ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾ ಸಭೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಡೆಯುತ್ತಿರುವ ಈ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿದೆ. ಇದರಲ್ಲಿ ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಈ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು(ಜು.18) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳು ಒಂದಾಗಿ ಈಗಾಗಲೇ ಮೈತ್ರಿ ಗಟ್ಟಿ ಮಾಡಿದೆ. ಪಾಟ್ನಾದ ಸಭೆ ಬಳಿಕ ಇದೀಗ ಬೆಂಗಳೂರಿನಲ್ಲಿ ನಿನ್ನೆಯಿಂದ 2 ದಿನದ ಸಭೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 26 ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024ರ ಚನಾವಣೆಗೆ ರಣತಂತ್ರ, ಮೋದಿ ಸೋಲಿಸಲು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಮಂತ್ರ, ಸಿದ್ಧಾಂತ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಇದೇ ಸಭೆಯಲ್ಲಿ ವಿಪಕ್ಷಗಳ ಒಕ್ಕೂಟಕ್ಕೆ ಹೊಸ ನಾಮಕರಣ ಮಾಡಲು ಚರ್ಚೆ ನಡೆದಿದೆ. ಹಲವು ನಾಯಕರು ವಿಪಕ್ಷ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ಚರ್ಚೆ ನಡೆಯುತ್ತಿದೆ. ಇಂಡಿಯಾ ಅಂದರೆ ಇಂಡಿಯನ್ ನ್ಯಾಶನಲ್ ಡೆಮಾಕ್ರಟಿಕ್ ಇನ್‌ಕ್ಲೂಸೀವ್ ಅಲಯನ್ಸ್ ಒಕ್ಕೂಟ.
ವಿಪಕ್ಷಗಳ ಒಕ್ಕೂಟಕ್ಕೆ ಹಲವು ಪಕ್ಷದ ನಾಯಕರು ಇಂಡಿಯಾ ಎಂದು ಹೆಸರಿಡಲು ಸೂಚಿಸಿದ್ದಾರೆ. ಈ ಕುರಿತು ಅಂತಿಮ ಹಂತದ ಚರ್ಚೆ ನಡೆಯುತ್ತಿದೆ. ಇಂಡಿಯಾ ಫುಲ್ ಫಾರ್ಮ್ ಇಲ್ಲಿದೆ.
I: Indian
N: National
D: Democractic
I: Inclusive
A: Alliance
United we stand: ಬೆಂಗಳೂರಲ್ಲಿ ವಿಪಕ್ಷಗಳ ಸಭೆ, ಬಿಜೆಪಿ ಸರಣಿ ಟ್ವೀಟ್ ಮೂಲಕ ಗುದ್ದು!
ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲು ಬಹುತೇಕ ಸದಸ್ಯ ಪಕ್ಷಗಳು ಒಪ್ಪಿಗೆ ಸೂಚಿಸಿದೆ. ಹೆಸರಿನಲ್ಲೇ ಭಾರತದ ಮತದಾರರನ್ನು ಸೆಳೆಯುವ ಶಕ್ತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲೇ ನಾಮಕರಣದ ಘೋಷಣೆ ಹೊರಬೀಳಲಿದೆ.
ಇಂಡಿಯಾ ಹೆಸರಿನ ಜೊತೆಗೆ ಪ್ರಮುಖವಾಗಿ ನಾಲ್ಕು ಹೆಸರುಗಳ ಕುರಿತು ಚರ್ಚೆಯಾಗಿದೆ. ಈ ಹೆಸರುಗಳ ಪೈಕಿ ಯುಪಿಎ 3 ಅನ್ನೋ ಹೆಸರು ಕೂಡ ಚರ್ಚೆಯಾಗಿದೆ. ಇಂಡಿಯಾ ಹೆಸರಿನ ಜೊತೆ ಚರ್ಚೆಯಾಗ ಇತರ ನಾಲ್ಕು ಹೆಸರುಗಳೆಂದರೆ;
ಪಿಡಿಎ: ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲೈನ್ಸ್
ಎನ್ ಪಿ ಎ: ನ್ಯಾಷನಲ್ ಪ್ರೊಗ್ರೆಸ್ಸಿವ್ ಅಲೈನ್ಸ್
ಐಡಿಎ : ಇಂಡಿಯಾ ಡೆಮಾಕ್ರಟಿಕ್ ಅಲೈನ್ಸ್
ಯುಪಿಎ-3:ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್
ಮೋದಿ ವಿರುದ್ಧ ವಿಪಕ್ಷಗಳ ಮಹಾಘಟಬಂಧನ್ ಅಸ್ತ್ರ: ಬೆಂಗಳೂರಿನಲ್ಲಿ 26 ಪಕ್ಷಗಳ ಸಭೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್ ಜೆ ಡಿ, ಜೆಎಮ್ ಎಮ್, ಎನ್ ಸಿಪಿ, ಶಿವಸೇನಾ(ಉದ್ಧವ್ ಠಾಕ್ರೆ), ಎಸ್ ಪಿ, ರಾಷ್ಟ್ರೀಯ ಲೋಕದಳ, ಅಪನಾ ದಳ್ (ಕಮೆರಾವಾಡಿ), ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ(ಎಮ್), ಸಿಪಿಐ , ಸಿಪಿಐ (ಎಮ್ ಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಮ್ ಡಿಎಂ ಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂ ಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ, ಎಮ್ ಎಮ್ ಕೆ (ಮಣಿತನೆಯ ಮಕ್ಕಳ್ ಕಚ್ಚಿ) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಮಣಿ), ಕೇರಳ ಕಾಂಗ್ರೆಸ್ (ಜೊಸೆಫ್) ಪಕ್ಷಗಳು ಇಂದಿನ ಸಭೆಯಲ್ಲಿ ಪಾಲ್ಗೊಂಡಿದೆ.