ಬಿಜೆಪಿ ಹಾಗೂ ಕಾಂಗ್ರೆಸ್ ರೈತರ, ಜನಸಾಮಾನ್ಯರ, ಮಹಿಳೆಯರ, ಯುವಕರ ಸಮಸ್ಯೆಗಳ ಬಗ್ಗೆ ಮಾತನಾಡದೆ ಕೇವಲ ಪರಸ್ಪರ ರಾಜಕೀಯ ಕೆಸರೆರಚಾಟ, ದೊಂಬರಾಟ ಮಾಡುತ್ತಿರುವುದು ನಾಚಿಕೆಗೇಡು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಿಪಟೂರು (ಮಾ.09): ಮುಂಬರಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮಹಾ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡದೆ ತಿರಸ್ಕರಿಸುವ ಮೂಲಕ ಜಾತ್ಯತೀತ ಜನತಾದಳಕ್ಕೆ ಮತ ನೀಡಿ ಸ್ವತಂತ್ರವಾಗಿ ಅಧಿಕಾರ ನಡೆಸುವಂತೆ ಮಾಡಿದರೆ ಪಂಚರತ್ನ, ಜನತಾ ಜಲಧಾರೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಸಂಪೂರ್ಣ ಜಾರಿಗೆ ತರುವ ಮೂಲಕ ಕರುನಾಡಿನ ಜನತೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಆಡಳಿತ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಬಿದರೆಗುಡಿ ಗ್ರಾಮದ ನಾಡದೇವತೆ ಬಿದರಮ್ಮದೇವಿಯವರ ದರ್ಶನ, ಪೂಜೆ ನಂತರ ಪ್ರಾರಂಭವಾದ 77ನೇ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ರೈತರ, ಜನಸಾಮಾನ್ಯರ, ಮಹಿಳೆಯರ, ಯುವಕರ ಸಮಸ್ಯೆಗಳ ಬಗ್ಗೆ ಮಾತನಾಡದೆ ಕೇವಲ ಪರಸ್ಪರ ರಾಜಕೀಯ ಕೆಸರೆರಚಾಟ, ದೊಂಬರಾಟ ಮಾಡುತ್ತಿರುವುದು ನಾಚಿಕೆಗೇಡು. ಈ ರಾಜ್ಯದ ರೈತರ, ಗ್ರಾಮಗಳ, ಮಹಿಳೆಯರ, ಯುವಕರ ಅಭಿವೃದ್ಧಿಯಾಗಬೇಕಾದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ನಾನು ಇವರೆಲ್ಲರ ಪರವಾಗಿ ಪಂಚರತ್ನ ಯೋಜನೆ, ಜನತಾಜಲಧಾರೆ ಸೇರಿದಂತೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾದಂತಹ ಅನೇಕ ಯೋಜನೆಗಳನ್ನು ಜಾರಿಗೆ ತರಲು ಏಕಾಂಗಿಯಾಗಿ ಹೋರಾಟ ಕಟ್ಟಿದ್ದು ಇದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ.
ಅಧಿಕಾರ ಕೊಟ್ಟರೆ ರಾಮರಾಜ್ಯ ನಿರ್ಮಾಣ: ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಭರವಸೆ
ನಾನು ಹಾಗೂ ನಮ್ಮ ಪಕ್ಷ ಹೇಳಿದಂತೆ, ಮಾತುಕೊಟ್ಟಂತೆ ನಡೆದುಕೊಳ್ಳುತ್ತೇವೆ. ಕಳೆದ ಬಾರಿ ಕೆಲವೇ ತಿಂಗಳುಗಳ ಕಾಲ ನಾನು ಮುಖ್ಯಮಂತ್ರಿಯಾದರೂ ರೈತರ ಸಾಲಮನ್ನಾ ಬಗ್ಗೆ ಹೇಳಿದಂತೆ 26 ಸಾವಿರ ಕೋಟಿ ಸಾಲಮನ್ನಾ ಮಡಿ ತೋರಿಸಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಕೊನೆ ಆಸೆಯಂತೆ ರೈತರ ಸಮೃದ್ಧಿ ಜೀವನ, ಹಳ್ಳಿಗಳ ಏಳಿಗೆಯನ್ನು ಅವರು ಕಣ್ತುಂಬಿಕೊಳ್ಳಬೇಕಾದರೆ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾಗಿದೆ. 30-40 ಸೀಟು ಗೆಲ್ಲುವುದು ನಮಗೆ ಕಷ್ಟವಲ್ಲ. 123 ಸ್ಥಾನ ಪಡೆದು ಜನತೆಗಾಗಿ, ರೈತರಿಗಾಗಿ, ಮಹಿಳೆಯರಿಗಾಗಿ, ಯುವಕರಿಗಾಗಿ, ತೆಂಗುಬೆಳೆಗಾರರಿಗಾಗಿ ಅಧಿಕಾರ ಹಿಡಿಯುವುದು ನಮಗೆ ಚಾಲೆಂಜ್ ಆಗಿದ್ದು ಅದಕ್ಕಾಗಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ಈ ಹೋರಾಟ ಕಟ್ಟಿದ್ದೇನೆ. ಹಾಗಾಗಿ ನನಗೆ ಇದು ಕೊನೆ ಚುನಾವಣೆಯಾಗಿದ್ದು ನೀವು ಅಧಿಕಾರ ಕೊಟ್ಟಾಗ, ನನ್ನ ಮಾತು ತಪ್ಪಿದರೆ ನಮ್ಮ ಪಕ್ಷವನ್ನೇ ವಿಸರ್ಜಿಸಲು ತೀರ್ಮಾನಿಸದ್ದೇನೆ ಎಂದು ತಿಳಿಸಿದರು.
ಕೊಬ್ಬರಿ ಬೆಲೆ ರು. 15000 ಇರುವಂತೆ ಮಾಡುವೆ: ಕೊಬ್ಬರಿ ಬೆಲೆ ತುಂಬಾ ಕುಸಿದು ರು. 8 ಸಾವಿರಕ್ಕೆ ಬಂದಿರುವುದು ದುರ್ದೈವ. ಇಲ್ಲಿ ರೈತ ಸಂಘಟನೆಗಳು, ತೆಂಗು ಬೆಳೆಗಾರರು ಕಳೆದ 16 ದಿನಗಳಿಂದ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಲು ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ನಾಚಿಕೆಗೇಡು. ನಾನು ಈ ಹಿಂದೆ ಸಿಎಂ ಆಗಿದ್ದಾಗ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು ಆಗ ನಾನು ಪೋ›ತ್ಸಾಹ ಧನ ನೀಡಿದ್ದೆ. ಹಾಗಾಗಿ ನಮಗೆ ಅಧಿಕಾರ ಸಿಕ್ಕಿದ ತಕ್ಷಣ ಕೊಬ್ಬರಿ ಬೆಲೆ ಕನಿಷ್ಠ ಕ್ವಿಂಟಲ್‌ಗೆ ರು. 15 ಸಾವಿರಕ್ಕಿಂತ ಕಡಿಮೆಯಾಗದಂತೆ ಯೋಜನೆ ರೂಪಿಸಿ ಜಾರಿಗೆ ತರುವೆ. ಆದ್ದರಿಂದ ಇಲ್ಲಿನ ತೆಂಗುಬೆಳೆಗಾರರು ನಮಗೆ ಅಧಿಕಾರ ಸಿಗಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ಮಾತನಾಡಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕುಮಾರಸ್ವಾಮಿ ಅವರು ಕೊಟ್ಟಮಾತನ್ನು ಉಳಿಸಿಕೊಳ್ಳುತ್ತಾರೆ. ಸಾಲ ಮನ್ನಾ ಮಾಡಿದ್ದು ಸೇರಿದಂತೆ ಅವರ ಅನೇಕ ಯೋಜನೆಗಳು ಈಗಲೂ ಜನರ ಮನಸ್ಸಿನಲ್ಲಿರುವುದೇ ಸಾಕ್ಷಿಯಾಗಿದ್ದು ಈ ಬಾರಿ ಜೆಡಿಎಸ್ ಪಕ್ಷವನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ರಥಯಾತ್ರೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ತಾಲೂಕು ಅಧ್ಯಕ್ಷ ಗುರುಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಮುಖಂಡರಾದ ಪ್ರಕಾಶ್, ರಾಕೇಶ್, ರೋಹಿತ್, ಬಾಳೇಕಾಯಿ ಸ್ವಾಮಿ, ನಾಗರಾಜ್, ಕೋಟನಾಯಕನಹಳ್ಳಿ ಪ್ರಶಾಂತ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಬಿದರೆಗುಡಿಯಲ್ಲಿ ರಥಯಾತ್ರೆಯ ಆರಂಭದಲ್ಲಿ ಪಕ್ಷದ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗುಲಾಬಿ ಹೂವಿನ ಹಾರವನ್ನು ಹಾಕುವ ಮೂಲಕ ಕುಮಾರಸ್ವಾಮಿಯವರನ್ನು ಸ್ವಾಗತ ಮಾಡಿದರು. ರಥಯಾತ್ರೆಯ ಅಲ್ಲಲ್ಲಿ ಕೊಬ್ಬರಿ, ತೆಂಗಿನಕಾಯಿ ಹಾಗೂ ವಿಶೇಷ ಹಾರಗಳನ್ನು ಕಾರ್ಯಕರ್ತರು ಹಾಕುತ್ತಿದ್ದರು. ಹೊನ್ನವಳ್ಳಿ, ನೊಣವಿನಕೆರೆಯ ಸಭೆಗಳಲ್ಲಿ ವಿಶೇಷವಾಗಿ ಎಚ್‌ಡಿಕೆಯವರನ್ನು ಸನ್ಮಾನಿಸಿದರು. ಹೊನ್ನವಳ್ಳಿ, ನೊಣವಿನಕೆರೆ ಹಾಗೂ ಕೆ.ಬಿ. ಕ್ರಾಸ್‌ನಲ್ಲಿ ಏರ್ಪಡಿಸಿದ್ದ ಸಭೆಗಳಲ್ಲಿ ಮಾತನಾಡಿದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರಥಯಾತ್ರೆ ಯಶಸ್ವಿಯಾಗಿ ನಡೆಯಿತು. ಸುಡು ಬಿಸಲಿಲಿನಲ್ಲೂ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ರೈತರು, ಮಹಿಳೆಯರು. ಯುವಕರು ಭಾಗವಹಿಸಿ ಎಚ್‌ಡಿಕೆ ಪರ ಘೋಷಣೆಗಳನ್ನು ಕೂಗುತ್ತಿದ್ದರು.
ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ಇಬ್ರಾಹಿಂ ಹೇಳಿಕೆ ಅಹಂಕಾರದ ಮಾತಲ್ಲ: ಎಚ್‌ಡಿಕೆ
ತುಮಕೂರಿನ 11 ಸ್ಥಾನಗಳು ನಮಗೆ: ನಾನು ರಾಜ್ಯದ ಅನೇಕ ಭಾಗಗಳಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದು ತಿಪಟೂರು ಸೇರಿದಂತೆ ಎಲ್ಲೆಡೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಹಳ್ಳಿಗಳಲ್ಲಿ ಜಾತಿಮತವಿಲ್ಲದೆ ರೈತರು, ತಾಯಂದಿರು, ಯುವಕರು ನನ್ನ ಪಂಚರತ್ನ ಯೋಜನೆಗಳನ್ನು ಹಾಗೂ ನನ್ನನ್ನು ಆಶೀರ್ವದಿಸುತ್ತಿರುವುದು ನನಗೆ ಚೈತನ್ಯ ತಂದುಕೊಟ್ಟಿದೆ. ತುಮಕೂರು ಜಿಲ್ಲೆಯ ಎಲ್ಲ 11 ಸ್ಥಾನಗಳನ್ನು ಜೆಡಿಎಸ್ ಪಕ್ಷ ಗೆಲ್ಲುವುದು ಖಚಿತ. ಹಾಗಾಗಿ ಇಲ್ಲಿನ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ರನ್ನು ಕಲ್ಪತರು ನಾಡಿನ ಮತದಾರರು ಗೆಲ್ಲಿಸಿಕೊಡುವ ಮೂಲಕ ರಾಜ್ಯದಲ್ಲಿ 123 ಸ್ಥಾನ ಪಡೆದು ಜೆಡಿಎಸ್ ಪಕ್ಷಕ್ಕೆ ಸ್ವತಂತ್ರ ಅಧಿಕಾರ ದೊರಕುವಂತೆ ಆಶೀರ್ವಾದ ಮಾಡಬೇಕು. ನನಗೆ ಅಧಿಕಾರ ಸಿಕ್ಕಿದ ತಕ್ಷಣ ಹೊನ್ನವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸುತ್ತೇನೆ ಎಂದು ಎಚ್‌ಡಿಕೆ ಮನವಿ ಮಾಡಿದರು.