ಇಂದು ತಾವು ಮಾಡುವ ಸಂಕಲ್ಪ ಮೇ ಮೊದಲ ವಾರದಲ್ಲಿ ಸಿದ್ಧಿಯಾಗಬೇಕಾದರೇ ಶಶಿಕಲಾ ಜೊಲ್ಲೆ ಅವರನ್ನು ಮತ್ತೆ ಗೆಲ್ಲಿಸಿ, ಮತ್ತೊಮ್ಮೆ ಸಚಿವರಾಗಲು ಸಂಕಲ್ಪ ಮಾಡುವಂತೆ ವಿಧಾನ ಪರಿಷತ್ ಸದಸ್ಯ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕರೆ ನೀಡಿದರು.
ಚಿಕ್ಕೋಡಿ (ಮಾ.09): ಇಂದು ತಾವು ಮಾಡುವ ಸಂಕಲ್ಪ ಮೇ ಮೊದಲ ವಾರದಲ್ಲಿ ಸಿದ್ಧಿಯಾಗಬೇಕಾದರೇ ಶಶಿಕಲಾ ಜೊಲ್ಲೆ ಅವರನ್ನು ಮತ್ತೆ ಗೆಲ್ಲಿಸಿ, ಮತ್ತೊಮ್ಮೆ ಸಚಿವರಾಗಲು ಸಂಕಲ್ಪ ಮಾಡುವಂತೆ ವಿಧಾನ ಪರಿಷತ್ ಸದಸ್ಯ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕರೆ ನೀಡಿದರು. ನಿಪ್ಪಾಣಿ ನಗರದಲ್ಲಿ ಹಮ್ಮಿಕೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಶಶಿಕಲಾ ಜೊಲ್ಲೆ ಅವರೇ ನಿಪ್ಪಾಣಿಯ ಬಿಜೆಪಿ ಅಭ್ಯರ್ಥಿ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿ ಗೆಲುವು ಸಾಧಿಸುವ ಮೂಲಕ ಶಶಿಕಲಾ ಜೊಲ್ಲೆ ಅವರು ಹ್ಯಾಟ್ರಿಕ್ ಹೀರೋಯಿನ್ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಭವಿಷ್ಯ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ. ಸುಳ್ಳು ಆರೋಪಕ್ಕೆ ಜನರು ಕಿಮ್ಮತ್ತು ಕೊಡುವುದಿಲ್ಲ. ಸುಖಾ ಸುಮ್ಮನೆ ತಳ ಬುಡವಿಲ್ಲದೇ ಟೀಕೆ, ಆರೋಪಗಳನ್ನು ಮಾಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ಸಲಹೆ ನೀಡಿದರು. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿರುವ ಕಾರ್ಯಗಳಿಗೆ ಇಡೀ ಜಗತ್ತೇ ಮೆಚ್ಚುಗೆ ಸೂಚಿಸಿದೆ. ಆದರೇ, ಕಾಂಗ್ರೆಸ್ ಮಾತ್ರ ಹುರುಳಿಲ್ಲದ ಆರೋಪ ಮಾಡುತ್ತಿದೆ. ಮೋದಿ ನೇತೃತ್ವದಲ್ಲಿ ದೇಶ, ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಕಂಡಿದ್ದು, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 5,700 ಕೋಟಿ ಮೊತ್ತದ ಉತ್ತರ ಕರ್ನಾಟಕದ 13 ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಸುಳ್ಳು: ಬಿ.ಎಸ್.ಯಡಿಯೂರಪ್ಪ
ನಿಪ್ಪಾಣಿಯಲ್ಲಿ ಮತ್ತೇ ಶಶಿಕಲಾ ಜೊಲ್ಲೆ ವಿಜಯಿಯಾಗಿ, ಮತ್ತೆ ಸಚಿವರಾಗುತ್ತಾರೆ ಎಂದು ಭರವಸೆ ನೀಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕನ್ನಡ ಮತ್ತು ಮರಾಠಿ ಭಾಷೆಗಳು ಬೇರೆ ಬೇರೆಯಾಗಿರಬಹುದು. ಆದರೆ, ಸಂಸ್ಕೃತಿ ಮಾತ್ರ ಒಂದೇಯಾಗಿದೆ. ಅಂದು ಬ್ರಿಟೀಷರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರೇ ಇಂದು ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳನ್ನು ನಂಬಬೇಡಿ. ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಗ್ಯಾರಂಟಿ. ಇವಿಎಮ ವಿರುದ್ಧ ದೂರನ್ನು ಕಾಂಗ್ರೆಸ್ ಈಗಲೇ ತಯಾರಿಸಿ ಇಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಇದಕ್ಕೂ ಮೊದಲು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನನ್ನ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದ್ದು, ಪ್ರತಿಯೊಬ್ಬರಲ್ಲಿ ನಮ್ಮ ದೇಶ, ನಮ್ಮ ಧರ್ಮ ಎಂಬ ಅಭಿಮಾನ ಬೆಳೆಯಬೇಕಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಆಡ್ವಾಣಿ ಅವರು ಹೇಗೆ ರಥಯಾತ್ರೆ ಮಾಡಿದ್ದರೋ, ಹಾಗೇನೇ 2023ರಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋದೆ ಈ ವಿಜಯ ಸಂಕಲ್ಪಯಾತ್ರೆಯ ಧ್ಯೇಯವಾಗಿದೆ. ತಮ್ಮ ಮನೆಯ ಮಗಳಾದ ನನ್ನನ್ನು 3ನೇ ಭಾರಿ ಆಯ್ಕೆ ಮಾಡುವಂತೆ ಮತದಾರರಲ್ಲಿ ವಿನಂತಿಸಿಕೊಂಡರು.
ಬಿಜೆಪಿ ಶಾಸಕ ಮಾಡಾಳು ಜಾಮೀನು ಹಿಂದೆ ಸರ್ಕಾರ ಕೈವಾಡ: ರಾಮಲಿಂಗಾ ರೆಡ್ಡಿ
ವಿಜಯ ಸಂಕಲ್ಪ ಯಾತ್ರೆಯು ನಿಪ್ಪಾಣಿ ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಸಂಭಾಜಿ ವೃತ್ತ ಬಳಸಿಕೊಂಡು ಹಳೆ ಪಿ.ಬಿ.ರಸ್ತೆಯ ಮೂಲಕ ಮಾರುಕಟ್ಟೆಯಲ್ಲಿ ಹಾಯ್ದು ಕಿತ್ತೂರ ರಾಣಿ ಚನ್ನಮ್ಮ ವೃತ್ತ ತಲುಪಿತು. ರೋಡ್ ಶೋ ಉದ್ದಕ್ಕೂ ಎಲ್ಲಡೆ ಕೇಸರಿಮಯವಾಗಿದ್ದು ಕಂಡು ಬಂತು. ರೋಡ್ ಶೋ ರಥದತ್ತ ಪುಷ್ಪ ವೃಷ್ಟಿಯಾಗಿದ್ದೇ ಆಗಿದ್ದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಸ್ ನಿಲ್ದಾಣದವರೆಗೆ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋದಲ್ಲಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೇಳೆಯ ಅಭಾವದಿಂದ ಅರ್ಧದಲ್ಲಿಯೇ ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. ರೋಡ್ ಶೋದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ, ಉಜ್ವಲಾ ಬಡವಣಾಚೆ ಮುಂತಾದವರು ಭಾಗವಹಿಸಿದ್ದರು.