ಬಾಗಲಕೋಟೆ ಹೇಳಿಕೇಳಿ ಬಿಜೆಪಿ ಭದ್ರಕೋಟೆ. ಹೊಸ ಮುಖಕ್ಕೆ ಮಣೆ ಹಾಕುವ ಯಾವುದೇ ಪ್ರಯತ್ನಕ್ಕೆ ವರಿಷ್ಠರು ಇಲ್ಲಿ ಕೈಹಾಕಿಲ್ಲ. ಮಾತ್ರವಲ್ಲ, ಇರುವ ಕ್ಷೇತ್ರವನ್ನು ಕಳೆದುಕೊಳ್ಳಲು ಕೂಡ ಬಿಜೆಪಿ ನಾಯಕರಿಗೆ ಇಷ್ಟವಿರಲಿಲ್ಲ. ಇವೆಲ್ಲ ಕಾರಣಗಳಿಂದಾಗಿ ಪಿ.ಸಿ.ಗದ್ದಿಗೌಡರಿಗೆ ನಿರಾಯಾಸವಾಗಿ ಟಿಕೆಟ್ ಒಲಿದುಬಂದಿದೆ.
ಈಶ್ವರ ಶೆಟ್ಟರ್
ಬಾಗಲಕೋಟೆ(ಮಾ.14): ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ವರಿಷ್ಠರು ಲೋಕಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2024ರಲ್ಲಿಯೂ ಹಾಲಿ ಸಂಸದ ಪಿ.ಸಿ.ಗದ್ದಿಗೌಡರಿಗೆ ಟಿಕೆಟ್ ನೀಡಿದ್ದಾರೆ. ಸ್ಪರ್ಧೆ ಮಾಡಲು ಹೆಚ್ಚು ಜನ ಪೈಪೋಟಿ ಮಾಡದಿರುವುದು ಮತ್ತು ಕ್ಲೀನ್ ಇಮೇಜ್ ಗದ್ದಿಗೌಡರಿಗೆ ವರಿಷ್ಠರು ಮತ್ತೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಗಲಕೋಟೆ ಹೇಳಿಕೇಳಿ ಬಿಜೆಪಿ ಭದ್ರಕೋಟೆ. ಹೊಸ ಮುಖಕ್ಕೆ ಮಣೆ ಹಾಕುವ ಯಾವುದೇ ಪ್ರಯತ್ನಕ್ಕೆ ವರಿಷ್ಠರು ಇಲ್ಲಿ ಕೈಹಾಕಿಲ್ಲ. ಮಾತ್ರವಲ್ಲ, ಇರುವ ಕ್ಷೇತ್ರವನ್ನು ಕಳೆದುಕೊಳ್ಳಲು ಕೂಡ ಬಿಜೆಪಿ ನಾಯಕರಿಗೆ ಇಷ್ಟವಿರಲಿಲ್ಲ. ಇವೆಲ್ಲ ಕಾರಣಗಳಿಂದಾಗಿ ಪಿ.ಸಿ.ಗದ್ದಿಗೌಡರಿಗೆ ನಿರಾಯಾಸವಾಗಿ ಟಿಕೆಟ್ ಒಲಿದುಬಂದಿದೆ.
undefined
ಸತತ ನಾಲ್ಕು ಬಾರಿ ಈಗಾಗಲೇ ವಿಜೇತರಾಗಿರುವ ಗದ್ದಿಗೌಡರಿಗೆ ಇದು ಐದನೇ ಬಾರಿಯ ಸ್ಪರ್ಧೆ. ಈ ಬಾರಿಯೂ ಗೆದ್ದು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ದಾಖಲೆ ಬರೆಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಸಚಿವ ಚಲುವರಾಯಸ್ವಾಮಿ
ಕಳೆದ ಬಾರಿ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ಪಿ.ಸಿ.ಗದ್ದಿಗೌಡರ ಅವರು ಈ ಹಿಂದೆ 1962, 67, 71, 77ರಲ್ಲಿ ಸತತ ಗೆಲುವು ಸಾಧಿಸಿದ್ದ ಎಸ್.ಬಿ.ಪಾಟೀಲ ಅವರ ದಾಖಲೆಯನ್ನು ಸರಿಗಟ್ಟಿದ್ದರು. 2024ರಲ್ಲಿ ಗೆಲುವು ದಾಖಲಿಸಿದರೆ, ಐದು ಬಾರಿ ಈ ಕ್ಷೇತ್ರದಿಂದ ಗೆದ್ದ ಮೊದಲ ಸಂಸದರಾಗಲಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ.
ಗದ್ದಿಗೌಡರ ನಡೆದುಬಂದ ಹಾದಿ:
ಮೂಲ ಜನತಾ ಪರಿವಾರದವರಾದ ಪಿ.ಸಿ.ಗದ್ದಿಗೌಡರ ಅವರು ಒಮ್ಮೆ ಪರಿವಾರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲೆಯ ಹಲವಾರು ಜನತಾ ಪರಿವಾರದ ನಾಯಕರು ಬಿಜೆಪಿ ಸೇರ್ಪಡೆಯಾದಾಗ ಗದ್ದಿಗೌಡರ ಕೂಡ ಕಮಲದ ತೆಕ್ಕೆಗೆ ಸೇರಿದರು.
2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಸಿ.ಗದ್ದಿಗೌಡರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ನಂತರ ಹಿಂದಿರುಗಿ ನೋಡದೇ ಸತತವಾಗಿ 2008, 2014, 2019ರಲ್ಲಿ ಸತತ ಗೆಲುವು ಸಾಧಿಸಿದ್ದರು.
ಪ್ರಬಲ ಪೈಪೋಟಿ ನೀಡಲು ಯಾರೂ ಇರಲಿಲ್ಲವೇ?:
ಬಾಗಲಕೋಟೆಯು ಬಿಜೆಪಿಯ ಭದ್ರಕೋಟೆ. ಹೀಗಾಗಿ ಹಾಲಿ ಸಂಸದ ಗದ್ದಿಗೌಡರ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಇವರ ಹೊರತಾಗಿ ಟಿಕೆಟ್‌ಗಾಗಿ ಮಾಜಿ ಸಚಿವ ಮುರಗೇಶ ನಿರಾಣಿ, ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದಿರುವ ಡಾ.ಪ್ರಕಾಶ ಪರಪ್ಪ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಮತ್ತೆ ಗದ್ದಿಗೌಡರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಹೊಸ ಪ್ರಯತ್ನಕ್ಕೆ ವರಿಷ್ಠರು ಕೂಡ ಮುಂದಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ನೀಡಲಿದ್ದಾರೆ ಎಂಬುವುದರ ಮೇಲೆ ಪೈಪೋಟಿ ಕೂಡ ನಿರ್ಣಯವಾಗಲಿದೆ.
ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿಂದ ಒಬ್ಬ ಸಚಿವರ ಸ್ಪರ್ಧೆಯೂ ಇಲ್ಲ?
ಜಿಲ್ಲೆಯ ಬಹುತೇಕ ನಾಯಕರು ರಾಜ್ಯ, ರಾಷ್ಟ್ರ ನಾಯಕರ ಮುಂದೆ ಗದ್ದಿಗೌಡರ ಅವರ ಹೆಸರನ್ನೇ ಹೇಳಿದ್ದರು. ಆದರೆ, ಅಚ್ಚರಿ ಹೆಸರು ಪ್ರಕಟಿಸುವ ಹೈಕಮಾಂಡ್ ಎಲ್ಲಿ ಬದಲಾವಣೆ ಮಾಡಿಬಿಡುತ್ತದೆಯೋ ಎಂಬ ಅಳುಕು ಕೂಡ ಸ್ಥಳೀಯ ಬಿಜೆಪಿ ನಾಯಕರಲ್ಲಿಯೂ ಇತ್ತು. ರಾಜ್ಯದ ಕೆಲವೆಡೆ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದರೂ, ಇಲ್ಲಿ ಹಾಲಿ ಸಂಸದರಿಗೆ ಮಣೆ ಹಾಕಲಾಗಿದೆ.
ಸೌಮ್ಯ ಸ್ವಭಾವದವರು, ವಿಧಾನಸಭಾ ಕ್ಷೇತ್ರ, ನಾಯಕರ ಕಾರ್ಯದಲ್ಲಿ ಮೂಗು ತೂರಿಸುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿರುವುದು ಅವರಿಗೆ ಪ್ಲಸ್ ಆಗಿದೆ. ಅಲ್ಲದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದರಿಂದ ಸಹಜವಾಗಿ ಜೆಡಿಎಸ್‌ನಿಂದಲೂ ಇವರಿಗೆ ಬೆಂಬಲ ದೊರೆಯುವುದರಲ್ಲಿ ಎರಡು ಮಾತಿಲ್ಲ ಎನ್ನಲಾಗಿದೆ.