Latest Videos

ಬರ ನಿರ್ವಹಣೆ ಕೆಲಸದ ಕಡೆ ಗಮನ ಕೊಡಿ: ಸಿಎಂ ಸಿದ್ದರಾಮಯ್ಯ ಸೂಚನೆ

By Kannadaprabha NewsFirst Published May 24, 2024, 7:36 PM IST
Highlights

ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಬರಗಾಲ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲೆಯ ಡಿ.ಸಿ., ಜಿಲ್ಲಾ ಪಂಚಾಯ್ತಿ ಸಿಇಓಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು. 

ಕಲಬುರಗಿ (ಮೇ.24): ಲೋಕಸಭೆ ಚುನಾವಣೆಯ ಮತದಾನ ಮುಕ್ತಾವಾಗಿರುವುದರಿಂದ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಬರಗಾಲ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲೆಯ ಡಿ.ಸಿ., ಜಿಲ್ಲಾ ಪಂಚಾಯ್ತಿ ಸಿಇಓಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು. 

ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಗೃಹ ಕಚೇರಿ ‘ಕೃಷ್ಣಾ’ದಿಂದ ವಿಡಿಯೋ ಸಂವಾದ‌ ಮೂಲಕ ರಾಜ್ಯದ ಎಲ್ಲಾ ಡಿ.ಸಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರಗಾಲ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಮುಂಗಾರು ಪೂರ್ವ ಮಳೆ ಎಲ್ಲೆಡೆ ಉತ್ತಮವಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗಬೇಕು. ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓ ಇದರ ಮೇಲುಸ್ತುವಾರಿ ವಹಿಸಬೇಕು ಎಂದರು. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಎಲ್ಲಿಯೂ ಕೊರತೆಯಾಗದಂತೆ ನೋಡಬೇಕು. ರಾಜ್ಯದಲ್ಲಿ ದಾಸ್ತಾನು ಸಾಕಷ್ಟಿದೆ. ಆದರೆ ಜಿಲ್ಲಾ, ತಾಲೂಕಿಗೆ ಬೇಡಿಕೆಯನುಗುಣವಾಗಿ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾಗಿ ಪೂರೈಸಬೇಕು. 

ರೈತರಿಗೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸಿ: ಸಿಎಂ ಸಿದ್ಧರಾಮಯ್ಯ

ಇದಕ್ಕೆ ಸರಿಯಾಗಿ ಪ್ಲ್ಯಾನ್ ಮಾಡಿ ವಿತರಣೆ ಮಾಡಬೇಕು. ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಳೆಗಾಲ ಆರಂಭಕ್ಕೆ 15-20 ದಿನ‌ ಉಳಿದಿವೆ. ಮಳೆಗಾಲ ಆರಂಭವಾದ ನಂತರ ಹೊಸ‌ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯು ಈಗಿನಿಂದಲೆ ಪೂರ್ವ ತಯ್ಯಾರಿ ಮಾಡಿಕೊಂಡು ಅದರ‌ ನಿಯಂತ್ರಣಕ್ಕೆ ಮುಂದಾಗಬೇಕು. ಎಲ್ಲಿಯೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕೆಂದು. ನೀರು ಪೂರೈಕೆ ಮುನ್ನ ಅದು ಕುಡಿಯಲು ಯೋಗ್ಯವಾಗಿದಿಯೇ ಎಂದು ಪರೀಕ್ಷಿಸಿ ಪೂರೈಸಬೇಕು ಎಂದು ಸಿ.ಎಂ. ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

274 ಕೋಟಿ ಪರಿಹಾರ ಜಮೆ: ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಬೀಜ, ರಸಗೊಬ್ಬರ, ಕೀಟನಾಶಕ ಇದೆ. ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಾನುವಾರುಗಳಿಗೆ 20 ವಾರಗಳಿಗೆ ಬೇಕಾಗುವ ಮೇವು ದಾಸ್ತಾನು ಜಿಲ್ಲೆಯಲ್ಲಿದೆ. ಜಿಲ್ಲೆಯಲ್ಲಿ 143 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 200 ಕಡೆ‌ ಖಾಸಗಿ ಬೀರವೆಲ್‌ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇದಲ್ಲದೆ ಕಲಬುರಗಿ ನಗರದಲ್ಲಿ‌ 40, ನಗರ-ಪಟ್ಟಣದಲ್ಲಿ 7 ಹಾಗೂ ಗ್ರಾಮೀಣ ಭಾಗದಲ್ಲಿ 6 ಸರ್ಕಾರಿ ಟ್ಯಾಂಕರ್ ವಾಹನದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷದ ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ 274 ಕೋಟಿ ರೂ.‌ಇನ್ಪುಟ್ ಸಬ್ಸಿಡಿ ನೀಡಲಾಗಿದೆ. ಆಧಾರ್ ಸೀಡಿಂಗ್ ಮತ್ತಿತರ ಸಮಸ್ಯೆ ಕಾರಣ 16,152 ರೈತರಿಗೆ ಪರಿಹಾರ ಜನ ಬಾಕಿ ಇತ್ತು. ಇದರಲ್ಲಿ ಬಹುತೇಕ ಸಮಸ್ಯೆ ಬಗೆಹರಿಸಿದ್ದು, ಪ್ರಸ್ತುತ 1,500 ಪ್ರಕರಣ ಬಾಕಿ ಇದ್ದು, ಅವು ಸಹ ಮುಂದಿನ‌ 2-3 ದಿನದಲ್ಲಿ ಬಗೆಹರಿಸಿ ಎಲ್ಲಾ ಅರ್ಹ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ಡಿ.ಸಿ ಅವರು ಸಿ.ಎಂ ಅವರ ಗಮನಕ್ಕೆ ತಂದರು.

ರಾಷ್ಟ್ರೀಯವಾದ, ಹಿಂದುತ್ವ ಪಾಲಿಸುವವರ ಮೂಲೆಗುಂಪು: ರಘುಪತಿ ಭಟ್ ಅಸಮಾಧಾನ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಸಚಿವರಾದ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶಿವಾನಂದ ಪಾಟೀಲ, ಸಚಿವ ರಹೀಂ ಖಾನ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಸಿ.ಎಂ. ಅವರೊಂದಿಗೆ ಭಾಗಿಯಾಗಿದ್ದರು. ಇತ್ತ ಕಲಬುರಗಿಯಿಂದ ಡಿ.ಸಿ. ಜೊತೆಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿ ಇತರೆ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

click me!