಲೆಗಳಲ್ಲೂ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾದಯಾತ್ರೆಗೆ ಪಾಲ್ಗೊಳ್ಳುವಂತೆ ಸಂಘಟಿಸಲಾಗುತ್ತಿದೆ ಎಂದರು. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮೊಹಮ್ಮದ್‌ ನಲಪಾಡ್‌ ಅವರನ್ನು ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಪ್ರಭುಸ್ವಾಮಿ, ಶಿವರಾಜ್‌ನಾಯಕ್‌, ಸಂತೋಷ್‌, ಸತೀಶ್‌, ಗೋವರ್ಧನ್‌, ಮಹೇಶ್‌ ಇತರರಿದ್ದರು.

2023ರ ವೇಳೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ: 2023ರ ವೇಳೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು, ರಾಷ್ಟ್ರೀಯ ನಾಯಕ ರಾಹುಲ…ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಯೂತ್‌ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷ ಮಹಮ್ಮದ್‌ ನಲಪಾಡ್‌ ತಿಳಿಸಿದರು. ಮಾರ್ಟಳ್ಳಿಯಲ್ಲಿ ಯುವ ಕಾಂಗ್ರೆಸ್‌ ಆಯೋಜಿಸಿದ್ದ ಉದ್ಯೋಗ ಸೃಷ್ಟಿಹಾಗೂ ಭಾರತ್‌ ಜೋಡೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಲವು ಜನಪರ ಯೋಜನೆ ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡಿದ್ದು, ಜನಮನ್ನಣೆ ಗಳಿಸಿದೆ. ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ತಂದು ಕೊಡುವಲ್ಲಿ ವಹಿಸಿದ ಶ್ರಮ ಅಪಾರ. 

Chikkamagaluru: ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ಬಿಜೆಪಿ ಪಕ್ಷ, ಸಮಾಜದಲ್ಲಿ ಅಶಾಂತಿ ತಂದೊಡ್ಡುತ್ತಿದೆ. ಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಭರವಸೆ ನೀಡಿದ್ದರು. ಆ ಭರವಸೆ ಸುಳ್ಳಾಗಿದೆ. ಗ್ಯಾಸ್‌, ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಜನತೆಗೆ ಉತ್ತಮ ಆಡಳಿತ ನೀಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಈಗಾಗಲೇ ಜನರಿಗೆ ಮನದಟ್ಟಾಗಿದೆ. ರಾಹುಲ್‌ಗಾಂಧಿ ಭಾರತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. 2023ರ ವೇಳೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

click me!