ಯಾವ ವಿಚಾರಕ್ಕಾಗಿ, ಯಾರು ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಗೊತ್ತಿಲ್ಲ. ಆದರೆ ಟಿಕೆಟ್ ಯಾರಿಂದಲೋ ಕೈತಪ್ಪುತ್ತಿರುವುದಂತು ಸತ್ಯ. ಅದು ಕೂಡ ರಾಷ್ಟ್ರೀಯ ವಿಚಾರಧಾರೆ ಮಾತನಾಡುವ ಮತ್ತು ಹಿಂದುತ್ವಕ್ಕಾಗಿ ಮಾತನಾಡುವವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂದು ಕೆ.ರಫುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.24): ಯಾವ ವಿಚಾರಕ್ಕಾಗಿ, ಯಾರು ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಗೊತ್ತಿಲ್ಲ. ಆದರೆ ಟಿಕೆಟ್ ಯಾರಿಂದಲೋ ಕೈತಪ್ಪುತ್ತಿರುವುದಂತು ಸತ್ಯ. ಅದು ಕೂಡ ರಾಷ್ಟ್ರೀಯ ವಿಚಾರಧಾರೆ ಮಾತನಾಡುವ ಮತ್ತು ಹಿಂದುತ್ವಕ್ಕಾಗಿ ಮಾತನಾಡುವವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಈಗ ಎನಿಸುತ್ತಿದೆ ಎಂದು ಉಡುಪಿ ಬಿಜೆಪಿ ಮಾಜಿ ಶಾಸಕ ಕೆ.ರಫುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ನಡೆದ ಸುದ್ಧಿ ಗೋಷ್ಠಿ ಹಾಗೂ ಚುನಾವಣೆಗಾಗಿ ಕಾರ್ಯಕರ್ತರ ಪೂರ್ವ ಸಿದ್ಧತಾ ಸಭೆ ನಡೆಸಿದ ಸಂದರ್ಭ ಮಾತನಾಡಿದ ಅವರು ಅನಂತ ಕುಮಾರ್ ಹೆಗಡೆ, ಸಿ. ಟಿ. ರವಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿಸಲಾಗಿದೆ.
ಇದೆಲ್ಲವನ್ನೂ ನೋಡಿದರೆ, ರಾಷ್ಟ್ರೀಯವಾದ ಪ್ರತಿಪಾದಿಸುವವರನ್ನು ಬಿಜೆಪಿಯಲ್ಲಿ ದೂರ ಸರಿಸಲಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕೆ ಒಂದು ಕೊನೆಗಾಣಬೇಕು ಎಂದು ರಘುಪತಿ ಭಟ್ ಅಸಮಾಧಾನ ಹೊರಹಾಕಿದರು. ಶಿವಮೊಗ್ಗದಲ್ಲಿ ಹರ್ಷ ಕೊಲೆ ಸಂದರ್ಭ ಡಾ. ಧನಂಜಯ ಸರ್ಜಿ ಅವರು ಬಿಜೆಪಿ ವಿರುದ್ಧ ಕೆಲಸ ಮಾಡಿದರು. ಅಲ್ಲಿನ ನಮ್ಮ ಶಾಸಕರ ವಿರುದ್ಧವೇ ಹೋರಾಡಿದರು. ಶಾಂತಿಗಾಗಿ ನಡೆ ಎಂದು ಪರಿವಾರದ ವಿರುದ್ಧ ಪ್ರತಿಭಟನೆ ಮಾಡಿದರು. ಆದರೂ ನನಗೆ ಟಿಕೆಟ್ ತಪ್ಪಿಸಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಈ ಬಾರಿ ಕೆಲವು ವ್ಯಕ್ತಿಗಳ ನಿರ್ಧಾರದಿಂದ ಸರ್ಜಿ ಅವರಿಗೆ ಟಿಕೆಟ್ ದೊರೆತ್ತಿದೆ ಎಂದರು.
ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್: ಶಾಸಕ ಸಿ.ಸಿ.ಪಾಟೀಲ್ ಲೇವಡಿ
ಇಂತಹವರು ಗೆಲ್ಲಬಾರದು ಎನ್ನುವ ದೃಷ್ಟಿಯಿಂದಲೇ ನಾನೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಈ ಚುನಾವಣೆಯಲ್ಲಿ ಧನಂಜಯ ಸರ್ಜಿ ಸೋತರೆ ಪಕ್ಷಕ್ಕೆ ನಷ್ಟವಿಲ್ಲ. ಅವರ ಗೆಲುವಿನಿಂದ ರಾಜ್ಯದಲ್ಲಿ ಆಗಲಿ, ಇಲ್ಲ ಕೇಂದ್ರದಲ್ಲಿಯಾಗಲಿ ಸರ್ಕಾರವೇನೂ ರಚನೆಯಾಗಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ನೀವು ನಿಲ್ಲಲೇಬೇಕೆಂದು ಒತ್ತಾಯಿಸಿದ್ದರಿಂದ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಫಿದ್ದರೂ ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೆ, ಇದರಿಂದ ಪರಿಷತ್ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಆದರೂ ನನಗೆ ಆ ಟಿಕೆಟ್ ಅನ್ನು ತಪ್ಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಅವರ ಬೆಂಬಲದಿಂದ ನಾನು ಸ್ಪರ್ಧಿಸಿದ್ದೇನೆ. ನಾನು ಗೆಲ್ಲುವುದು ನಿಶ್ಚಿತ ಎಂದ ರಘುಪತಿ ಭಟ್ ಹೇಳಿದರು. ಮೂರು ಬಾರಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪುತ್ತಿದೆ ಎನ್ನುವುದು ಕೊನೆ ಕ್ಷಣದವರೆಗೆ ಗೊತ್ತಾಗಿರಲಿಲ್ಲ. ಆದರೆ ಮಾಧ್ಯಮಗಳಿಂದ ಅದು ಗೊತ್ತಾಯಿತು. ಆದರೂ ನಾನು ಪಕ್ಷದ ಅಭ್ಯರ್ಥಿ ಪರವಾಗಿ ನಿಂತು ಗೆಲ್ಲಿಸಿದೆನು ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಆಯನೂರು ಮಂಜುನಾಥ್ ಅವರು ರಾಜೀನಾಮೆ ನೀಡಿ ಜೆಡಿಎಸ್ ಗೆ ಹೋದಾಗ ಬಳಿಕ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತೆ ಎಂದುಕೊಂಡಿದ್ದೆ, ಆದರೆ ಆ ಚುನಾವಣೆ ನಡೆಯಲಿಲ್ಲ. ಆ ನಂತರ ಪದವೀದರ ಕ್ಷೇತ್ರದ ಚುನಾವಣೆಗಾಗಿ ನಾನು ಎಷ್ಟರ ಮಟ್ಟಿಗೆ ನೋಂದಣಿ ಕೆಲಸ ಮಾಡಿಸಿದೆ ಎನ್ನುವುದು ಪಕ್ಷದ ಎಲ್ಲರಿಗೂ ಗೊತ್ತು.
ರೈತರಿಗೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸಿ: ಸಿಎಂ ಸಿದ್ಧರಾಮಯ್ಯ
ನಂತರ ಪಕ್ಷದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಕೇಳಿದ್ದೆ. ಟಿಕೆಟ್ ಕೊಡುವುದಾಗಿಯೂ ಪಕ್ಷದಲ್ಲಿ ಭರವಸೆ ನೀಡಿದ್ದರು. ಆದರೆ ಈ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲು ಜಿಲ್ಲಾ ಬಿಜೆಪಿ ರಾಜ್ಯ ಬಿಜೆಪಿಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಇದುವರೆಗೆ ಯಾವುದೇ ನೊಟೀಸ್ ಬಂದಿಲ್ಲ. ನೊಟೀಸ್ ಬಂದರೆ ಇದುವರೆಗೆ ಮಾಧ್ಯಮಗಳ ಮುಂದೆ ಹೇಳಿರದ ಎಷ್ಟೋ ವಿಚಾರಗಳು ಇವೆ, ಅವುಗಳನ್ನು ಹೇಳುತ್ತೇನೆ. ಆ ಮಾಹಿತಿಗಳ ಮೂಲಕವೇ ಶಿಸ್ತು ಸಮಿತಿಗೂ ಉತ್ತರ ಕೊಡುತ್ತೇನೆ ಎಂದು ಬಿಜೆಪಿಯ ವಿರುದ್ಧ ಬೆದರಿಕೆ ತಂತ್ರವನ್ನು ಹೇಳಿದರು.