
ಬೆಂಗಳೂರು (ಡಿ.22): ಸಂಸತ್ ಮೇಲಿನ ದಾಳಿ ಖಂಡಿಸಿ ಇವತ್ತು ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆಸಿದ್ದೇವೆ. ಸಂಸತ್ ದಾಳಿ ಬಗ್ಗೆ ಕೇಂದ್ರ ಸರ್ಕಾರದ ಉತ್ತರ ಕೇಳಿದ್ದೇವೆ. ಆ ಬಗ್ಗೆ ಚರ್ಚೆ ಮಾಡೋಕೆ ಹೇಳಿದ್ದೇವೆ. ಇಷ್ಟು ಕೇಳಿದ್ದಕ್ಕೆ ಹೊಸ ಸಂಸತ್ ಭವನ ನಿರ್ಮಾಣ ಮಾಡಿ, ವಿರೋಧ ಪಕ್ಷದ ನಾಯಕರನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ಬಗ್ಗೆ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮ್ಮ ಕರ್ನಾಟಕದ ಸಂಸದರನ್ನ ಉಚ್ಚಾಟನೆ ಮಾಡಿದ್ದಾರೆ. ನಮ್ಮ ರಾಜ್ಯ ಸಭಾ ಸದಸ್ಯರ ವಿಚಾರವನ್ನ ಹಕ್ಕು ಭಾದ್ಯತೆ ಸಮಿತಿಗೆ ವಹಿಸಿದ್ದಾರೆ. ಈಗ ರಾಹುಲ್, ಸೋನಿಯಾ, ಮಲ್ಲಿಕಾರ್ಜುನ ಖರ್ಗೆ ಮಾತ್ರ ಇದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಮೂರು ಸ್ಟೇಟ್ ಗೆದ್ದಿದ್ದೇವೆ ಅಂತ ಇಂತಹ ತೀರ್ಮಾನ ಮಾಡ್ತಿದ್ದಾರೆ. ಒಂದೊಂದು ಚುನಾವಣೆಯ ಫಲಿತಾಂಶದ ಬಳಿಕ ಒಂದೊಂದು ರೀತಿ ತೀರ್ಮಾನ ಮಾಡ್ತಾರೆ. ಇವತ್ತಿದ್ದ ಪರಿಸ್ಥಿತಿ ನಾಳೆ ಇರಲ್ಲ ಅನ್ನೋದನ್ನ ಅವರು ಅರ್ಥಮಾಡಿಕೊಂಡಿಲ್ಲ. ಇಲ್ಲಿನ ಬಿಜೆಪಿಗರು ಕೂಡ ಒಳಗೆ ಚರ್ಚೆ ಮಾಡಿ ಅಂದರೆ ಹೊರಗೆ ಹೋಗಿ ಚರ್ಚೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಅಡಗಿ ಕುಳಿತಿದೆ: ಸಚಿವ ತಂಗಡಗಿ ವಾಗ್ದಾಳಿ
ಎಚ್‌ಡಿಕೆ ವಿರುದ್ಧ ಡಿಸಿಎಂ ಕಿಡಿ:
ಕರ್ನಾಟಕದಲ್ಲಿ ಅಜಿತ್ ವರ್ಷ ಹಿಂದೆ ಇದ್ದಾರೆಂಬ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಗೆ ಸಿಡಿಮಿಡಿಗೊಂಡ ಡಿಸಿಎಂ ಡಿಕೆ ಶಿವಕುಮಾರ ಅವರು, ಅವರು ಬಿಡಿ ಬಹಳ ಮೇಧಾವಿಗಳು ಅವರಿಗೆ ಅನುಭವ ಜಾಸ್ತಿ ಇದೆ. ಅವರಿಗೆ ಜ್ಯೋತಿಷ್ಯ ಕೂಡ ಗೊತ್ತಿದೆ. ಇನ್ನೂ ಅವರ ನುಡಿಮುತ್ತುಗಳು ಏನೇನೋ ಮಾತನಾಡುತ್ತಿದ್ದಾರೆ, ನಾವು ಬಹಳ ಸಂತೋಷದಿಂದ ಕೇಳುತ್ತಿದ್ದೇವೆ. ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನಮಗಿಲ್ಲ. ಅವರ ಬಾಯಿಗೆ ಬೀಗ ಹಾಕಲೂಬಾರದು. ಅವರು ಮಾತನಾಡುತ್ತ ಇರಬೇಕು. ನಮ್ಮ ಸರ್ಕಾರ ನೋಡಿ ಅವರ ಕೈಯಲ್ಲಿ ಸಹಿಸಿಕೊಳ್ಳಲು ಆಗ್ತಾ ಇಲ್ಲ. ನಮಗೆ ಸಿಕ್ಕಿಲ್ವಲ್ಲಾ ಅಂತ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಇಡೀ ದೇಶದಲ್ಲೇ ಭಾರತದ ಇತಿಹಾಸ, ಚರಿತ್ರೆ ಹೋಗುವ ತೀರ್ಮಾನವನ್ನು ಬಿಜೆಪಿ ಅವರು ಸ್ಪೀಕರ್ ಕಡೆಯಿಂದ ಮಾಡಿಸಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಬಗ್ಗೆ ಉತ್ತರ ಕೊಡಬೇಕು ಎನ್ನುವ ಸೌಜನ್ಯವೂ ಸಹ ಗೃಹಸಚಿವರಿಗೆ, ಬಿಜೆಪಿ ಸರ್ಕಾರಕ್ಕಿಲ್ಲ. ಪ್ರಶ್ನೆ ಕೇಳಿದ್ದಕ್ಕೆ ಲೋಕಸಭೆ, ರಾಜ್ಯಸಭೆಯಲ್ಲಿ 146 ಜನರನ್ನ ಸಸ್ಪೆಂಡ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಆದ ಅವಮಾನ. ಅದಕ್ಕೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೆ ನಾವು ಧಿಕ್ಕಾರ ಕೂಗ್ತಿದ್ದೇವೆ. ಪ್ರಜಾಪ್ರಭುತ್ವ ಉಳಿಸಬೇಕಿದೆ, ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲವೂ ಕೇಳುವ ಹಕ್ಕಿದೆ. ಕೇಂದ್ರದ ನೀತಿ, ಧೋರಣೆ ವಿರುದ್ಧ ಹೋರಾಟ. ಲೋಕಸಭಾ ಚುನಾವಣೆ ವರೆಗೂ ಹಳ್ಳಿ ಹಳ್ಳಿಗೆ ತಲುಪಿ ಹೋರಾಟ ಮಾಡ್ತೇವೆ ಎಂದರು.
ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ: ಸಚಿವ ಶಿವರಾಜ ತಂಗಡಗಿ
ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ವಿಚಾರ ನನ್ನ ಗಮನಕ್ಕೆ ಬಂದಿದೆ. ಆ ಬಗ್ಗೆ ನಾನು 3 ಗಂಟೆಗೆ ಸಭೆ ಕರೆದಿದ್ದೇನೆ. ವಾಸ್ತವ ವರದಿಯನ್ನ ತರಿಸಿಕೊಳ್ತಿನಿ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಇತ್ತೀಚೆಗೆ ಆದ ಘಟನೆ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇವೆ. ಮಕ್ಕಳನ್ನ ಯಾವ ರೀತಿ ಬಳಸಿಕೊಳ್ಳಬೇಕು, ಅವರಿಗೆ ಹೇಗೆ ಶಕ್ತಿ ತುಂಬ ಬೇಕು ಆ ಕೆಲಸ ಮಾಡಬೇಕು. ನಾವು ಶಾಲೆಗಳಲ್ಲಿ ಕಮಿಟಿ ರಚಿಸಿದ್ದೇವೆ. ಮಕ್ಕಳನ್ನ ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಹಿಂದೆಲ್ಲಾ ಎನ್‌ಎಸ್‌ಎಸ್ ಎಲ್ಲಾ ಇತ್ತು. ಗಿಡ ನೆಡುವುದು, ಸ್ವಚ್ಚತೆ ಮಾಡುವ ಕೆಲಸ ಮಾಡ್ತಿದ್ದರು. ಆದರೆ ಶೌಚಾಲಯ ಯಾರೂ ಕ್ಲೀನ್ ಮಾಡಿಸುವ ಅಧಿಕಾರ ಯಾರಿಗೂ ಕೊಟ್ಟಿಲ್ಲ. ಆ ಅವಕಾಶ ಕೂಡ ಯಾರಿಗೂ ಇಲ್ಲ. ಮುಂದೆ ಯಾವ ಕ್ರಮ ಕೈಗೊಳ್ಳವೇಕೋ ಕೈಗೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.