ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ (ಸೆ.03): ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ವರಿಷ್ಠರ ಭೇಟಿ ಬಳಿಕ ಪಕ್ಷ ನನ್ನ ಜೊತೆ ಇದೆ, ಪಕ್ಷದ ವರಿಷ್ಠರು ಜತೆಗಿದ್ದಾರೆ ಅಂತ ಅನ್ನಿಸಿದೆ. ಟಿಕೆಟ್ ಸಿಗಲಿ, ಸಿಗದೇ ಇರಲಿ ನಾನು ಪಕ್ಷದ ಜತೆ ಇರ್ತೇನೆ. ನೀನು ಆತುರ ಪಡಬೇಡ ಇರು ಅಂತ ಪಕ್ಷ ಹೇಳಿದೆ. ಹಾಗಾಗಿ, ಪಕ್ಷದ ಆದೇಶ ಮೀರಿ ಹೋಗಬಾರದು ಅಂತ ಅನ್ನಿಸುತ್ತಿದೆ ಎಂದರು.
ದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರು, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಚುನಾವಣೆ ಘೋಷಣೆಯಾದ ಮೇಲೆ ಟಿಕೆಟ್ ಬಗ್ಗೆ ತೀರ್ಮಾನ ಆಗುತ್ತದೆ. ದೆಹಲಿ ಭೇಟಿಯ ವೇಳೆ ನಮ್ಮ ಹೈಕಮಾಂಡ್ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು ಎಂದರು.
ಎನ್‌ಡಿಎಯಿಂದ ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದರೆ ಒಳ್ಳೆಯದು. ಇದು ಉಪಚುನಾವಣೆ ಆಗಿರೋದ್ರಿಂದ ಇಡೀ ರಾಜ್ಯ ಸರ್ಕಾರ ಚುನಾವಣೆ ಮಾಡುತ್ತೆ. ಚುನಾವಣೆಯಲ್ಲಿ ಪರೋಕ್ಷವಾಗಿ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಸರ್ಕಾರದ ವಿರುದ್ಧ ನಾವು ಹೋರಾಡಬೇಕಿದೆ. ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದರು. ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡ್ರೆ ಮುಂದಿನ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೇನೆ. ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೇನೆ.
ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ
ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆಯಾಗಿದೆ. ಜೆಡಿಎಸ್‌ಗೆ ಟಿಕೆಟ್ ಕೊಟ್ಟರೆ ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡ್ತೇವೆ. ಮುಂದೆ ಅವಕಾಶ ಬರುತ್ತಿರುತ್ತೆ, ಕಾದು ನೋಡೋಣ ಎಂದರು. ದೆಹಲಿ ಪ್ರವಾಸದ ವೇಳೆ ಎಲ್ಲಾ ವಿಚಾರಗಳನ್ನು ವರಿಷ್ಠರ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದೇನೆ. ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ. ಕಾಂಗ್ರೆಸ್ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತವಾಗಿದೆ. ನಾನು ಇಲ್ಲಿ ಆತುರ ಪಡುವ ಅವಶ್ಯಕತೆ ಇಲ್ಲ ಎಂದರು.