ಪ್ರತಿಯೊಬ್ಬರಿಗೆ 500 ಕೊಟ್ಟು ಕರೆದುಕೊಂಡು ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಹೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಬಸ್‌ನಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ 20 ಸೆಕೆಂಡ್‌ನ ವಿಡಿಯೋ ಇದಾಗಿದೆ.
ಬೆಳಗಾವಿ (ಮಾ.03): ಪ್ರತಿಯೊಬ್ಬರಿಗೆ 500 ಕೊಟ್ಟು ಕರೆದುಕೊಂಡು ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಹೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಬಸ್‌ನಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ 20 ಸೆಕೆಂಡ್‌ನ ವಿಡಿಯೋ ಇದಾಗಿದೆ. ಪಂತಬಾಳೇಕುಂದ್ರಿಯಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದ ಬಳಿಕ ಬಸ್‌ನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರು ತೆರಳುತ್ತಿದ್ದರು.
ಈ ವೇಳೆ ‘ನೀವಿಬ್ಬರು ಸಮಾವೇಶಕ್ಕೆ ಬರಬೇಕು’ ಎಂದು ಲಕ್ಷ್ಮೇ ಹೆಬ್ಬಾಳಕರ ಆಹ್ವಾನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಚುನಾವಣೆ ಇರುವುದರಿಂದ ಅವರು ಜನರನ್ನು ಸೇರಿಸುತ್ತಾರೆ. ಪ್ರತಿಯೊಬ್ಬರನ್ನು 500 ಕೊಟ್ಟು ಕರೆದುಕೊಂಡು ಬರಬೇಕು’ ಎಂದು ಹೇಳಿದ್ದಾರೆ. ಆದರೆ, ವಿಪಕ್ಷಗಳನ್ನು ಉದ್ದೇಶಿಸಿ ಅವರು ಈ ಮಾತನಾಡಿದ್ದಾರೆಯೇ? ಅಥವಾ ತಾವು ನಡೆಸುವ ಸಮಾವೇಶದ ಬಗ್ಗೆ ಮಾತನಾಡಿದ್ದಾರೆಯೇ ಎನ್ನುವುದು ಅಸ್ಪಷ್ಟವಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿದ್ದು ಸತ್ಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ ಸತ್ಯ ಹೇಳಿದ್ದಾರೆ. ಪ್ರಾರಂಭದಿಂದಲೂ ಅವರು ಜನತೆಗೆ ಹಣ ಕೊಡುತ್ತಲೇ ಬಂದಿದ್ದಾರೆ. ಈಗಷ್ಟೇ ಅದು ಬಯಲಾಗಿದೆ. ಅದರಲ್ಲಿ ಆಶ್ಚರ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬೊಬ್ಬರದು ಒಂದೊಂದು ಪರಂಪರೆ. ಅವರದ್ದು ಈ ಪರಂಪರೆ ಅಷ್ಟೇ. ಅವರ ಮಾತಿನಿಂದಲೇ ಬಹಿರಂಗವಾಗಿದೆ. ಅವರು ಸತ್ಯವನ್ನೇ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯ ವಿಡಿಯೋ ತಿರುಚಲಾಗಿದೆ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್‌ನಲ್ಲಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬರಿಗೆ .500 ಕೊಟ್ಟು ಕರೆದುಕೊಂಡು ಬರುವಂತೆ ಹೇಳಿಲ್ಲ. ಈ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ. ಬಿಜೆಪಿಯ ಕೆಲ ವಿರೋಧಿಗಳು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣದಲ್ಲಿ ಇದನ್ನು ವೈರಲ… ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅನಗತ್ಯವಾಗಿ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ.
ವಿಧಾನಸೌಧದಲ್ಲೇ ವಿಪರೀತ ಲಂಚ ತಾಂಡವ: ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಹೋರಾಡಿದ ಧೀಮಂತ ನಾಯಕ. ಅವರ ಬಾಯಿಯಿಂದ ಇಂತಹ ಹೇಳಿಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಮೋದಿಯವರ ಬೆಳಗಾವಿ ರೋಡ್ ಶೋಗೆ ದುಡ್ಡುಕೊಟ್ಟು ಜನರನ್ನು ಕರೆಸಿದ್ದರು ಎಂದು ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶದಲ್ಲಿಯೇ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚುತ್ತಿದೆ. ಇದನ್ನು ಸಹಿಸದೇ ಬಿಜೆಪಿಯವರು ಸಿದ್ದರಾಮಯ್ಯ ಅವರ ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ರಾಜ್ಯದ ಜನ ಇಂತಹ ವಿಡಿಯೋಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.