ಸಂಸತ್‌ ಕಲಾಪ ಬಿಕ್ಕಟ್ಟು ಅಂತ್ಯಕ್ಕೆ ವಿಪಕ್ಷ ಸಂಧಾನ ಸೂತ್ರ

Published : Aug 04, 2023, 09:12 AM ISTUpdated : Aug 04, 2023, 09:36 AM IST
ಸಂಸತ್‌ ಕಲಾಪ ಬಿಕ್ಕಟ್ಟು ಅಂತ್ಯಕ್ಕೆ ವಿಪಕ್ಷ ಸಂಧಾನ ಸೂತ್ರ

ಸಾರಾಂಶ

ಸಂಸತ್ ಕಲಾಪದಲ್ಲಿ ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳಿಗೆ ಒಪ್ಪಿಗೆಯಾಗಬಹುದಾದ ಸಂಧಾನ ಸೂತ್ರವೊಂದನ್ನು ಪಕ್ಷದ ಮುಂದಿಟ್ಟಿದ್ದು, ಅದಕ್ಕೆ ಸರ್ಕಾರ ಒಪ್ಪಿದರೆ ಸುಗಮ ಕಲಾಪ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ. 

ನವದೆಹಲಿ: ಜು.20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ದಿನದಿಂದಲೂ ಮಣಿಪುರ ಹಿಂಸಾಚಾರ ವಿಷಯ ಮುಂದಿಟ್ಟುಕೊಂಡು ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮತ್ತು ಸರ್ಕಾರದ ಬಿಗಿಪಟ್ಟು ಹಿನ್ನೆಲೆಯಲ್ಲಿ ಸಂಧಾನ ಸೂತ್ರವೊಂದನ್ನು ಮುಂದಿಡಲಾಗಿದೆ. ಕಲಾಪ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಎರಡೂ ಬಣಗಳಿಗೆ ಒಪ್ಪಿಗೆಯಾಗಬಹುದಾದ ಸಂಧಾನ ಸೂತ್ರವೊಂದನ್ನು ಪಕ್ಷದ ಮುಂದಿಟ್ಟಿದ್ದು, ಅದಕ್ಕೆ ಸರ್ಕಾರ ಒಪ್ಪಿದರೆ ಸುಗಮ ಕಲಾಪ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ. ಇದರಿಂದ ಮತ್ತೆ ಕಲಾಪ ಸುಗಮಗೊಳ್ಳಬಹುದು ಎಂಬ ಆಶಾಭಾವನೆ ಉಂಟಾಗಿದೆ.

ಬಿಕ್ಕಟ್ಟು ಏಕೆ?:

150ಕ್ಕೂ ಹೆಚ್ಚು ಜನರ ಬಲಿ ಪಡೆದ ಮಣಿಪುರ ಹಿಂಸಾಚಾರ (Manipur violence) ಕುರಿತು ಸಂಸತ್ತಿನಲ್ಲಿ 276ನೇ ನಿಯಮದ ಅನ್ವಯದ (ಎಲ್ಲ ಕಲಾಪ ಬದಿಗೊತ್ತಿ ಒಂದೇ ವಿಷಯದ ಚರ್ಚೆ) ಚರ್ಚೆ ನಡೆಸಬೇಕು. ಹಿಂಸಾಚಾರದ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಸ್ತೃತ ಹೇಳಿಕೆ ನೀಡಬೇಕು ಎಂಬುದು ವಿಪಕ್ಷಗಳ ಪಟ್ಟು. ಈ ನಿಯಮದ ಅನ್ವಯ, ಪೂರ್ವ ನಿಗದಿತ ಎಲ್ಲಾ ವಿಷಯಗಳನ್ನು ಬದಿಗೊತ್ತಿ ಅನಿಯಂತ್ರಿತವಾಗಿ ಮಣಿಪುರ ವಿಷಯದ ಚರ್ಚೆಗೆ ಸರ್ಕಾರ ಅವಕಾಶ ಕಲ್ಪಿಸಬೇಕಾಗುತ್ತದೆ.

ಮಣಿಪುರ ಸಂಘರ್ಷದಿಂದ 14000 ವಿದ್ಯಾರ್ಥಿಗಳ ಸ್ಥಳಾಂತರ: ಕೇಂದ್ರ ಮಾಹಿತಿ

ಆದರೆ ಸರ್ಕಾರ, 176ನೇ ನಿಯಮದ ಅನ್ವಯ (ಕೇವಲ 2.5 ತಾಸಿನ ಚರ್ಚೆ) ಚರ್ಚೆಗೆ ಸಿದ್ಧ. ಹಿಂಸಾಚಾರದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಸ್ತೃತ ಮಾಹಿತಿ ನೀಡಲಿದ್ದಾರೆ ಎಂದು ಪಟ್ಟು ಹಿಡಿದಿದೆ. ಈ ನಿಯಮದ ಅನ್ವಯ ಮಣಿಪುರ ವಿಷಯದ ಕುರಿತು ಅಲ್ಪಾವಧಿ ಚರ್ಚೆ ಮಾತ್ರ ಸಾಧ್ಯವಾಗುತ್ತದೆ. ಉಭಯ ಬಣಗಳ ಬಿಗಿಪಟ್ಟಿನಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ ಮೊದಲ ದಿನದಿಂದಲೂ ಸುಗಮ ಕಲಾಪಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ನಾಯಕರಾದ ಪಿಯೂಷ್‌ ಗೋಯಲ್‌ (Piyush Goyal) ಮತ್ತು ಪ್ರಹ್ಲಾದ್‌ ಜೋಶಿ, ಗುರುವಾರ ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರನ್ನು ಭೇಟಿ ಮಾಡಿ ಬಿಕ್ಕಟ್ಟು ಇತ್ಯರ್ಥದ ಪ್ರಯತ್ನ ಮಾಡಿದ್ದಾರೆ.

ಈ ವೇಳೆ, ‘ನಿಯಮ 276 ಬೇಡ, 176 ಬೇಡ, ಅದರ ಬದಲಾಗಿ ಮತದಾನಕ್ಕೆ ಅವಕಾಶ ಕಲ್ಪಿಸುವ 167ನೇ ನಿಯಮದ (ಚರ್ಚೆ ಬಳಿಕ ಮತದಾನಕ್ಕೆ ಅನುವು ಮಾಡುವ ನಿಯಮ) ಅನ್ವಯ ಚರ್ಚೆ ನಡೆಸೋಣ’ ಎಂಬ ಪ್ರಸ್ತಾಪವನ್ನು ಕಾಂಗ್ರೆಸ್‌ ನಾಯಕರು ಮುಂದಿಟ್ಟಿದ್ದಾರೆ. ಆದರೆ ಸ್ವತಃ ಪ್ರಧಾನಿಯೇ ಹೇಳಿಕೆ ನೀಡಬೇಕು ಮತ್ತು ರಾಜ್ಯಸಭೆಯಲ್ಲಿ ಅನಿಯಂತ್ರಿತ ಚರ್ಚೆಗೆ ಅವಕಾಶ ನೀಡಬೇಕು ಎಂಬ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಮಣಿಪುರ ಪೊಲೀಸರಿಗೆ ಸುಪ್ರೀಂ ಹಿಗ್ಗಾಮುಗ್ಗಾ ಚಾಟಿ: ತನಿಖೆಗೆ ಎಸ್‌ಐಟಿ/ಜಡ್ಜ್‌ ಸಮಿತಿ ನೇಮಕದ ಸುಳಿವು

ಆದರೆ ಪ್ರಧಾನಿ ಮೋದಿಯೇ ಹೇಳಿಕೆ ನೀಡಬೇಕು ಎಂಬ ವಿಷಯವನ್ನು ಒಪ್ಪಲು ಸರ್ಕಾರ ಕೂಡಾ ನಿರಾಕರಿಸಿದೆ. ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರಿಸುತ್ತಾರೆ ಎಂದು ಸಚಿವರು ಹೇಳಿದರು ಎನ್ನಲಾಗಿದೆ. ಆದರೂ ಒಂದು ವೇಳೆ ಸರ್ಕಾರ ಈ ಎರಡೂ ಪ್ರಸ್ತಾಪಗಳಿಗೆ ಒಪ್ಪಿದರೆ ಮಾತ್ರ ಸಂಸತ್‌ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಇದೆ.

 ಮುನಿಸು ಬಿಟ್ಟು ಮತ್ತೆ ಸದನಕ್ಕೆ ಸ್ಪೀಕರ್‌ ಬಿರ್ಲಾ

ನವದೆಹಲಿ: ವಿಪಕ್ಷ ಸಂಸದರು ತೋರಿದ ಅಗೌರವದಿಂದ ಬುಧವಾರ ಸದನದಿಂದ ಹೊರನಡೆದಿದ್ದ ಲೋಕಸಭಾ ಸ್ಪೀಕರ್‌ ಓಂಬಿರ್ಲಾ ಅವರು ಸಂಸದರು ಬಂದು ಕ್ಷಮೆ ಕೇಳಿದ ಬಳಿಕ ಗುರುವಾರ ತಮ್ಮ ಸ್ಥಾನಕ್ಕೆ ಮರಳಿದರು. ‘ಮುಂದೆ ಈ ರೀತಿಯ ಅಗೌರವ ತೋರುವುದಿಲ್ಲ ಹಾಗೂ ಕಲಾಪಕ್ಕೆ ಯಾವುದೇ ರೀತಿಯ ಅಡ್ಡಿ ತರುವುದಿಲ್ಲ’ ಎಂದು ವಿಪಕ್ಷ ಸಂಸದರು ಭರವಸೆ ನೀಡಿದರು ಹಾಗೂ ಕ್ಷಮೆ ಕೇಳಿದರು. ಬಳಿಕ ಸ್ಪೀಕರ್‌ ಗುರುವಾರ ತಮ್ಮ ಸ್ಥಾನಕ್ಕೆ ಮರಳಿದರು. ಬಿರ್ಲಾ ಮನವೊಲಿಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ, ವಿಪಕ್ಷ ನಾಯಕ ಅಧಿರ್‌ ರಂಜನ್‌ ಚೌಧರಿ ಸೇರಿ ಹಲವರು ಹೋಗಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!