ಪಾವಗಡ ಸೋಲಾರ್‌ ಪಾರ್ಕ್ ಮತ್ತೆ 10 ಸಾವಿರ ಎಕ್ರೆ ವಿಸ್ತರಣೆ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Jun 15, 2023, 4:23 AM IST

ಪಾವಗಡದ ಸೋಲಾರ್‌ ಪಾರ್ಕ್ ಅನ್ನು ಮತ್ತೆ 10 ಸಾವಿರ ಎಕರೆ ವಿಸ್ತರಣೆ ಮಾಡಲು ನಾವು ನಿರ್ಧರಿಸಿದ್ದೇವೆ. ಹಿಂದಿನ ನಿಯಮದಂತೆ ರೈತರು ಜಮೀನನ್ನು ಬಾಡಿಗೆಗೆ ನೀಡಲು ಮುಂದೆ ಬಂದರೆ ವಿಸ್ತರಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.


ತುಮಕೂರು (ಜೂ.15): ಪಾವಗಡದ ಸೋಲಾರ್‌ ಪಾರ್ಕ್ ಅನ್ನು 10 ಸಾವಿರ ಎಕರೆಯಲ್ಲಿ ವಿಸ್ತರಿಸುವ ಸುಳಿವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕು ತಿರುಮಣಿಯಲ್ಲಿರುವ ಏಷ್ಯಾದ ಅತಿದೊಡ್ಡ ಸೋಲಾರ್‌ ಪಾರ್ಕ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿ ರೈತರೊಂದಿಗೆ ಮಾತನಾಡಿದರು. ಇನ್ನು ನಮಗೆ ಅಭಿವೃದ್ಧಿ ಮಾಡಲು ಯೋಜನೆಗಳು ಇವೆ. ಮತ್ತಷ್ಟುಜಮೀನು ಕೊಟ್ಟರೆ ಹೊಸದಾಗಿ ಸೋಲಾರ್‌ ಪಾರ್ಕ್‌ನ ಸ್ಥಾಪಿಸೋಣ ಎಂದು ಕೇಂದ್ರದವರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 

ಹಾಗಾಗಿ ರೈತರೆಲ್ಲ ಕುಳಿತು ಚರ್ಚಿಸಿ ಇನ್ನು 10 ಸಾವಿರ ಎಕರೆ ಜಮೀನು ನೀಡಿದರೆ ಸೋಲಾರ್‌ ಪಾರ್ಕ್ ನಿರ್ಮಾಣ ಮಾಡೋಣ ಎಂದ ಅವರು, ಈಗಾಗಲೇ ಗುಲ್ಬರ್ಗಾದವರು ಸಹ ಸೋಲಾರ್‌ ಪಾರ್ಕ್ ನಿರ್ಮಿಸುವಂತೆ ಕೇಳುತ್ತಿದ್ದಾರೆ. ಹಾಗಾಗಿ ನೀವೆಲ್ಲ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ ಎಂದರು. ನಾನು ಇಂಧನ ಸಚಿವನಾಗಿದ್ದಾಗ ಈ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ಖರೀದಿ ಮಾಡಿ ಬಾಡಿಗೆ ರೂಪದಲ್ಲಿ ಪಡೆದು ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್‌ ಪಾರ್ಕ್ ನಿರ್ಮಾಣ ಮಾಡಲಾಯಿತು. 

Tap to resize

Latest Videos

ಹೊಂದಾಣಿಕೆ ಇಲ್ಲದಿದ್ದರೆ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿ: ಪ್ರತಾಪ್‌ ಸಿಂಹ ಸವಾಲು

ಇಲ್ಲಿ 2000 ಮೆಗಾವ್ಯಾಟ್‌ಗಿಂತ ಅಧಿಕ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಪ್ರತಿ ತಿಂಗಳು ಜಮೀನಿನ ಮಾಲೀಕರಾಗಿರುವ ರೈತರಿಗೆ ಬಾಡಿಗೆ ಹಣ ಖಾತೆಗೆ ಜಮೆಯಾಗುತ್ತಿದೆ. ಎಲ್ಲ ಪಾರ್ಕ್ಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸುಮಾರು ನಾಲ್ಕೈದು ಸಾವಿರ ಜನ ಉದ್ಯೋಗ ಮಾಡುತ್ತಿದ್ದಾರೆ. ಸೋಲಾರ್‌ ಪಾರ್ಕ್ಗೆ ಜಮೀನು ನೀಡಿರುವ ರೈತರಿಗೆ ಎಕರೆಗೆ ವಾರ್ಷಿಕ 25 ಸಾವಿರ ರು. ಬಾಡಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಜಾಸ್ತಿ ಮಾಡಬಹುದಾಗಿದೆ. ಈ ಬಾಡಿಗೆ ಆಧಾರದ ಮೇಲೆ ಸಾಲ ಸಹ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಎಲ್ಲರಿಗೂ ಮಾದರಿ: ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರೈತರ ಮಗ ಆಗಿರುವುದಕ್ಕೆ ಈ ಭಾಗದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೆ ಬಾಡಿಗೆ ರೂಪದಲ್ಲಿ ಶಾಶ್ವತವಾಗಿ ಆದಾಯ ಬರುವಂತೆ ಮಾಡಿದ್ದಾರೆ. ನಿಜಕ್ಕೂ ಅವರ ಈ ದೂರದೃಷ್ಟಿಯುಳ್ಳ ಆಲೋಚನೆ ಎಲ್ಲರಿಗೂ ಮಾದರಿಯಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಸೋಲಾರ್‌ ಪಾರ್ಕ್ಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ರಾಜ್ಯದ ಹಲವು ಕಡೆ ಸೋಲಾರ್‌ ಪಾರ್ಕ್ ಸ್ಥಾಪಿಸುವ ಚಿಂತನೆಯನ್ನು ಹೊಂದಲಾಗಿದೆ. 

ಮತ್ತೆ ಈ ಭಾಗದಲ್ಲೂ ರೈತರು ಜಮೀನನ್ನು ನೀಡಲು ಮುಂದೆ ಬಂದರೆ ಮತ್ತಷ್ಟು ಸೋಲಾರ್‌ ಪಾರ್ಕ್ಗಳನ್ನು ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ. ಈ ಸೋಲಾರ್‌ ಪಾರ್ಕ್ನಲ್ಲಿ 2 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಸದ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲದಂತೆ ಈ ಸೋಲಾರ್‌ ಪಾರ್ಕ್ನಲ್ಲಿ ಕಾರ್ಯನಿರ್ವಹಣೆಯಾಗುತ್ತಿದೆ ಎಂದರು. ನಮ್ಮದು ಹೊಸ ಸರ್ಕಾರ, ನಾವೆಲ್ಲ ಹೊಸಬರು. ಸ್ವಲ್ಪ ದಿನ ಕಾಲಾವಕಾಶ ಕೊಡಿ. ಉತ್ತಮ ಸರ್ಕಾರ ನಡೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೂ ಸೇರಿ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಾರೆ. 

ಇವರಿಬ್ಬರಲ್ಲೂ ಹೊಂದಾಣಿಕೆ ಇಲ್ಲ ಎಂದು ವಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ನಾವು ಇಂದು ಈ ಸೋಲಾರ್‌ ಪಾರ್ಕ್ಗೆ ಬರುತ್ತಿರಲಿಲ್ಲ. ಆದ್ದರಿಂದ ಇಂತಹ ಅಪಪ್ರಚಾರಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಜನರ ಕಲ್ಯಾಣಕ್ಕಾಗಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರ ಬದುಕು ಬಹಳ ಕಷ್ಟದಲ್ಲಿದೆ. ಅದರಲ್ಲೂ ಮಧ್ಯಮ ವರ್ಗದವರ ಬದುಕು ತೀವ್ರ ಕಷ್ಟದಲ್ಲಿದೆ. ನಿರುದ್ಯೋಗ ಸಮಸ್ಯೆ ಇದೆ. ಮಹಿಳೆಯರು ಸಹ ಜೀವನ ನಡೆಸುವುದು, ಕುಟುಂಬ ನಿರ್ವಹಣೆ ನಡೆಸುವುದು ಕಷ್ಟವಿದೆ. ಹಾಗಾಗಿ ಈ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ ಎಂದರು.

ತಿರುಮಣಿಯಲ್ಲಿರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಗಮದ ಕಚೇರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಚಿವರು, ಇಲಾಖೆ ವತಿಯಿಂದ ನೀಡಿದ ಪ್ರಾಸೆಂಟೇಷನ್‌ ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೋಲಾರ್‌ ಪಾರ್ಕ್ನಲ್ಲಿ ವಿದ್ಯುತ್‌ ಉತ್ಪಾದನೆ, ರೈತರ ಜಮೀನಿನ ಬಾಡಿಗೆ ಪಾವತಿ ಸೇರಿದಂತೆ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು. ಶಾಸಕ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ತಾಲೂಕು ಸದಾ ಬರಕ್ಕೆ ತುತ್ತಾಗಿ ಜನತೆ ನೋವು ಅನುಭವಿಸುತ್ತಿದ್ದರು. ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದ ವೇಳೆ ಜಾರಿಗೆ ತಂದ ಸೋಲಾರ್‌ ಪಾರ್ಕ್ಗಳ ನಿರ್ಮಾಣದ ಕಾರ್ಯಕ್ರಮ ಈ ಭಾಗದ ಸಾವಿರಾರು ಮಂದಿ ರೈತರಿಗೆ ವರದಾನವಾಗಿದೆ.

ರೈತರು ಆಸಕ್ತಿವಹಿಸಿದರೆ ಇನ್ನೂ ಹೆಚ್ಚು ರೈತರ ಜಮೀನುಗಳಲ್ಲಿ ಸೋಲಾರ್‌ ಪಾರ್ಕ್ ನಿರ್ಮಾಣವಾಗಲಿವೆ. ಕೃಷಿ ಕಾರ್ಮಿಕ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ಸಚಿವರ ಗಮನಕ್ಕೆ ತಂದಿದ್ದು ಸೋಲಾರ್‌ ವಿಶೇಷ ನಿಧಿಯಲ್ಲಿ ಈ ಭಾಗದ ಪ್ರಗತಿಗೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎಚ್‌.ವಿ. ವೆಂಕಟೇಶ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ, ಹಿರಿಯ ಐಎಎಸ್‌ ಅಧಿಕಾರಿ ಗೌರವ ಗುಪ್ತ, ಪ್ರಭಾರ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಕೆಪಿಟಿಸಿಎಲ್‌ನ ಗೋವಿಂದಪ್ಪ, ಬೆಸ್ಕಾಂನ ಲೋಕೇಶ್‌, ಉಪವಿಭಾಗಾಧಿಕಾರಿ ರಿಷಿ ಆನಂದ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಭಾಗವಹಿಸಿದ್ದರು.

ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

200 ಯೂನಿಟ್‌ಗಿಂತ ಹೆಚ್ಚು ಬಳಸೋರಿಗೆ ಮಾತ್ರ ಬಿಲ್‌: ಗೃಹ ಜ್ಯೋತಿ ಕಾರ್ಯಕ್ರಮದಡಿ 2 ಕೋಟಿ 20 ಲಕ್ಷ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಪೈಕಿ 2 ಕೋಟಿ 14 ಲಕ್ಷ ಜನ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿದ್ದಾರೆ. 200 ಯೂನಿಟ್‌ಗಿಂತ ಕಡಿಮೆ ಬಳಸುವವರಿಗೆ ಉಚಿತವಾಗಿ ವಿದ್ಯುತ್‌ ದೊರೆಯಲಿದೆ. ಹಾಗೆಯೇ ಹೊಸ ಮನೆಯವರಿಗೆ ಸರಾಸರಿ 53 ಯೂನಿಟ್‌ ವಿದ್ಯುತ್‌ ಉಚಿತವಾಗಿ ಸಿಗಲಿದೆ. ಜುಲೈಯಿಂದ ಯಾರು 200 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುತ್ತಾರೆಯೋ ಅಂತಹ ಮನೆಗಳಿಗೆ ಯಾವುದೇ ರೀತಿಯ ಬಿಲ್‌ ಬರುವುದಿಲ್ಲ. 200 ಯೂನಿಟ್‌ಗಿಂತ ಯಾರು ಹೆಚ್ಚು ಬಳಸುತ್ತಾರೋ ಅವರಿಗೆ ಬಿಲ್‌ ಬರುತ್ತದೆ ಎಂದು ಕೆ.ಜೆ.ಜಾರ್ಜ್‌ ಹೇಳಿದರು.

click me!