ಎನ್‌ಡಿಎ ಸೇರಲು ಆಹ್ವಾನ ಬಂದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jul 18, 2023, 2:20 AM IST
Highlights

ಎನ್‌ಡಿಎ ಜತೆ ಮೈತ್ರಿ ಕುರಿತಂತೆ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು/ಚನ್ನಪಟ್ಟಣ (ಜು.18): ಎನ್‌ಡಿಎ ಜತೆ ಮೈತ್ರಿ ಕುರಿತಂತೆ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಜತೆಗಿನ ಮೈತ್ರಿ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಇದನ್ನು ನೋಡುತ್ತಿದ್ದೇನೆ. 

ನಾನು ದೆಹಲಿಗೆ ಹೋಗುವ ಬಗ್ಗೆ ಯಾಕೆ ಈ ರೀತಿ ಸುದ್ದಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಮಹಾಘಟಬಂಧನ್‌ ಆಗಲಿ ಅಥವಾ ಎನ್‌ಡಿಎನಿಂದ ಆಗಲಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಒಂದು ವೇಳೆ ಆಹ್ವಾನ ಬಂದರೆ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ನಮ್ಮ ಪಕ್ಷದ ಜತೆ ಯಾವುದೇ ರೀತಿಯ ಮಾತುಕತೆ ಆಗಿಲ್ಲ. ಮಾತುಕತೆಯೇ ಆಗದಿದ್ದ ಮೇಲೆ ನಾವು ಬೇಡಿಕೆಗಳನ್ನು ಮುಂದಿಡುವ ವಿಚಾರ ಎಲ್ಲಿಂದ ಬರುತ್ತೆ ಎಂದು ಮರುಪ್ರಶ್ನೆ ಹಾಕಿದರು.

Latest Videos

ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ

ಬಿಜೆಪಿ ಪ್ರತಿಪಕ್ಷ ನಾಯಕರನ್ನು ಶೀಘ್ರ ಘೋಷಿಸಲಿ: ಆದಷ್ಟು ಬೇಗ ಬಿಜೆಪಿ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು. ‘ನಾನು ಬಿಜೆಪಿ ವರಿಷ್ಠರಿಗೆ ಸಲಹೆ ಕೊಡುವಷ್ಟುದೊಡ್ಡವನಲ್ಲ. ಆದರೆ, ಸರ್ಕಾರದ ವಿರುದ್ಧ ಸದನದಲ್ಲಿ ದೊಡ್ಡ ಹೋರಾಟದ ಅಗತ್ಯ. ನಾವೆಲ್ಲ ಪ್ರತಿಪಕ್ಷದಲ್ಲಿ ಇರುವುದರಿಂದ ಸಂಘಟಿತ ಹೋರಾಟದ ಅಗತ್ಯವಿದೆ’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಬಿಜೆಪಿ 66 ಸ್ಥಾನ ಗೆದ್ದಿದ್ದು, ಆ ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. 

ಯಾರಾದರನ್ನು ನೇಮಕ ಮಾಡಲಿ. ಇಷ್ಟು ದಿನ ಪ್ರತಿಪಕ್ಷ ಸ್ಥಾನವನ್ನು ಖಾಲಿ ಬಿಡುವುದು ಒಳ್ಳೆಯದಲ್ಲ. ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಾಗುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ನಾನು ಅವರ ಜತೆಯಲ್ಲೇ ಹೋರಾಟ ಮಾಡುತ್ತೇನೆ. ನಾವು ಎಲ್ಲರೂ ಸೋತು 2-3 ಕ್ಷೇತ್ರ ಮಾತ್ರ ಗೆದ್ದಾಗಲೇ ಧೃತಿಗೆಡಲಿಲ್ಲ. ಈಗ 19 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಈಗ ಹೆದರುತ್ತೇವೆಯಾ? ನಮ್ಮ ಮುಂದಿನ ನಡೆ ಏನು? ಯಾರ ಜತೆ ಸೇರಬೇಕು, ಬಿಡಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ರೈತರ ಆತ್ಮಹತ್ಯೆಗಿಂತ ಘಟಬಂಧನ್‌ ಚಿಂತೆ: ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಕುರಿತು ಚಿಂತೆ ಇಲ್ಲ. ಮಹಾಘಟಬಂದನ್‌ ರಚನೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೆ ಪಂಚತಾರಾ ಹೊಟೇಲ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮಹಾಘಟಬಂಧನ್‌ ಸಭೆ ಮಾಡುತ್ತಿದ್ದಾರೆ. 

ಸಾವರ್ಕರ್‌ ಪಾಠ ಹೊರಕ್ಕೆ, ಕಾಂಗ್ರೆಸ್‌ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಮುತಾಲಿಕ್‌

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಿ ವೆಸ್ಟ್‌ ಎಂಡ್‌ ಹೊಟೇಲ್‌ವರೆಗೂ ಕಟೌಟ್‌ಗಳು ರಾರಾಜಿಸುತ್ತಿವೆ. ಯಾರ ಸಮಾಧಿ ಮೇಲೆ ವಿಜೃಂಭಣೆಯಿಂದ ಈ ಸಭೆ ನಡೆಸಲಾಗುತ್ತಿದೆ? ರೈತರ ಸಮಾಧಿಯ ಮೇಲೆ ಈ ಸಮಾವೇಶವಾ ಎಂದು ಖಾರವಾಗಿ ಪ್ರಶ್ನಿಸಿದರು. ಇದೇ ವೇಳೆ ಕುಮಾರಸ್ವಾಮಿ ಅವರು ಸೋಮವಾರ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವ ‘ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!’ ಎಂಬ ಸುದ್ದಿಯ ಪತ್ರಿಕೆ ತುಣಕನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ.

click me!