ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

By Kannadaprabha News  |  First Published Mar 3, 2024, 8:08 PM IST

ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್ ಜಾರಿಗೂ ನಾವು ಬದ್ಧರಾಗಿದ್ದೇವೆ. ಆದರೆ, ಕಾಲಾವಕಾಶ ಅಗತ್ಯ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. 


ಧಾರವಾಡ (ಮಾ.03): ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್ ಜಾರಿಗೂ ನಾವು ಬದ್ಧರಾಗಿದ್ದೇವೆ. ಆದರೆ, ಕಾಲಾವಕಾಶ ಅಗತ್ಯ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟವನ್ನು ಉದ್ಘಾಟಿಸಿದ ಅವರು, ಎಲ್ಲರಿಗೂ ಆರೋಗ್ಯ ಮುಖ್ಯ. ಅದರಲ್ಲೂ ಸರ್ಕಾರದ ಸೇವೆಗಳನ್ನು ನೀಡುವ ಸರ್ಕಾರಿ ನೌಕರರಿಗೆ ಆರೋಗ್ಯ ಉತ್ತಮವಾಗಿರಬೇಕು. 

ಪ್ರತಿದಿನ ಒತ್ತಡಗಳಲ್ಲಿ ಕೆಲಸ ಮಾಡುವ ನೌಕರರು ಪ್ರತಿದಿನವೂ ಬಿಡುವು ಮಾಡಿಕೊಂಡು ವ್ಯಾಯಾಮ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ವ್ಯಾಯಾಮ, ಕ್ರೀಡೆಗಳ ಮೂಲಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಸರ್ಕಾರಿ ನೌಕರರು ಸಮಾಜದಲ್ಲಿ ಪ್ರಭಾವಯುತ ಸ್ಥಾನ, ವ್ಯಕ್ತಿತ್ವ ಹೊಂದಿದ್ದಾರೆ. ಜನರಲ್ಲಿ ಹೆಚ್ಚು ಸಕಾರಾತ್ಮಕತೆ ಬೆಳೆಸಲು ಅವರು ಇನ್ನಷ್ಟು ಪ್ರಯತ್ನಿಸಬೇಕು. ಆಹಾರ, ಓದು, ಸಂಗೀತ, ವಿಹಾರದಂತ ಹವ್ಯಾಸ ಬೆಳೆಸಿಕೊಳ್ಳಬೇಕು. ತಮ್ಮ ಮಕ್ಕಳಲ್ಲಿ ರಾಷ್ಟಭಕ್ತಿ, ನೈತಿಕ ಶಿಕ್ಷಣ ಮೂಡಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

Latest Videos

undefined

ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುವ ಭಯ, ಅದಕ್ಕೆ ರೆಸಾರ್ಟ್‌ ಬುಕ್‌: ಸಚಿವ ಸಂತೋಷ್‌ ಲಾಡ್‌

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಲವಲವಿಕೆಯಿಂದ ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಸರ್ಕಾರಿ ನೌಕರರು ಪ್ರತಿದಿನ ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೌಕರರು ದಿನನಿತ್ಯ ಕಚೇರಿ ಕೆಲಸ ನಿರ್ವಹಣೆಯಲ್ಲಿ ಅನುಭವಿಸುವ ಒತ್ತಡವನ್ನು ಕಡಿಮೆಗೊಳಿಸಲು ಇಂತಹ ಕ್ರೀಡಾಕೂಟಗಳ ಅವಶ್ಯಕತೆ ಇದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸರ್ಕಾರಿ ನೌಕರರಾಗಿರುವುದು ನಮ್ಮ ಸೌಭಾಗ್ಯ. ಅದನ್ನು ಪ್ರಾಮಾಣಿಕವಾಗಿ, ಜನಪರವಾಗಿ ನಿರ್ವಹಿಸಿ ಸಾರ್ಥಕಗೊಳಿಸಬೇಕು. ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನೌಕರರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಸರ್ಕಾರಿ ನೌಕರರ ಮನಸ್ಥಿತಿ ಉತ್ತಮವಾಗಿದ್ದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸರಿಯಾದ ಪರಿಹಾರವನ್ನು ನೀಡಲು ಸಾಧ್ಯ. ಕಷ್ಟಗಳು ಬಂದಾಗ ಕುಗ್ಗದೆ, ಅದನ್ನು ಧೈರ್ಯದಿಂದ ಎದುರಿಸಬೇಕು ಎಂದರು.

ಗ್ಯಾರಂಟಿ ಯೋಜನೆ ಸಫಲವಾಗಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಯುರಿ: ಸಚಿವ ಸಂತೋಷ್ ಲಾಡ್‌

ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸ್ವಾಗತಿಸಿದರು. ಗೌರವಾಧ್ಯಕ್ಷ ರಮೇಶ ಲಿಂಗದಾಳ ನಿರೂಪಿಸಿದರು. ಕಾರ್ಯದರ್ಶಿ ಮಂಜುನಾಥ ಯಡಳ್ಳಿ ವಂದಿಸಿದರು. ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ದೇವಿದಾಸ ಶಾಂತಿಕರ, ಮಲ್ಲಿಕಾರ್ಜುನ ಸೊಲಗಿ, ರಾಜಶೇಖರ ಬಾಣದ, ಗಿರೀಶ ಚೌಡಕಿ, ಲಕ್ಷ್ಮಣ ರಜಪೂತ, ಸುರೇಶ ಜಟ್ಟೆನ್ನವರ ಮತ್ತಿತರರು ಇದ್ದರು.

click me!